ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ
ಉದಯವಾಣಿ ಅಭಿಯಾನ: ಬಲಗೊಳ್ಳಲಿ ಕರಾವಳಿ ರೈಲು ಜಾಲ: ಮಂಡಳಿ ಆದೇಶ ಜಾರಿಗೆ ಕರಾವಳಿಗರ ಹಕ್ಕೊತ್ತಾಯಕ್ಕೆ ಇದು ಸಕಾಲ
Team Udayavani, Nov 26, 2020, 6:15 AM IST
ಮಂಗಳೂರು: ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇ ವಿಭಾಗಕ್ಕೆ ಸೇರ್ಪಡೆಗೊಳಿಸುವಂತೆ 16 ವರ್ಷಗಳ ಹಿಂದೆಯೇ ಆದೇಶ ಹೊರಬಿದ್ದರೂ ಅನುಷ್ಠಾನ ಗೊಳ್ಳದಿರುವುದು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ.
ರೈಲ್ವೇ ಸಚಿವರಾಗಿದ್ದ ನಿತೀಶ್ ಕುಮಾರ್ 2003ರಲ್ಲಿ ಮಂಗಳೂರಿಗೆ ಬಂದಿದ್ದಾಗ ಸ್ಥಳೀಯರ ಬೇಡಿಕೆಯಂತೆ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ನೈಋತ್ಯ ರೈಲ್ವೇಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ಸೂಚಿಸಿ ದ್ದರು. ಈ ಸಂಬಂಧ ರೈಲ್ವೇ ಮಂಡಳಿಯೂ 2004ರ ಡಿ. 27ರಂದು ಆದೇಶವನ್ನೂ ಹೊರಡಿಸಿತ್ತು. ಆಗ ಮಂಗಳೂರು-ಹಾಸನ ನಡುವೆ ಹಳಿ ಪರಿವರ್ತನೆ ಕಾಮಗಾರಿ ಚಾಲ್ತಿಯಲ್ಲಿತ್ತು. ಕಾಮಗಾರಿ ಮುಗಿದ ಮೇಲೆ ಅಧಿಸೂಚನೆ ಹೊರಡಿಸಲು ನಿರ್ಧರಿಸಿತ್ತು.
2008ರಲ್ಲಿ ಕಾಮಗಾರಿ ಮುಗಿದಾಗ ಗೆಜೆಟ್ ನೊಟೀಫಿಕೇಶನ್ ಹೊರಡಿಸಲು ರೈಲ್ವೇ ಮಂಡಳಿಯೂ ತಯಾರಾಗಿತ್ತು. ಆ ಬಳಿಕ ಏನಾಯಿತೋ? ಇದುವರೆಗೆ ರೈಲ್ವೇ ಮಂಡಳಿ ತನ್ನದೇ ನಿರ್ಧಾರವನ್ನು ಜಾರಿಗೊಳಿಸಲು ಮುಂದಾಗಿಲ್ಲ ಎಂಬುದು ಕೇಳಿಬರುತ್ತಿರುವ ದೂರು. ಇದರ ಮಧ್ಯೆಯೇ ಮಂಗಳೂರು ವ್ಯಾಪ್ತಿಯನ್ನು ನೈಋತ್ಯ ವಲಯಕ್ಕೆ ಸೇರಿಸುವ 2004ರ ಆದೇಶವನ್ನು ಜಾರಿಗೊಳಿಸುವಂತೆ ಸ್ವತಃ ನೈಋತ್ಯ ವಲಯದವರೇ 2014ರ ಆಗಸ್ಟ್ 22 ಹಾಗೂ 2020ರ ಫೆಬ್ರವರಿ 10ರಂದು ಪತ್ರ ಬರೆದು ರೈಲ್ವೇ ಮಂಡಳಿಯನ್ನು ಆಗ್ರಹಿಸಿದ್ದರು. ಆದರೂ ರೈಲ್ವೇ ಸಚಿವಾಲಯ ಅಥವಾ ರೈಲ್ವೇ ಮಂಡಳಿ ಗಮನವೇ ಹರಿಸುತ್ತಿಲ್ಲ. ನಮ್ಮ ಭಾಗದ ಸಚಿವರು, ಜನಪ್ರತಿನಿಧಿಗಳು ಸೇರಿದಂತೆ ಇಡೀ ಕರಾವಳಿ ಜನತೆ ಈ ವಿಚಾರವಾಗಿ ದಿಲ್ಲಿ ಮಟ್ಟದಲ್ಲಿ ಪ್ರಬಲ ಹಕ್ಕೊತ್ತಾಯ ಮಂಡಿಸಬೇಕಾಗಿದೆ. ಇಲ್ಲವಾದರೆ ಆದೇಶ ಜಾರಿಗೊಳ್ಳದಿರುವ ಸಂಭವವೂ ಇದೆ.
ಪತ್ರದಲ್ಲೇನಿದೆ?
ರೈಲ್ವೇ ಮಂಡಳಿಯ 2004 ಹಾಗೂ 2014ರ ಆಗಸ್ಟ್ 22ರಂದು ಬರೆದ ಪತ್ರವನ್ನು ಉಲ್ಲೇಖೀಸಿ ನೈಋತ್ಯ ರೈಲ್ವೇಯ ಮಹಾಪ್ರಬಂಧಕ ಅಜಯ ಕುಮಾರ್ ಸಿಂಗ್ ಮತ್ತೆ 2020ರ ಫೆ. 10ರಂದು ರೈಲ್ವೇ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದು “ರೈಲ್ವೇ ಮಂಗಳೂರು ಕಾಂಪ್ಲೆಕ್ಸ್ (ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್) ಹಾಗೂ ತೋಕೂರು ನಿಲ್ದಾಣವನ್ನು ನೈಋತ್ಯ ರೈಲ್ವೇಗೆ ಸೇರ್ಪಡೆಗೊಳಿಸಬೇಕು ಎಂದು ಕೋರಿದ್ದರು.
ಇದೇ ಪತ್ರದಲ್ಲಿ ಸಮಗ್ರ ಅಭಿವೃದ್ಧಿ ಮತ್ತು ಸಮರ್ಪಕ ನಿರ್ವಹಣೆಗಾಗಿ ಮಂಗಳೂರು ಕಾಂಪ್ಲೆಕ್ಸ್ ಹಾಗೂ ತೋಕೂರು ನಿಲ್ದಾಣ ಒಂದು ಆಡಳಿತ ವ್ಯವಸ್ಥೆಗೊಳಪಡಬೇಕು. ಕರಾವಳಿ ಕರ್ನಾಟಕದ ಜನರಿಂದ ಹೊಸ ರೈಲು ಆರಂಭಿಸುವಂತೆ ಹಾಗೂ ಪಡೀಲ್ ಜಂಕ್ಷನ್ ಮೂಲಕ ಕಾರವಾರಕ್ಕೆ ನೇರ ರೈಲು ಸಂಚಾರ ಆರಂಭಿಸುವಂತೆ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ನಾವು ಕೊಂಕಣ ರೈಲ್ವೇ ನಿಗಮ ಲಿ. ಹಾಗೂ ದಕ್ಷಿಣ ರೈಲ್ವೇಗೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಮಂಗಳೂರು ಕಾಂಪ್ಲೆಕ್ಸ್ ಹಾಗೂ ತೋಕೂರು ನಿಲ್ದಾಣವನ್ನು ನೈಋತ್ಯ ರೈಲ್ವೇಯೊಂದಿಗೆ ಸೇರ್ಪಡೆಗೊಳಿಸುವುದೇ ಪರಿಹಾರ. ಆದುದರಿಂದ ರೈಲ್ವೇ ಮಂಡಳಿಯು ಮಂಗಳೂರು ಕಾಂಪ್ಲೆಕ್ಸ್ ಹಾಗೂ ತೋಕೂರು ನಿಲ್ದಾಣವನ್ನು ನೈಋತ್ಯ ರೈಲ್ವೇಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಅತೀ ಶೀಘ್ರ ಅಧಿಸೂಚನೆಯನ್ನು ಹೊರಡಿಸಬೇಕು. ಬಳಿಕ ಮಾನವ ಸಂಪದ ವರ್ಗಾವಣೆ, ಸೇರಿದಂತೆ ಇತರ ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಇನ್ನೊಂದೆಡೆ ರೈಲ್ವೇ ಬಳಕೆದಾರರ ಸಂಘಟನೆಗಳು ಸಾರ್ವಜನಿಕ ಹಿತದೃಷ್ಟಿಯನ್ನು ಪರಿಗಣಿಸಿ ರೈಲ್ವೇ ಮಂಡಳಿ 2014ರಲ್ಲಿ ಮಾಡಿರುವ ಆದೇಶದ ಬಗ್ಗೆ ರೈಲ್ವೇ ಸಚಿವರ ಗಮನ ಸೆಳೆದು ಶೀಘ್ರ ಗಜೆಟ್ ನೋಟಿಫಿಕೇಶನ್ ಆಗುವಂತೆ ಮಾಡಬೇಕು ಎಂದು ನಿರಂತರ ಮನವಿ ಮಾಡುತ್ತಲೇ ಬಂದಿವೆ.
ಪ್ರಮುಖ ಬೇಡಿಕೆಗಳು
01- ಮಂಗಳೂರು ಸೆಂಟ್ರಲ್ ಮೂಲಕ 31 ರೈಲುಗಳು ಪ್ರತಿದಿನ ಸಂಚರಿಸುತ್ತಿದ್ದು, ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಿಸಬೇಕು ಹಾಗೂ ನಿಲ್ದಾಣವನ್ನು ವಿಶ್ವದರ್ಜೆ ನಿಲ್ದಾಣವಾಗಿ ಅಭಿವೃದ್ಧಿಪಡಿಸಬೇಕು.
02- ಮಂಗಳೂರಿನಿಂದ ಎಲ್ಲ ಜಿಲ್ಲಾ ಹಾಗೂ ರಾಜ್ಯಗಳ ಕೇಂದ್ರ ಸ್ಥಾನಗಳಿಗೆ ರೈಲ್ವೇ ಸಂಪರ್ಕ ಕಲ್ಪಿಸಬೇಕು. ಮಂಗಳೂರು-ಬೀದರ್, ಮಂಗಳೂರು -ತಿರುಪತಿಗೆ ಹೊಸದಾಗಿ ಸಂಚಾರ ಆರಂಭಿಸಬೇಕು. ಮಂಗಳೂರಿನಿಂದ ಬೆಂಗಳೂರಿಗೆ, ಮಂಗಳೂರಿನಿಂದ ಮೈಸೂರಿಗೆ ಹಗಲು ರೈಲು ಆರಂಭಿಸಬೇಕು, ಮಂಗಳೂರಿನಿಂದ ರಾಮೇಶ್ವರಕ್ಕೆ ನೇರ ರೈಲು ಸಂಚಾರ, ಮಂಗಳೂರು-ವಿಜಯಪುರ ರೈಲನ್ನು ಖಾಯಂಗೊಳಿಸಬೇಕು, ಮಂಗಳೂರು-ಮಡಂಗಾವ್ ರೈಲನ್ನು ಸೂಪರ್‌ಫಾಸ್ಟ್ ಆಗಿ ಪರಿವರ್ತಿಸಬೇಕು ಹಾಗೂ ಥಾಣೆ ಅಥವಾ ಸಿಎಸ್‌ಟಿಗೆ ವಿಸ್ತರಿಸಬೇಕು.
03- ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಹಳಿ ದ್ವಿಗುಣಗೊಳಿಸಬೇಕು ಹಾಗೂ ವಿದ್ಯುದೀಕರಣಗೊಳಿಸಬೇಕು, ಸುಬ್ರಹ್ಮಣ್ಯ ಮಾರ್ಗದಿಂದ ಮಂಗಳೂರು ವರೆಗೆ 8 ಕಡೆಗಳಲ್ಲಿ ರೈಲ್ವೇ ಮೇಲ್ಸೇತುವೆ ಅಥವಾ ಕೆಳಸೇತುವೆಗಳನ್ನು ನಿರ್ಮಿಸಬೇಕು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444