ಚಿತ್ರದುರ್ಗಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್
Team Udayavani, Mar 4, 2020, 10:33 AM IST
ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಬುಧವಾರ ಬೆಳಗ್ಗೆ ನಗರದ ನೀಲಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಶಿವಮೊಗ್ಗ ಜಿಲ್ಲೆ ರಾಮಚಂದ್ರಾಪುರ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುವ ವೇಳೆ ಮಾರ್ಗ ಮಧ್ಯೆ ಚಿತ್ರದುರ್ಗಕ್ಕೆ ಭೇಟಿ ನೀಡಿದರು.
ನೀಲಕಂಠೇಶ್ವರ ದೇವರಿಗೆ ಅಭಿಷೇಕ, ಅಷ್ಟೋತ್ತರ, ಮಹಾ ಮಂಗಳಾರತಿ ಪಡೆದರು. ಈ ವೇಳೆ ಮೋದಿ ಸೇರಿದಂತೆ ಇಡೀ ಪರಿವಾರಕ್ಕೆ ದೇವರ ಅನುಗ್ರಹ ಬೇಡಿದರು ಎನ್ನಲಾಗಿದೆ.
ನೀಲಕಂಠೇಶ್ವರ ದೇವರ ದರ್ಶನದ ನಂತರ ನಗರದ ಪ್ರವಾಸಿ ಮಂದಿರಕ್ಕೆ ತೆರಳಿ ಉಪಹಾರ ಸೇವನೆ ಮಾಡಿದರು.
ಶಿವನ ದರ್ಶನವಾಗದೆ ನೀರೂ ಕುಡಿಯಲ್ಲ:
ಜಶೋದಾ ಬೆನ್ ಪ್ರತಿ ದಿನ ಬೆಳಗ್ಗೆ ಶಿವನ ದರ್ಶನ ಮಾಡದ ಹೊರತು ಒಂದು ಹನಿ ನೀರನ್ನೂ ಸೇವಿಸುವುದಿಲ್ಲವಂತೆ. ಜಶೋದಾ ಬೆನ್ ಜತೆ ಕಾರಿನಲ್ಲಿ ಆಗಮಿಸಿದವರು ದೇವಸ್ಥಾನದ ಎದುರು ಕಾರು ನಿಲುತ್ತಿದ್ದಂತೆ ಇದು ಶಿವನ ದೇವಸ್ಥಾನವಾ ಎಂದು ಖಚಿತಪಡಿಸಿಕೊಂಡರು. ನೀಲಕಂಠೇಶ್ವರ ದೇವಸ್ಥಾನ ಎಂದು ತಿಳಿಸಿದಾಗ, ಜಶೋದಾ ಅವರು ಶಿವನ ದರ್ಶನ ಮಾಡದೆ ಏನನ್ನೂ ಸೇವಿಸುವುದಿಲ್ಲ, ನೀರನ್ನೂ ಕುಡಿಯುವುದಿಲ್ಲ ಎಂದು ತಿಳಿಸಿದರು.
ದೇವರ ದರ್ಶನದ ನಂತರ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಜಶೋದಾ ಬೆನ್ ಉಪಹಾರ ಸೇವನೆಗೆ ಮುನ್ನಾ ಅರಳಿ ಮರಕ್ಕೆ ಪ್ರದಕ್ಷಿಣೆ ಮಾಡಲು ಪ್ರವಾಸಿ ಮಂದಿರದ ಆವರಣದಲ್ಲಿ ಮರಕ್ಕೆ ಹುಡುಕಾಡಿದರು. ಕೊನೆಗೆ ಪ್ರವಾಸಿ ಮಂದಿರದ ಹಿಂಭಾಗದಲ್ಲಿದ್ದ ಹತ್ತಿ ಮರಕ್ಕೆ ಕೈ ಮುಗಿದು ಉಪಹಾರ ಸೇವಿಸಿದರು.