ಭಾರೀ ಮಳೆಯಿಂದ ಕೋಟೆ ನಗರಿಯಲ್ಲಿ ಅಪಾರ ಹಾನಿ

Team Udayavani, Oct 3, 2017, 5:53 PM IST

ಚಿತ್ರದುರ್ಗ: ಗುಡುಗು, ಮಿಂಚು ಸಹಿತ ನಗರದಾದ್ಯಂತ ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗಿದೆ. ಅಲ್ಲದೆ ಯುಜಿಡಿ ನಿರ್ಮಾಣಕ್ಕಾಗಿ ಅಗೆಯಲಾಗಿದ್ದ ರಸ್ತೆಯೂ ಹಾಳಾಗಿದೆ. ರಸ್ತೆಗೆ ಹಾಕಲಾಗಿದ್ದ ಡಾಂಬರ್‌ ಕಿತ್ತು ಹೋಗಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ನಗರದ ಬಹುತೇಕ ತಗ್ಗು ಪ್ರದೇಶಗಳ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಓಡಾಟಕ್ಕೆ ಸಮಸ್ಯೆ ಉಂಟಾಗಿದೆ. ಚಿತ್ರದುರ್ಗ ನಗರದ ಹೊರವಲಯದ ವಿದ್ಯಾನಗರ, ತುರುವನೂರು ರಸ್ತೆ ಸಮೀಪದ ಕೆಇಬಿ ಎಂಯುಎಸ್‌ಎಸ್‌
ಸ್ಟೇಷನ್‌ ಸಮೀಪದ ಬಡಾವಣೆಗಳಿಗೆ ನೀರುನುಗ್ಗಿತ್ತು.

ರಾಷ್ಟ್ರೀಯ ಹೆದ್ದಾರಿ-4ರ ಸರ್ವೀಸ್‌ ರಸ್ತೆ ಪಕ್ಕದಲ್ಲಿ ಬಾಕ್ಸ್‌ ಚರಂಡಿ ನಿರ್ಮಿಸಲಾಗಿದ್ದು ಹೆದ್ದಾರಿ ಪ್ರಾಕಾರದ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯದಿಂದಾಗಿ ಚರಂಡಿ ಕಟ್ಟಿಕೊಂಡಿದೆ. ನೀರು ಹೊರ ಹೋಗಲು ಎಲ್ಲೂ ಸ್ಥಳಾವಕಾಶ ಇಲ್ಲದೆ ಇರುವುದರಿಂದ ತಗ್ಗುಪ್ರದೇಶಕ್ಕೆ ರಸ್ತೆಯ ನೀರು ನುಗ್ಗಿ ಸಾಕಷ್ಟು ನಷ್ಟ ಉಂಟು ಮಾಡಿದೆ.

ಗುಡುಗು ಸಹಿತ ಸುರಿದ ಮಳೆಗೆ ಬಹುತೇಕ ರಸ್ತೆಗಳು ಕೊಚ್ಚೆ ಹೋಗಿದ್ದು, ಬಹುತೇಕ ಚರಂಡಿಗಳು ಮುಚ್ಚಿ ಹೋಗಿ ರಸ್ತೆಯ ಮೇಲೆ ಮಳೆ ನೀರು ತುಂಬಿದೆ. ನಗರದ ಮುಖ್ಯ ರಸ್ತೆಯಲ್ಲೂ (ಬಿ.ಡಿ. ರಸ್ತೆ) ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆ ತುಂಬೆಲ್ಲಾ ನೀರು ನಿಂತು ಸಾಕಷ್ಟು ದ್ವಿಚಕ್ರ ವಾಹನಗಳು ನೀರಿನಲ್ಲೇ ಮುಳುಗಿ ಹೋಗಿದ್ದವು. ಜತೆಗೆ ಎಲ್ಲ ರಸ್ತೆಗಳಲ್ಲಿ ಮಣ್ಣು, ಮರಳು, ಕಸ, ಕಡ್ಡಿ, ಘನ ತ್ಯಾಜ್ಯ ವಸ್ತುಗಳು ತುಂಬಿರುವುದರಿಂದ ವಾಹನ ಚಾಲಕರಿಗೆ, ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ.

ನಗರದ ಪ್ರಮುಖ ರಸ್ತೆಯಾದ ಬಿ.ಡಿ. ರಸ್ತೆ, ಚಳ್ಳಕೆರೆ ವೃತ್ತ, ಐಯುಡಿಯುಪಿ ಲೇಔಟ್‌ ಮುಖ್ಯ ರಸ್ತೆ, ಡಿಪೋ ರಸ್ತೆ, ತಹಶೀಲ್ದಾರ್‌ ಕಚೇರಿ ರಸ್ತೆ, ಜೆಸಿಆರ್‌ ಬಡಾವಣೆ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳಿಗೆ ಹಾಕಲಾದ ಡಾಂಬರ್‌ ಕಿತ್ತು ಹೋಗಿ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದಾಗಿ ಗುಂಡಿ ಬಿದ್ದಿರುವ ಡಾಂಬರ್‌ ರಸ್ತೆಯಲ್ಲಿ
ಸಂಚರಿಸುವುದು ವಾಹನ ಸವಾರರಿಗೆ ದುಸ್ತರವಾಗುತ್ತಿದೆ.

ರಾಜ ಕಾಲುವೆಗಳ ಒತ್ತುವರಿ ಮತ್ತು ಚರಂಡಿಗಳನ್ನು ಸ್ವತ್ಛಗೊಳಿಸದ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದಾಗಿ ರಸ್ತೆಯಲ್ಲೇ ನೀರು ಹರಿಯುತ್ತದೆ. ಜತೆಗೆ ಪಕ್ಕದಲ್ಲಿನ ಮಣ್ಣು ಸಹ ರಸ್ತೆಗೆ ಬರುತ್ತದೆ ಎಂದು ನಾಗರಿಕರು ದೂರಿದ್ದಾರೆ.

ಮಳೆಯಿಂದಾಗಿ ಮತ್ತು ಕಳಪೆ ಕಾಮಗಾರಿಯಿಂದಾಗಿ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ನಗರದಲ್ಲಿ ಗುಂಡಿಗಳಿಲ್ಲದ, ಕಲ್ಲು, ಮಣ್ಣು, ಕಸ, ಕಡ್ಡಿಯಿಲ್ಲದ ರಸ್ತೆ ಕಾಣುವುದೇ ಅಪರೂಪವಾಗಿದೆ. ರಸ್ತೆಯಲ್ಲಿ ತಗ್ಗು, ಗುಂಡಿ, ರಸ್ತೆ ತಡೆಗಳಿಂದ ತುಂಬಿರುವ ರಸ್ತೆಗಳಲ್ಲಿ ವಾಹನಗಳನ್ನು ಓಡಿಸಲು ಬಲು ಪ್ರಯಾಸಪಡಬೇಕಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ