ಉಪ್ಪಳದ ಯುವತಿ ಕೊಲೆ ಆರೋಪ ಸಾಬೀತು

ಸಯನೈಡ್‌ ಮೋಹನ್‌ ವಿರುದ್ಧದ 16 ನೇ ಪ್ರಕರಣ

Team Udayavani, Sep 22, 2019, 4:35 AM IST

ಮಂಗಳೂರು: ಸಯನೈಡ್‌ ಮೋಹನ್‌ ಮೇಲಿನ 16ನೇ ಪ್ರಕರಣವಾದ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಬೇಕೂರಿನ 33 ವರ್ಷದ ಯುವತಿ ಕೊಲೆ ಆರೋಪವು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶುಕ್ರವಾರ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣದ ವಿಚಾರಣೆ ಸೆ.25ರಂದು ನಡೆಯಲಿದೆ.

ಪ್ರಕರಣದ ಹಿನ್ನೆಲೆ
ಮೋಹನ್‌ಗೆ 2007ರ ಎಪ್ರಿಲ್‌ನಲ್ಲಿ ಉಪ್ಪಳ ಬಸ್‌ ನಿಲ್ದಾಣದಲ್ಲಿ ಬೇಕೂರಿನ ಅವಿವಾಹಿತ ಯುವತಿಯ ಪರಿಚಯವಾಗಿತ್ತು. ಸಂಗೀತ ಶಿಕ್ಷಕಿಯಾಗಿದ್ದ ಆಕೆಯ ಜತೆ ಮೋಹನ್‌ ತನ್ನನ್ನು ಸುಧಾರಕ ಆಚಾರ್ಯ, ಅರಣ್ಯ ಇಲಾಖೆಯ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆಕೆಯನ್ನು ಪುಸಲಾಯಿಸಿ ಪ್ರೀತಿಸುವ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿದ್ದ. ಬಳಿಕ ಆಕೆಯ ಮನೆಗೂ ಹೋಗಿ ಪೋಷಕರ ವಿಶ್ವಾಸ ಗಳಿಸಿದ್ದ.

ಯುವತಿ ಕೋಟಿ ಚೆನ್ನಯ ಎಂಬ ಹೆಸರಿನಲ್ಲಿ ಭಕ್ತಿ ಗೀತೆಗಳ ಆಲ್ಬಂ ಬಿಡುಗಡೆ ಮಾಡಿದ್ದಳು. 2017ರ ಮೇ 28ರಂದು ಆಕೆ ಮಂಗಳೂರಿನಲ್ಲಿ ಆಡಿಯೋ ರೆಕಾರ್ಡ್‌ ಮಾಡಲಿಕ್ಕಿದೆ ಎಂದು ಹೇಳಿ ಮನೆಯಿಂದ ಬಂದಿದ್ದಳು. ಬಳಿಕ ಬಿಜೈಯ ಸರಕಾರಿ ಬಸ್‌ ನಿಲ್ದಾಣದಲ್ಲಿ ಮೋಹನನನ್ನು ಭೇಟಿಯಾಗಿದ್ದು, ಬಳಿಕ ಜತೆಯಾಗಿ ಬೆಂಗಳೂರಿಗೆ ತೆರಳಿ ಕಾಟನ್‌ಪೇಟೆ ರಸ್ತೆಯ ಸಪ್ತಗಿರಿ ಪ್ಯಾಲೇಸ್‌ ಲಾಡ್ಜ್ನಲ್ಲಿ ರೂಮ್‌ ಪಡೆದುಕೊಂಡಿದ್ದರು. ಅಲ್ಲೂ ಸುಧಾಕರ ಆಚಾರ್ಯ ಹೆಸರಲ್ಲೇ ರೂಮ್‌ ಪಡೆದಿದ್ದನು.

ಕೊಲೆಗೆ ಸ್ಕೆಚ್‌
ಮರುದಿನ ಬೆಳಗ್ಗೆ ಮೋಹನ್‌ ಯುವತಿ ಬಳಿ “ನಾವಿಬ್ಬರು ಪೂಜೆಗೆ ಹೋಗಿ ಬರೋಣ. ಚಿನ್ನಾಭರಣಗಳನ್ನು ಲಾಡ್ಜ್ನಲ್ಲಿ ಇರಿಸಿ ಹೋಗೋಣ’ ಎಂದು ನಂಬಿಸಿ ಆಕೆಯನ್ನು ಹೊರಗೆ ಕರೆದೊಯ್ದಿದ್ದ. ಅಲ್ಲಿಂದ ಬೆಂಗಳೂರಿನ ಬಸ್‌ ನಿಲ್ದಾಣಕ್ಕೆ ಹೋಗಿದ್ದು, ಅಲ್ಲಿ ಮೋಹನನು ಯುವತಿಗೆ “ನಿನ್ನೆ ಲೈಂಗಿಕ ಸಂಪರ್ಕ ಮಾಡಿದ ಕಾರಣ ಗರ್ಭ ಧರಿಸುವುದನ್ನು ತಡೆಯಲು ಶೌಚಾಲಯಕ್ಕೆ ಹೋಗಿ ಈ ಮಾತ್ರೆ ಸೇವಿಸು’ ಎಂದು ಸೈನೈಡ್‌ ನೀಡಿದ್ದ. ಇದನ್ನು ನಂಬಿದ ಮಾತ್ರೆ ಸೇವಿಸಿದ್ದ ಆಕೆ ಕುಸಿದು ಬಿದ್ದಿದ್ದಳು. ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದಾಗ ಮೃತ ಪಟ್ಟಿರುವುದು ತಿಳಿದು ಬಂತು. ಈ ನಡುವೆ ಮೋಹನನು ಲಾಡ್ಜ್ಗೆ ಬಂದು ಚಿನ್ನಾಭರಣ ಸಹಿತ ಪರಾರಿಯಾಗಿದ್ದು, ಬಳಿಕ ಆಭರಣವನ್ನು ಮಂಗಳೂರಿನಲ್ಲಿ ಮಾರಾಟ ಮಾಡಿದ್ದ.

ಪ್ರಕರಣ ಬಯಲಿಗೆ
ಯುವತಿಯ ಮನೆಯಲ್ಲಿ ಮತ್ತೂ ಇಬ್ಬರು ಹೆಣ್ಣಕ್ಕಳು ಇದ್ದ ಕಾರಣ ಮರ್ಯಾದೆಗೆ ಅಂಜಿ ನಾಪತ್ತೆ ದೂರು ನೀಡಿರಲಿಲ್ಲ. ಆಕೆಯು ಪ್ರಿಯತಮನೊಂದಿಗೆ ಸುಖವಾಗಿರಬಹುದೆಂದು ಭಾವಿಸಿದ್ದರು. ಆದರೆ 2009ರಲ್ಲಿ ಮೋಹನ್‌ ಬಂಧನವಾಗಿ ಟಿವಿಯಲ್ಲಿ ಆತನ ಫೋಟೋ ನೋಡಿದ ಬಳಿಕ ಯುವತಿಯ ಸಹೋದರಿ ಬೆಂಗಳೂರಿನ ಉಪ್ಪಾರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

2009 ಅ.26ರಂದು ಬರಿಮಾರಿನ ಯುವತಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಮೋಹನನು ಮಂಜೇಶ್ವರದ ಯುವತಿಯನ್ನು ಕೊಂದುದನ್ನು ತಿಳಿ ದ್ದ. ಮಂಗಳೂರಿನಲ್ಲಿ ಆತ ಮಾರಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಉಪ್ಪಾರ ಪೇಟೆ ಪೊಲೀಸ್‌ ಠಾಣೆಯ ಸಿಐ ಲೋಕೇಶ್ವರ್‌ ಮತು ಎಸ್‌ಐ ನಾಗರಾಜ್‌ ತನಿಖಾಧಿಕಾರಿ ಆಗಿದ್ದರು. ಸಿಒಡಿ ಡಿವೈಎಸ್ಪಿ ಶಿವಶರಣಪ್ಪ ಪಾಟೀಲ್‌ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಯಿ ದುನ್ನೀಸಾ ಅವರು 38 ಸಾಕ್ಷಿಗಳ ವಿಚಾರಣೆ ನಡೆಸಿ, 49 ದಾಖಲೆ ಪರಿಗಣಿಸಿ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದರು. ಸರಕಾರದ ಪರ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಒ.ಎಂ. ಕ್ರಾಸ್ತಾ ವಾದಿಸಿದ್ದರು. ಮೋಹನ್‌ ವಿರುದ್ಧ ಒಟ್ಟು 20 ಪ್ರಕರಣಗಳಿದ್ದು, ಈಗಾ ಗ ಲೇ 16 ಪ್ರಕರಣಗಳ ವಿಚಾರಣೆ ಮುಗಿದಿದ್ದು, ಎಲ್ಲ ಪ್ರಕರಣಗಳಲ್ಲೂ ಶಿಕ್ಷೆಯಾಗಿದೆ.

ಸಾಬೀತಾದ ಆರೋಪಗಳು
ಈ ಪ್ರಕರಣದಲ್ಲಿ ಮೋಹನ್‌ ವಿರುದ್ಧ ದಾಖಲಿಸ ಲಾಗಿದ್ದ ಐಪಿಸಿ ಸೆಕ್ಷನ್‌ 302 (ಕೊಲೆ), ಸೆಕ್ಷನ್‌ 328 (ವಿಷ ಉಣಿಸಿದ್ದು), ಸೆಕ್ಷನ್‌ 392 (ಚಿನ್ನಾಭರಣ ಸುಲಿಗೆ), ಸೆಕ್ಷನ್‌ 394 (ವಿಷ (ಸಯನೈಡ್‌)ಪ್ರಾಶನ), ಸೆಕ್ಷನ್‌ 417 (ಮದುವೆ ಆಗುವುದಾಗಿ ವಂಚನೆ), ಸೆಕ್ಷನ್‌ 207 (ಸಾಕ್ಷ್ಯನಾಶ)ರ ಅಪರಾಧಗಳು ಸಾಬೀ ತಾಗಿವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ