ಯಡಿಯೂರಪ್ಪ ವಿರುದ್ಧ ತನಿಖೆಗೆ ಆಗ್ರಹ

Team Udayavani, Feb 11, 2019, 9:47 AM IST

ಚಿತ್ರದುರ್ಗ: ಅಧಿಕಾರ ಲಾಲಸೆಯಿಂದ ಸಂವಿಧಾನ ವಿರೋಧಿ ನಡೆಯ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿರುವ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಕಾಂಗ್ರೆಸ್‌ ಶಾಸಕರ ಖರೀದಿಗೆ ಮುಂದಾಗಿದ್ದಾರೆ. ಶಾಸಕರಿಗೆ ಕೋಟ್ಯಂತರ ರೂ. ಎಲ್ಲಿಂದ, ಹೇಗೆ ಬಂದಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಯಾರು ದುಡ್ಡು ಕೊಟ್ಟರು, ಬಿಜೆಪಿ ಪಕ್ಷ ನೀಡಿತೇ, ಕೇಂದ್ರ ಸರ್ಕಾರದಿಂದ ನೀಡಲಾಗಿದೆಯೆ ಅಥವಾ ಯಾವುದಾರರೂ ಡೀಲ್‌ ಮೂಲಕ ಹಣ ಸಂಗ್ರಹ ಮಾಡಲಾಗಿದೆಯೆ ಎನ್ನುವ ಸತ್ಯವನ್ನು ಮೋದಿ ಮತ್ತು ಅಮಿತ್‌ ಶಾ ಜನರ ಮುಂದಿಡಬೇಕು. ಅನ್ಯ ಪಕ್ಷಗಳ ಶಾಸಕರ ಖರೀದಿ ಮುಂದಾಗಿರುವ ಅಕ್ರಮಗಳು ಹೊರ ಬರಬೇಕಾದರೆ ಯಡಿಯೂರಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿಲ್ಲ. ಆದರೂ ಸರ್ಕಾರ ರಚಿಸಲು ಅವಕಾಶ ಪಡೆದುಕೊಂಡು ಬಹುಮತ ಸಾಬೀತು ಮಾಡದೆ ವಿಧಾನಸೌಧದಿಂದ ಹೊರನಡೆದ ಯಡಿಯೂರಪ್ಪ, ಅಧಿಕಾರಕ್ಕಾಗಿ ಹಪಹಪಿಸಿ ಹತಾಶರಾಗಿದ್ದಾರೆ. ಸಂವಿಧಾನ ವಿರೋಧಿ ನೀತಿ ಅನುಸರಿಸುವ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿರುವ ಅವರು ಸ್ಥಿರವಾಗಿರುವ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಪದೇ ಪದೇ ಅಸ್ಥಿರಗೊಳಿಸಲು ಮತ್ತು ಉರುಳಿಸುವ ಪ್ರಯತ್ನ ಮಾಡುತ್ತಾ ರಾಜ್ಯದ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಇದೇ ರೀತಿಯ ವಾಮಮಾರ್ಗ ಅನುಸರಿಸಿದ ಯಡಿಯೂರಪ್ಪ ಮಾಡಬಾರದ ಅಕ್ರಮ, ಹಗರಣ, ಲಂಚ ಪಡೆದು ಜೈಲಿಗೆ ಹೋಗಿ ಬಂದಿದ್ದರು. ಆದರೂ ಬುದ್ಧಿ ಕಲಿತಂತೆ ಕಾಣುತ್ತಿಲ್ಲ ಎಂದು ಕುಟುಕಿದರು.

ರಾಜ್ಯದಲ್ಲಿ ಅನೇಕ ಸಮಸ್ಯೆಗಳಿದ್ದು, ಪ್ರತಿಪಕ್ಷ ನಾಯಕರಾಗಿ ಯಡಿಯೂರಪ್ಪ ಅವರು ಸರ್ಕಾರದೊಂದಿಗೆ ಸಹಕಾರ ನೀಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು. ಆದರೆ ಸರ್ಕಾರವನ್ನು ಟೀಕಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ಮುಖಂಡರಲ್ಲಿ ಯಾವುದೇ ಗೊಂದಲಗಳಿಲ್ಲದಿದ್ದರೂ ಕಾಂಗ್ರೆಸ್‌ ಶಾಸಕರು ನಮ್ಮೊಂದಿಗಿದ್ದಾರೆ, ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳುತ್ತಾರೆ ಎಂದು ಊಹಾಪೋಹ ಹರಿಬಿಟ್ಟು ಸಾರ್ವಜನಿಕರಲ್ಲಿ ಸರ್ಕಾರದ ಬಗ್ಗೆ ಅಪನಂಬಿಕೆ ಬರುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್‌, ಸಂಪತ್‌ಕುಮಾರ್‌, ನಜ್ಮಾ, ಮೋಕ್ಷಾ ರುದ್ರಸ್ವಾಮಿ, ಅಲ್ಲಾಭಕ್ಷ್, ಪ್ರಕಾಶ್‌, ಸಯ್ಯದ್‌ ಖುದ್ದೂಸ್‌, ರೆಹಮಾನ್‌, ಪ್ರಕಾಶ್‌ ಲಮಾಣಿ, ಇಮ್ತಿಯಾಜ್‌, ಅಜ್ಜಪ್ಪ, ವಾಸೀಂ, ಮೆಹಬೂಬ್‌ ಖಾನ್‌ ಮತ್ತಿತರರು ಭಾಗವಹಿಸಿದ್ದರು.

ಶಾಸಕ ಸ್ಥಾನದಿಂದ ಅನರ್ಹಗೊಳಿಸಿ
ಜೆಡಿಎಸ್‌ ಶಾಸಕ ನಾಗನಗೌಡ ಅವರ ಪುತ್ರ ಶರಣ ಗೌಡ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಆಮಿಷವೊಡ್ಡಿರುವುದು ಜಗಜ್ಜಾಹೀರಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವಿಧಾನಸಭಾಧ್ಯಕ್ಷರು ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಹೆಸರಿಗೂ ಮಸಿ ಬಳಿಯುವ ಕೆಲಸ ಮಾಡುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಪ್ರತಿನಿತ್ಯ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿರುವ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ವಿರುದ್ಧ ಕೂಡಲೇ ರಾಜ್ಯಪಾಲರು ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.


ಈ ವಿಭಾಗದಿಂದ ಇನ್ನಷ್ಟು

  • ಸಿರಿಗೆರೆ: ಆಡಂಬರದ ಮದುವೆ ಮಾಡುವ ಸಂಭ್ರಮದಲ್ಲಿ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕುವವರೇ ಹೆಚ್ಚು. ಸಾಲ ಹಾಗೂ ಬಡ್ಡಿಯನ್ನೂ ತೀರಿಸಲಾಗದೆ ಒದ್ದಾಡುವಂತಹ ಪರಿಸ್ಥಿತಿ...

  • ಚಳ್ಳಕೆರೆ: ನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಸೌಲಭ್ಯ ಒದಗಿಸಲು ನಗರಸಭೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. 3 ಕೋಟಿ...

  • ಚಿತ್ರದುರ್ಗ: ಜಿಲ್ಲೆಯ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌ ಹೇಳಿದರು. ಜಿಲ್ಲಾಡಳಿತ,...

  • ಸಿದ್ಧಗಂಗಾ ಶಿವಶಂಕರ್‌ ಹಿರಿಯೂರು: ಬರೋಬ್ಬರಿ 9 ವರ್ಷಗಳ ಬಳಿಕ ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ 100 ಅಡಿ ನೀರು ಹರಿದು ಬಂದಿದೆ. ಜಲಾಶಯದ ಕೋಡಿ ಮಟ್ಟ 130 ಅಡಿ...

  • „ಶಿವರಾಜ ಕೆಂಭಾವಿ ಲಿಂಗಸುಗೂರು: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಗಣನೀಯವಾಗಿ ಕುಸಿದ ಪರಿಣಾಮ ಫಲಿತಾಂಶ ಹೆಚ್ಚಳಕ್ಕೆ ಪಣ ತೊಟ್ಟಿರುವ ಶಿಕ್ಷಣ ಇಲಾಖೆ...

ಹೊಸ ಸೇರ್ಪಡೆ