ಶಾಲಾ ಸಂಸತ್‌ ಚುನಾವಣೆಯಲ್ಲೂ ನೋಟಾ!

Team Udayavani, Jul 12, 2019, 3:25 PM IST

ಚಿತ್ರದುರ್ಗ: ಶಾಲಾ ಸಂಸತ್‌ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಚಿತ್ರದುರ್ಗ: ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ನೋಟಾ ಚಲಾಯಿಸುವ ಹಕ್ಕು ಪಡೆದಂತೆ ಶಾಲಾ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಮಕ್ಕಳಿಗೂ ನೋಟಾ ಚಲಾಯಿಸುವ ಹಕ್ಕು ನೀಡಲಾಯಿತು.

ತಾಲೂಕಿನ ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಶಾಲಾ ಸಂಸತ್‌ ಚುನಾವಣೆ, ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ನಡೆದಿದ್ದು ವಿಶೇಷವಾಗಿತ್ತು. ಚುನಾವಣೆಗೆ ಇವಿಎಂ ಬಳಸಲಾಯಿತು. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಉಮೇದುವಾರಿಕೆ ಹಿಂದಕ್ಕೆ ಪಡೆಯುವುದು, ಚುನಾವಣಾ ಪ್ರಚಾರ, ಮತದಾನದ ದಿನಾಂಕ, ಮತ ಎಣಿಕೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಕ್ರಮಬದ್ಧವಾಗಿ ನಡೆದವು. ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕರುಗಳಾದ ಮಂಜುನಾಥ್‌, ನಟರಾಜ್‌, ಕರಿಬಸಪ್ಪ ಕಾರ್ಯನಿರ್ವಹಿಸಿದರು. ಪ್ರತಿ ವಿದ್ಯಾರ್ಥಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಗುರುತಿನ ಚೀಟಿ, ಮತದಾನದ ಅಧಿಕಾರಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿ ವಿತರಿಸಲಾಯಿತು.

ಮತದಾನ ಕೇಂದ್ರದಲ್ಲಿ ಗುರುತಿನ ಚೀಟಿಯೊಂದಿಗೆ ಸರತಿ ಸಾಲಿನಲ್ಲಿ ಬಂದ ವಿದ್ಯಾರ್ಥಿಗಳು ಸಹಿ ಹಾಕಿ ಬ್ಯಾಲೆಟ್ ಪಡೆದು ಇವಿಎಂನಲ್ಲಿ ಮತ ಚಲಾಯಿಸಿದರು. ಮತದಾನ ಮಾಡುವುದಕ್ಕೂ ಮುನ್ನ ಎಡಗೈ ತೋರುಬೆರಳಿಗೆ ಅಳಿಸಲಾಗದಂತ ಮಸಿ ಗುರುತು ಹಾಕಲಾಯಿತು. ಮತದಾನ ಮುಗಿದ ನಂತರ ಮತದಾನದ ಲೆಕ್ಕಪತ್ರ, ಇವಿಎಂ ಯಂತ್ರ ಮತ್ತಿತರ ಸಾಮಾಗ್ರಿ ಗಳನ್ನು ಚುನಾವಣಾ ಆಯುಕ್ತರುಗಳಾದ ಚಿತ್ರಲಿಂಗಪ್ಪ, ನಾಗರಾಜ್‌ ಪಡೆದುಕೊಂಡರು. ಅಭ್ಯರ್ಥಿಗಳ ಸಮಕ್ಷಮದಲ್ಲಿ ಶಿಕ್ಷಕರುಗಳಾದ ಮಂಜಪ್ಪ, ಸಿದ್ದಪ್ಪ ಅವರು ಮತ ಎಣಿಕೆ ನಡೆಸಿ ವಿಜೇತ ಅಭ್ಯರ್ಥಿಗಳ ಹೆಸರು ಘೋಷಿಸಿದರು. ಪ್ರಧಾನಮಂತ್ರಿಯಾಗಿ ಹತ್ತನೇ ತರಗತಿಯ ಮಲ್ಲಿಕಾರ್ಜುನ ಆಯ್ಕೆಯಾದರು. ಮುಖ್ಯ ಶಿಕ್ಷಕ ಮಹೇಶ್‌ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಿ ಶಾಲಾ ಸಂವಿಧಾನಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿ ಅಭಿನಂದಿಸಿದರು. ಗ್ರಾಮ ಪಂಚಾಯತ್‌ ಸದಸ್ಯರು, ±ಪೋಷಕರು ಹಾಗೂ ಗ್ರಾಮಸ್ಥರು ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ