19 ರಂದು ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ

Team Udayavani, Nov 13, 2019, 5:58 PM IST

ಚಿತ್ರದುರ್ಗ: ಅಖೀಲ ಭಾರತ 66ನೇ ಸಹಕಾರ ಸಪ್ತಾಹದ ಅಂಗವಾಗಿ ನ. 14 ರಿಂದ 20 ರವರೆಗೆ ಜಿಲ್ಲೆಯಲ್ಲಿ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ನ. 19 ರಂದು ರಾಜ್ಯ ಮಟ್ಟದ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆಯಲಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್‌. ಆರ್‌. ಗಿರೀಶ್‌ ತಿಳಿಸಿದರು.

ನಗರದ ಜಿಲ್ಲಾ ಸಹಕಾರ ಯೂನಿಯನ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಪ್ತಾಹದ ಆರಂಭದಿಂದ ಕೊನೆವರೆಗೆ ಪ್ರತಿ ದಿನವೂ ಒಂದೊಂದು ವಿಷಯದ ಕುರಿತು ಉಪನ್ಯಾಸ ನಡೆಯಲಿದೆ ಎಂದರು.

ನ. 14 ರಂದು ಸಹಕಾರ ಸಪ್ತಾಹಕ್ಕೆ ಚಿತ್ರದುರ್ಗದಲ್ಲಿ ಚಾಲನೆ ದೊರೆಯಲಿದ್ದು, ನ. 15 ರಂದು ಹೊಸದುರ್ಗ, 16 ರಂದು ಚಳ್ಳಕೆರೆ, 17 ರಂದು ಹಿರಿಯೂರು, 18 ರಂದು ಮೊಳಕಾಲ್ಮೂರು, 20ರಂದು ಹೊಳಲ್ಕೆರೆ ತಾಲೂಕಿನ ಶಿವಪುರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ನ. 19 ರಂದು ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ “ಯುವಜನ, ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು’ ಎಂಬ ವಿಷಯದಡಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಗೃಹ ಹಾಗೂ ಸಹಕಾರ ಇಲಾಖೆ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮತ್ತಿತರರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ವಿವಿಧ ರೀತಿಯ 900 ಸಹಕಾರ ಸಂಘಗಳಿದ್ದು ಇದರಲ್ಲಿ 753 ಸಹಕಾರ ಸಂಘಗಳು ಬ್ಯಾಂಕಿಂಗ್‌, ಹಾಲು ಉತ್ಪಾದನೆ, ಕೃಷಿಯೇತರ ಸಹಕಾರ ಸಂಘಗಳು ಮತ್ತು ಮಹಿಳಾ ಸಹಕಾರ ಸಂಘಗಳು ಕೃಷಿಯ ಪರವಾಗಿ ಕೆಲಸ ನಿರ್ವಹಿಸುತ್ತಿವೆ. ಜಿಲ್ಲೆಯ 35 ಸಾವಿರ ರೈತರಲ್ಲಿ 800 ಜನರನ್ನು ಹೊರತುಪಡಿಸಿ ಉಳಿದ ಎಲ್ಲರೂ ಸರ್ಕಾರದ ಸಾಲ ಮನ್ನಾ ಯೋಜನೆ ಪ್ರಯೋಜನ ಪಡೆದಿದ್ದಾರೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ರಾಮ ರೆಡ್ಡಿ ಮಾತನಾಡಿ, ನಮ್ಮ ಯೂನಿಯನ್‌ನಿಂದ ಸಹಕಾರ ಸಂಘಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ತರಬೇತಿ, ಕಾಲ ಕಾಲಕ್ಕೆ ಸರ್ಕಾರ ಜಾರಿ ಮಾಡುವ ವಿವಿಧ ರೀತಿಯ ಕಾಯ್ದೆಗಳನ್ನು ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕರಾದ ಜಿಂಕಲ್‌ ಬಸವರಾಜ್‌, ಪರಮೇಶ್ವರಪ್ಪ, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ ಉಲ್ಲಾ ಷರೀಫ್‌, ಸಹಕಾರ ಸಂಘಗಳ ಉಪನಿಬಂಧಕ ಗೋಪಾಲ ರೆಡ್ಡಿ, ಉಪನಿರ್ದೇಶಕ ನಾಗರಾಜಪ್ಪ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ