ನಾನು ರಾಜ್ಯ ಸುತ್ತಿದ್ದೇನೆ, ಬೆಡ್ ಬ್ಲಾಕಿಂಗ್ ಕಂಡು ಬಂದಿಲ್ಲ: ಸಚಿವ ಶ್ರೀರಾಮುಲು
Team Udayavani, May 5, 2021, 5:13 PM IST
ಚಿತ್ರದುರ್ಗ: ಕೆಲವರು ಆಸೆಗೆ ಬಿದ್ದು ಪ್ರತಿ ವಿಚಾರದಲ್ಲಿ ವ್ಯಾಪಾರ ಮಾಡುತ್ತಾರೆ. ಜನರ ಸಾವಿನಲ್ಲೂ ಲಾಭ ಪಡೆದುಕೊಳ್ಳುವಂಥ ಮನುಷ್ಯರಿದ್ದಾರೆ. ಬೆಂಗಳೂರಿನಲ್ಲಿ ದೊಡ್ಡಮಟ್ಟದಲ್ಲಿ ನಡೆಯುತ್ತಿರಬಹುದು, ಆದರೆ ನಾನು ರಾಜ್ಯ ಸುತ್ತಿದ್ದೇನೆ, ಜಿಲ್ಲೆಗಳಲ್ಲಿ ಬೆಡ್ ಬ್ಲಾಕಿಂಗ್ ಕಂಡು ಬಂದಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಗೆ 7 ಸಾವಿರ ಕಿ.ಲೀ ಆಕ್ಸಿಜನ್ ಬೇಕೆಂದು ಮುಖ್ಯಮಂತ್ರಿಯರಲ್ಲಿ ಕೇಳಿದ್ದೇನೆ. ಇಲ್ಲಿ ಸದ್ಯ ಪ್ರತಿದಿನ 3 ಸಾಚಿರ ಕಿ.ಲೀಆಕ್ಸಿಜನ್ ಬೇಕಾಗುತ್ತಿದೆ. ಆಕ್ಸಿಜನ್ ಉತ್ಪಾದನೆ ಘಟಕ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಬಗ್ಗೆ ಸಚಿವ ಜಗದೀಶ ಶೆಟ್ಟರ್ ಜತೆಗೆ ಈ ಮಾತನಾಡಿ ಬೇಡಿಕೆ ಸಲ್ಲಿಸಿದ್ದೇನೆ ಎಂದರು.
ರೆಮಿಡಿಸಿವಿರ್ ಸಹ ಕೊರತೆ ಇದೆ. ರೆಮಿಡಿಸಿವಿರ್ ಕಾಳ ಸಂತೆಯಲ್ಲಿ ಮಾರಾಟದ ಬಗ್ಗೆ ಆರೋಪವಿದೆ. ಈ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಜತೆ ಮಾತಾಡಿದ್ದೇನೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಷಿಜನ್ ರಾಜ್ಯದ ಬಳಕೆಗೆ ಇರಲಿ: ಸಿದ್ದರಾಮಯ್ಯ ಆಗ್ರಹ
ಕೋವಿಡ್ ಪೀಡಿತರಿಗೆಹೋಂ ಐಸೊಲೆಷನ್ ಬದಲಾಗಿ ಹಾಸ್ಟಲ್ ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.
ವಿಪಕ್ಷದವರನ್ನು ಸಭೆಗೆ ಕರೆದು ಸಲಹೆ ಕೇಳಿದ್ದೇವೆ. ನಮ್ಮ ಬಳಿ ಬಂದಾಗ ಉತ್ತಮ ಕೆಲಸ ಮಾಡುತ್ತಿದ್ದೀರಿ ಅನ್ನುತ್ತಾರೆ ಆದರೆ ರಾಜಕೀಯ ಲಾಭಕ್ಕಾಗಿ ಸರ್ಕಾರ ಐಸಿಯುನಲ್ಲಿದೆ ಎಂದು ಹೇಳಿಕೆ ನೀಡುತ್ತಾರೆ ಎಂದು ವಿಪಕ್ಷದ ಟೀಕೆಗಳಿಗೆ ತಿರುಗೇಟು ನೀಡಿದರು.
ಚಾಮರಾಜನಗರ ಘಟನೆಯ ಬಗ್ಗೆ ಸರ್ಕಾರದ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಸಾವು ಎನ್ನುವುದು ಎಲ್ಲರಿಗೂ ಸಂಬಂಧಿಸಿದೆ, ದುರ್ಘಟನೆ ಬಗ್ಗೆ ಎಲ್ಲರೂ ಪ್ರಾಯಶ್ಚಿತ್ತ ಪಟ್ಟು ಮುಂದೆ ಇಂಥಹ ಘಟನೆ ಆಗದಂತೆ ಎಚ್ಚರ ವಹಿಸೋಣ ಎಂದರು.