ವಸತಿ ಯೋಜನೆ ಜಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ

•ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಅಸಮಾಧಾನ •ಎಸ್ಸಿ-ಎಸ್ಟಿ ಫಲಾನುಭವಿಗಳ ಮನೆ ನಿರ್ಮಾಣ ತ್ವರಿತಗೊಳ್ಳಲಿ

Team Udayavani, Jul 9, 2019, 10:35 AM IST

ಚಿತ್ರದುರ್ಗ: ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಚಿತ್ರದುರ್ಗ: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಗಳಡಿ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿತ ಸಮಯದಲ್ಲಿ ಬಳಕೆ ಮಾಡಬೇಕು. ಜಿಪಂ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಆವಾಸ್‌ ಎಸ್ಸಿ-ಎಸ್ಟಿ ವಸತಿ ರಹಿತ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಗುರಿ ನಿಗದಿ ಪಡಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಪರಿಶಿಷ್ಟ ಜಾತಿಯವರಿಗೆ 5659 ಮನೆಗಳ ನಿರ್ಮಾಣಕ್ಕೆ 103 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಇದುವರೆಗೆ 963 ಮನೆಗಳ ನಿರ್ಮಾಣ ಮಾತ್ರ ಪೂರ್ಣಗೊಂಡಿದ್ದು, 4696 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪರಿಶಿಷ್ಟ ಪಂಗಡದವರಿಗೆ 4500 ಮನೆಗಳ ನಿರ್ಮಾಣ ಕಾರ್ಯಕ್ಕೆ 84 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಸೂರು ರಹಿತ ಬಡವರಿಗೆ ಮನೆ ಕಲ್ಪಿಸಲು ಸರ್ಕಾರ ವಸತಿ ಯೋಜನೆ ರೂಪಿಸಿದೆ. ಯೋಜನೆಯ ಸಮರ್ಪಕ ಜಾರಿಗೆ ಅಧಿಕಾರಿಗಳು ಪ್ರಾಮಾಣಿಕ ಯತ್ನ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಯೋಜನಾ ನಿರ್ದೇಶಕ ಶಶಿಧರ, ವಸತಿ ಯೋಜನೆಯಡಿ ಫಲಾನುಭವಿಗೆ 1.70 ಲಕ್ಷ ರೂ. ಸಬ್ಸಿಡಿ ನೀಡಲಾಗುತ್ತಿದೆ. ಮನೆಗಳ ನಿರ್ಮಾಣ ಕಾರ್ಯದ ವಿವಿಧ ಹಂತಗಳಿಗೆ ಅನುಗುಣವಾಗಿ ಫಲಾನುಭವಿಗೆ ಅನುದಾನ ಮಂಜೂರಾಗುತ್ತದೆ. ಅಲ್ಲದೆ ಪ್ರತಿ ಫಲಾನುಭವಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 90 ದಿನಗಳ ಕೂಲಿ ಮೊತ್ತ ನೀಡಲಾಗುತ್ತಿದೆ. ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಲು ಗ್ರಾಪಂ ಪಿಡಿಒಗಳಿಗೆ ತಾಕೀತು ಮಾಡಲಾಗುವುದು ಎಂದರು.

ಹಿಂದುಳಿದ ಜಿಲ್ಲೆಗೆ 184 ಕೋಟಿ ರೂ. ಅನುದಾನ ನೀಡಿದ್ದರೂ ಅನುದಾನ ಬಳಕೆಗೆ ಪ್ರಾಮಾಣಿಕ ಯತ್ನ ಮಾಡದಿರುವುದು ಸಮಂಜಸವಲ್ಲ. ಯೋಜನೆಯ ಸಮರ್ಪಕ ಜಾರಿಗೆ ವಿಳಂಬ ಮಾಡುತ್ತಿರುವುದಕ್ಕೆ ವಿವರಣೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗೆ ನೋಟಿಸ್‌ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೃಷಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಕೃಷಿ ಸಂಸ್ಕರಣೆ ಘಟಕಕ್ಕಾಗಿ ಶೇ. 90 ರಷ್ಟು ಸಬ್ಸಿಡಿ ನೀಡುವ ಯೋಜನೆ ಇದೆ. ಇದುವರೆಗೂ 22 ಜನರು ಮಾತ್ರ ಯೋಜನೆಯ ಲಾಭ ಪಡೆದಿದ್ದಾರೆ. ಹೆಚ್ಚಿನ ರೈತರು ಆಸಕ್ತಿ ತೋರುತ್ತಿಲ್ಲ, ಹೀಗಾಗಿ ಹೆಚ್ಚು ಬೇಡಿಕೆ ಇರುವ ಟಾರ್ಪಾಲಿನ್‌ ವಿತರಣೆಗೆ ಬಳಸಲಾಗಿದ್ದು, 2675 ಜನರಿಗೆ ವಿತರಣೆ ಮಾಡಲಾಗಿದೆ. ಕೃಷಿ ಯಂತ್ರೋಪಕರಣ ಯೋಜನೆಯಡಿ 762 ಫಲಾನುಭವಿಗಳಿಗೆ ಕೃಷಿ ಪರಿಕರ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನವರ್‌ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಟಾರ್ಪಾಲಿನ್‌ ವಿತರಣೆಗೆ ಹೆಚ್ಚು ಆದ್ಯತೆ ನೀಡಿರುವುದು ಸರಿಯಲ್ಲ. ಜನರ ಮನವೊಲಿಸಿ ಕೃಷಿ ಸಂಸ್ಕರಣೆ ಘಟಕದ ಯೋಜನೆ ಬಳಸಿಕೊಳ್ಳಲು ಅರಿವು ಮೂಡಿಸಬೇಕು ಎಂದರು.

ಒಂದು ಕುಟುಂಬದಲ್ಲಿ ಎರಡು ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್‌ ಯೋಜನೆಯ ಸೌಲಭ್ಯ ಮಂಜೂರಾತಿಗೆ ಅವಕಾಶವಿದ್ದು, ಜಿಲ್ಲೆಯಲ್ಲಿ 89,350 ನೋಂದಣಿಯಾಗಿವೆ. ಬಹುತೇಕ ಫಲಾನುಭವಿಗಳಿಗೆ ಬಾಂಡ್‌ ವಿತರಣೆ ಮಾಡಲಾಗಿದ್ದು, 8 ಸಾವಿರ ಬಾಂಡ್‌ ವಿತರಿಸುವುದು ಬಾಕಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯಕ್‌ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಪರಿಶಿಷ್ಟ ಪಂಗಡದ ಜಿಲ್ಲಾ ಕಲ್ಯಾಣಾಧಿಕಾರಿ ಜೆ. ರಾಜು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ