ಕೊಡುಗೆ ಕೊಡೋದಲ್ಲ, ಇದ್ದಿದ್ದನ್ನೂ ಕಿತ್ಕೊಂಡ್ರು!

ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಶಿರಾ ಘಟಕ, ಸರ್ಕಾರಿ ಕಾಲೇಜು ಸ್ಥಳಾಂತರ ಮಾಡಿದ್ದೇ ಸಾಧನೆ

Team Udayavani, Jul 1, 2019, 12:15 PM IST

ಹರಿಯಬ್ಬೆ ಹೆಂಜಾರಪ್ಪ
ಚಿತ್ರದುರ್ಗ:
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸಿದ್ದು, ಮಧ್ಯ ಕರ್ನಾಟಕದ ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ. ಬದಲಾಗಿ ಜಿಲ್ಲೆಯಲ್ಲಿದ್ದ ಪ್ರಮುಖ ಎರಡು ಮಹತ್ವದ ಯೋಜನೆಗಳನ್ನ ಕಿತ್ತುಕೊಂಡು ಹಳೆ ಮೈಸೂರು ಭಾಗದ ಜೆಡಿಎಸ್‌ ಬಲಿಷ್ಠವಾಗಿರುವ ಎರಡು ಜಿಲ್ಲೆಗಳಿಗೆ ಹಂಚಿಕೆ ಮಾಡುವ ಮೂಲಕ ಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗೀಯ ಕಚೇರಿಯಲ್ಲಿದ್ದ ಶಿರಾ ಘಟಕವನ್ನು ತುಮಕೂರು ಜಿಲ್ಲೆಗೆ, ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರ ಮಾಡುವ ಮೂಲಕ ಹಿಂದುಳಿದ ಜಿಲ್ಲೆಯ ಜನರ ಗಾಯದ ಮೇಲೆ ಬರೆ ಎಳೆದಿದೆ.

ಜಿಲ್ಲೆಗೆ ದಕ್ಕಬೇಕಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಗಗನಕುಸುಮವಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಿಂದ ಹಿಡಿದು ಸಮ್ಮಿಶ್ರ ಸರ್ಕಾರದವರೆಗೂ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ವೈದ್ಯಕೀಯ ಕಾಲೇಜನ್ನು ಆರಂಭ ಮಾಡುತ್ತಿಲ್ಲ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಒಂದಿಂಚೂ ಮುಂದೆ ಸಾಗದೆ ಇದ್ದಲ್ಲೇ ಇದೆ. ಈ ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ಮಾಡುತ್ತಿಲ್ಲ, ಅನುದಾನವನ್ನೂ ನೀಡುತ್ತಿಲ್ಲ. ಹಾಗಾಗಿ ರೈಲು ಹಳಿ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡ ತಾಲೂಕುಗಳಿಗೆ ತುಂಗಭದ್ರಾ ಹಿನ್ನೀರು ಯೋಜನೆಗೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ 2800 ಕೋಟಿ ರೂ.ಗಳು ಮಂಜೂರಾಗಿದ್ದು ಆಮೆಗತಿಯಲ್ಲಿ ಸಾಗಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗದಲ್ಲಿದ್ದ ಶಿರಾ ಘಟಕವನ್ನು ವಾಪಸ್‌ ತುಮಕೂರು ಜಿಲ್ಲೆಗೆ ಮರು ಸೇರ್ಪಡೆ ಮಾಡುವ ಮೂಲಕ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ ಜವನಗೊಂಡಹಳ್ಳಿ ಹೋಬಳಿ ಕೇಂದ್ರದಲ್ಲಿದ್ದ ಸರ್ಕಾರಿ ಪದವಿ ಕಾಲೇಜ್‌ ಅನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರಿಸುವ ಮೂಲಕ ಶೈಕ್ಷಣಿಕವಾಗಿಯೂ ತಾರತಮ್ಯ ಮಾಡಲಾಗಿದೆ.

ಮುಂದುವರೆದ ಕಾಮಗಾರಿ ಪಟ್ಟಿಯಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಸದ್ಯಕ್ಕೆ ಅನುದಾನ ಕೊರತೆ ಕಾಣುತ್ತಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ 700 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಿ ಬಿಡುಗಡೆ ಆಗಿದೆ. ಆ ಮೊತ್ತದಲ್ಲಿ 657.28 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಈ ಅನುದಾನವನ್ನು ಹೊರತು ಪಡಿಸಿದರೆ ಯಾವುದೇ ರೀತಿಯ ಹೆಚ್ಚುವರಿ ಅನುದಾನ ಜಿಲ್ಲೆಗೆ ಸಿಕ್ಕಿಲ್ಲ.

ಆದರೆ ಲೋಕೋಪಯೋಗಿ ಇಲಾಖೆ ಈ ಮಾತಿಗೆ ಅಪವಾದ. ಏಕೆಂದರೆ ಜಿಲ್ಲೆಯಾದ್ಯಂತ 150 ಮುಂದುವರೆದ ಕಾಮಗಾರಿಗಳಿದ್ದು 6.40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 3 ಕೋಟಿ ರೂ. ಖರ್ಚಾಗಿದ್ದು ಕಾಮಗಾರಿಗಳು ವೇಗದಲ್ಲಿ ಸಾಗುತ್ತಿವೆ. ಇದಲ್ಲದೆ ಎಸ್ಸಿಪಿ, ಟಿಎಸ್ಪಿ ಅನುದಾನದಡಿಯಲ್ಲಿ 162 ಮುಂದುವರೆದ ಕಾಮಗಾರಿಗಳು ನಡೆಯುತ್ತಿದ್ದು 12.46 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಪೈಕಿ 1.83 ಕೋಟಿ ರೂ.ಗಳು ಖರ್ಚಾಗಿದ್ದು ಎಲ್ಲ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ.

ಲೋಕೋಪಯೋಗಿ ಇಲಾಖೆಗೆ ಜಿಲ್ಲೆಯ ಆರು ತಾಲೂಕುಗಳಿಂದ ಹೊಸದಾಗಿ 109.70 ಕೋಟಿ ರೂ.ಗಳಲ್ಲಿ 51 ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು ಮಂಜೂರಾತಿ, ಸರ್ವೆ, ಡಿಪಿಆರ್‌, ಹಂತದಲ್ಲಿವೆ. ಒಂದೆರಡು ತಿಂಗಳಲ್ಲಿ ಇಷ್ಟು ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ಆರಂಭವಾಗಲಿವೆ. ಇದೇ ಮಾತನ್ನು ಬೇರೆ ಇಲಾಖೆಗೆ ಹೇಳುವಂತಿಲ್ಲ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಆರು ತಾಲೂಕುಗಳಲ್ಲಿ 84 ಕಾಮಗಾರಿಗಳನ್ನು ವಿವಿಧ ಹೆಡ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು 34.80 ಕೋಟಿ ರೂ.ಗಳ ಮಂಜೂರಾತಿ ನೀಡಿ ಕಾಮಗಾರಿ ಆರಂಭಿಸಲಾಗಿದೆ. ಹೊಸ ಕೆರೆ ನಿರ್ಮಾಣಕ್ಕಾಗಿ 50 ಲಕ್ಷ, ಕೆರೆಗಳ ಆಧುನೀಕರಣಕ್ಕಾಗಿ 6.38 ಕೋಟಿ, ಅಣೆಕಟ್ಟು ಮತ್ತು ಪಿಕಪ್‌ 12.89 ಕೋಟಿ, ಚೆಕ್‌ ಡ್ಯಾಂ ನಿರ್ಮಾಣಕ್ಕಾಗಿ 1.45 ಕೋಟಿ, ಕೊಳವೆ ಬಾವಿ ಕಾಮಗಾರಿಗಳಿಗೆ 5.55 ಕೋಟಿ, ನಬಾರ್ಡ್‌ ಅನುದಾನದಡಿ ಹೊಸ ಕೆರೆಗಳ ನಿರ್ಮಾಣಕ್ಕಾಗಿ 1.50 ಕೋಟಿ, ಕೆರೆಗಳ ಆಧುನೀಕರಣ 2.49 ಕೋಟಿ, ಅಣೆಕಟ್ಟು ಮತ್ತು ಪಿಕಪ್‌ 4.04 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆ ಕಾಮಗಾರಿಗಳು ಪ್ರಗತಿಯಲ್ಲಿವೆ.

ಕೆಲವೇ ಕೆಲವು ಇಲಾಖೆಗಳಿಗೆ ಹೆಚ್ಚಿನ ಅನುದಾನ ಮಂಜೂರಾಗಿದ್ದು ಬಿಟ್ಟರೆ ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಸಾಧನೆ ನಿರಾಶಾದಾಯಕವಾಗಿದೆ. ಇನ್ನುಳಿದ ನಾಲ್ಕು ವರ್ಷಗಳಲ್ಲಾದರೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಮನಸ್ಸು ಮಾಡಬೇಕಿದೆ.

ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆ ತೃಪ್ತಿ ತಂದಿದೆ. ತುಂಗಭದ್ರಾ ಹಿನ್ನೀರು ಯೋಜನೆ ಕೂಡ್ಲಗಿ ತಾಲೂಕಿನಲ್ಲಿ ಆರಂಭವಾಗಿದೆ. ಹೊಸದಾಗಿ ಮಂಜೂರಾಗಿರುವ ಕಾಮಗಾರಿಗಳಿಗೆ ಅನುದಾನದ ಕೊರತೆಯಿಲ್ಲ. ಉಳಿದ ನಾಲ್ಕು ವರ್ಷದಲ್ಲಿ ಜಿಲ್ಲೆಯ ಎಲ್ಲ ಯೋಜನೆಗಳೂ ಆರಂಭವಾಗಲಿವೆ.
ವೆಂಕಟರಮಣಪ್ಪ,
ಜಿಲ್ಲಾ ಉಸ್ತುವಾರಿ ಸಚಿವರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ