ನಿಲುವೇ ಇಲ್ಲದ ವ್ಯಕ್ತಿತ್ವದಿಂದ ಪ್ರಗತಿ ಅಸಾಧ್ಯ: ಶಿಮುಶ

ಸಂಪ್ರದಾಯದ ವಿರುದ್ಧ ನಿಂತು ಸಮ ಸಮಾಜ ನಿರ್ಮಾಣ ಮಾಡುವುದೇ ನಿಜವಾದ ಗಟ್ಟಿ ನಿಲುವು

Team Udayavani, Jul 7, 2019, 3:45 PM IST

ಚಿತ್ರದುರ್ಗ: 'ಶರಣ ಸಂಗಮ' ಕಾರ್ಯಕ್ರಮದಲ್ಲಿ ಬಿಎ ಪದವಿ ಪರೀಕ್ಷೆಯಲ್ಲಿ ದಾವಣಗೆರೆ ವಿವಿಗೆ ಐದನೇ ರ್‍ಯಾಂಕ್‌ ಪಡೆದ ಹೇಮಲತಾ ಅವರನ್ನು ಡಾ| ಶಿವಮೂರ್ತಿ ಮುರುಘಾ ಶರಣರು ಸನ್ಮಾನಿಸಿದರು.

ಚಿತ್ರದುರ್ಗ: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವದ ಒಳಗಡೆ ವಿಚಾರಗಳಿರಬೇಕು. ಆ ವಿಚಾರಗಳು ಗಟ್ಟಿ ನಿರ್ಧಾರಗಳಾಗಬೇಕು. ಆ ನಿರ್ಧಾರಗಳೇ ನಿಲುವುಗಳಾಗಿದ್ದು, ಇವು ಸಮುದಾಯದ ಮೇಲೆ ಪ್ರಭಾವ ಬೀರುವಂಥವು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿನ ಮುರುಘಾ ಮಠದ ಬಸವ ಕೇಂದ್ರ, ಎಸ್‌ಜೆಎಂ ಪಾಲಿಟೆಕ್ನಿಕ್‌ ಸಂಯುಕ್ತಾಶ್ರಯದಲ್ಲಿ ನಡೆದ ‘ವ್ಯಕ್ತಿಯ ನಿಲುವು: ಸಮುದಾಯದ ಗೆಲುವು’ ಚಿಂತನ ವಿಷಯಾಧಾರಿತ ‘ಶರಣ ಸಂಗಮ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಇಂದು ನಿಲುವುಗಳೇ ಇಲ್ಲದ ವ್ಯಕ್ತಿತ್ವಗಳು ಬಹಳಷ್ಟಿವೆ. ಜನ ಸಮುದಾಯ ಮಾರ್ಗದರ್ಶಿಸುವ ಶಕ್ತಿ, ಒಬ್ಬ ವ್ಯಕ್ತಿಯ ನಿಲುವುಗಳಲ್ಲಿ ಸಾಧ್ಯ. ನಿಲುವುಗಳು ವೈಯಕ್ತಿಕವಾದರೆ ಪರಿಣಾಮ ಸಾರ್ವತ್ರಿಕ. ಬಸವಣ್ಣನ ನಿಲುವು ಸಮ ಸಮಾಜ ನಿರ್ಮಾಣವಾಗಿತ್ತು. ಎಲ್ಲರ ಬದುಕಿನಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸೋಲು ಇರುತ್ತವೆ. ಆದರೆ ನಿಲುವುಗಳು ಸಾರ್ವತ್ರಿಕ ಕ್ಷೇತ್ರಗಳಲ್ಲಿ ಗೆಲುವು ತಂದುಕೊಡುತ್ತವೆ. ಗಟ್ಟಿತನದ ಮೇಲೆ ನಿಲುವುಗಳು ನಿಲ್ಲುತ್ತವೆ. ಗಾಂಧೀಜಿಯವರ ನಿಲುವುಗಳನ್ನು ಇಲ್ಲಿ ಉದಾಹರಿಸಬಹುದು ಎಂದರು.

ಯಾವ ವ್ಯಕ್ತಿ ವೈಯಕ್ತಿಕ ಸ್ತರದಲ್ಲಿ ನಿಲುವುಗಳನ್ನು ತೆಗೆದುಕೊಳ್ಳುತ್ತಾನೆ. ಅವನು ಸಮುದಾಯ ಕಟ್ಟಿಕೊಳ್ಳುತ್ತಾನೆ. ವ್ಯಕ್ತಿ ಹಣ ಗಳಿಸಲು ತೆಗೆದುಕೊಂಡ ನಿರ್ಧಾರ ನಿಲುವು ಅಲ್ಲ. ನಿಲುವುಗಳು ಸಾರ್ವತ್ರಿಕವಾಗಿರುತ್ತವೆ. ಆರೋಗ್ಯಪೂರ್ಣವಾಗಿ ಇಡೀ ಸಮುದಾಯಕ್ಕೆ ಮಾರ್ಗದರ್ಶನ ಮಾಡುವಂಥದ್ದಾಗಿರುತ್ತವೆ. ಸಾರ್ವತ್ರಿಕ ಕ್ಷೇತ್ರದಲ್ಲಿ ಗೆಲುವು ತಂದುಕೊಡುತ್ತವೆ. ಒಬ್ಬ ವ್ಯಕ್ತಿಯ ಗೆಲುವು ಸುಲಭ, ಆದರೆ ಸಮುದಾಯದ ಗೆಲುವು ಕಷ್ಟ. ಸಂಪ್ರದಾಯಗಳ ಜೊತೆ ಸಾಗಬಹುದು, ಆದರೆ ಅದು ಗಟ್ಟಿ ನಿಲುವು ಅಲ್ಲ. ಅದರ ವಿರುದ್ಧ ನಿಂತು ಸಮ ಸಮಾಜ ಕಟ್ಟುವುದೇ ಗಟ್ಟಿ ನಿಲುವು ಎಂದು ಅಭಿಪ್ರಾಯಪಟ್ಟರು.

ವಿಷಯಾವಲೋಕನ ಮಾಡಿದ ಹರಿಹರದ ಎಸ್‌ಜೆವಿಪಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ಎ.ಬಿ. ರಾಮಚಂದ್ರಪ್ಪ ಮಾತನಾಡಿ, ವ್ಯಕ್ತಿ ತನ್ನ ಜಾತಿ, ಮತ, ಪಂಥ, ಧರ್ಮವನ್ನು ಮೀರಿ ಕಾಲಿಟ್ಟಾಗ ಮಾತ್ರ ವಿಶ್ವಾಸಾತ್ಮಕ ನಿಲುವು ತಾಳಲು ಸಾಧ್ಯ. ಬಾಲ್ಯದ ಸಂಕಟಗಳನ್ನು ರೂಢಿಸಿಕೊಂಡ ನಮಗೆ ಅವುಗಳಿಂದ ಹೊರಬರುವುದೇ ಕಷ್ಟ. ಕುಟುಂಬ, ಸಮಾಜದ ಪ್ರಭಾವದಿಂದ ಆ ಸಂಪ್ರದಾಯದ ಮೂಲಭೂತವಾದದ ವಿಚಾರಗಳಿಂದ ಹೊರಬರಲಾಗದೆ ಇರುತ್ತೇವೆ. ಧರ್ಮ, ಜಾತಿ, ಸಮುದಾಯ, ಪ್ರಾದೇಶಿಕ ಎಲ್ಲೆಯನ್ನು ಮೀರಿದ ಮನೋಭಾವ ಇದ್ದರೆ ಮಾತ್ರ ಸಮುದಾಯಕ್ಕೆ ನಾವು ಏನನ್ನಾದರೂ ಕೊಡುಗೆ ನೀಡಬಹುದು ಎಂದು ಪ್ರತಿಪಾದಿಸಿದರು.

ಬಿಎ ಪದವಿ ಪರೀಕ್ಷೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ 5ನೇ ರ್‍ಯಾಂಕ್‌ ಪಡೆದ ಹೇಮಲತಾ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಲವಾರು ಕಷ್ಟ-ಕಾರ್ಪಣ್ಯಗಳ ನಡುವೆ ಮನೆಯಲ್ಲಿದ್ದ ಅತ್ಯಲ್ಪ ಅವಕಾಶಗಳಲ್ಲೇ ಓದಿದೆ. ಇಂಥದ್ದನ್ನು ಕೊಡಿಸಿ ಎಂದು ನಾನು ಯಾವತ್ತೂ ಕೇಳಿದವಳಲ್ಲ. ಆದರೆ ಕಷ್ಟಪಷ್ಟು ಓದಿದ್ದೇನೆ. ಮುರುಘಾ ಶ್ರೀಗಳು ನನ್ನ ವಿದ್ಯಾಭ್ಯಾಸಕ್ಕೆ ನೀಡಿರುವ ಹಣ ಶ್ರೀಮಠದ್ದು. ಅದರ ಪಾವಿತ್ರ್ಯತೆಗೆ ಧಕ್ಕೆ ಬಾರದ ಹಾಗೆ ವ್ಯಾಸಂಗ ಮಾಡುವುದಾಗಿ ಹೇಳಿದರು.

ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ| ಡಿ. ಧರಣೇಂದ್ರಯ್ಯ ಮಾತನಾಡಿದರು. ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯ ನಿರ್ವಹಣಾ ನಿರ್ದೇಶಕ ಡಾ| ಜಿ.ಎನ್‌. ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಕಾರಿ ಎಂ.ಜಿ. ದೊರೆಸ್ವಾಮಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ