ಚುನಾವಣ ಕಾರ್ಯದ ಸುತ್ತಾಟಕ್ಕೆ ಜಿಲ್ಲಾಡಳಿತದಿಂದ 73 ವಾಹನ ಬಳಕೆ

ಮಹಾನಗರ ಪಾಲಿಕೆ ಚುನಾವಣೆ

Team Udayavani, Nov 9, 2019, 5:30 AM IST

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಇನ್ನು ಕೇವಲ ಎರಡು ದಿನವಷ್ಟೇ ಬಾಕಿ ಉಳಿದಿದ್ದು, ಎಲ್ಲ 60 ವಾರ್ಡ್‌ಗಳಲ್ಲಿ ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನ ನಡೆಸುವುದಕ್ಕೆ ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಇತ್ತ ಅಭ್ಯರ್ಥಿಗಳು ತಮ್ಮ ಅಂತಿಮ ಹಂತದ ಮತ ಭೇಟೆಯಲ್ಲಿ ಆಯಾ ಕ್ಷೇತ್ರಗಳಲ್ಲಿ ತೊಡಗಿದ್ದರೆ, ಅತ್ತ ಅಧಿಕಾರಿಗಳು ಸುಸೂತ್ರ ಚುನಾವಣೆ ನಡೆಸಲು ಅಗತ್ಯ ತಯಾರಿಯಲ್ಲಿ ತೊಡಗಿದ್ದಾರೆ.

ಮತದಾನೋತ್ತರ, ಮತದಾನ ದಿನದಂದು ಎಲ್ಲ 448 ಬೂತ್‌ಗಳಿಗೆ ಓಡಾಡಲು ಚುನಾವಣ ಕರ್ತವ್ಯಕ್ಕೆಂದು ಈ ಬಾರಿ ಒಟ್ಟು 73 ವಾಹನಗಳು ಬಳಕೆಯಾಗಲಿದೆ. 63 ರೂಟ್‌ಗಳಲ್ಲಿ ವಾಹನಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕೆಲವು ವಾಹನಗಳು ಈಗಾಗಲೇ ಓಡಾಟ ನಡೆಸುತ್ತಿವೆ. 63 ಕೆಎಸ್ಸಾರ್ಟಿಸಿ ಬಸ್‌ಗಳನ್ನು ಚುನಾವಣ ಕರ್ತವ್ಯಕ್ಕೆಂದು ಗೊತ್ತುಪಡಿಸಲಾಗಿದ್ದು, ಈ ಪೈಕಿ 61 ಅಗತ್ಯಕ್ಕೆ ಮತ್ತು 2 ಹೆಚ್ಚುವರಿ ಬಸ್‌ಗಳಾಗಿವೆ. 10 ಟೆಂಪೋ ಟ್ರಾವೆಲ್ಲರ್‌ಗಳನ್ನು ನಿಯೋಜಿಸಲಾಗಿದ್ದು, ಈ ಪೈಕಿ 8 ಅಗತ್ಯಕ್ಕೆ, 2 ಹೆಚ್ಚುವರಿ ವಾಹನಗಳಾಗಿವೆ. ಹಾಗೆಯೇ, ಖಾಸಗಿ ಬಸ್‌, ಟ್ಯಾಕ್ಸಿಗಳನ್ನು ಚುನಾವಣೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿಲ್ಲ.

ಚುನಾವಣ ಕಾರ್ಯದ ನಿಮಿತ್ತ ಕಂದಾಯ, ಪೊಲೀಸ್‌, ಭದ್ರತಾ ದಳದ ಅಧಿಕಾರಿಗಳು ಎಲ್ಲ ಬೂತ್‌ಗಳಿಗೆ ಸುತ್ತಾಡಲು ವಾಹನ ಆವಶ್ಯಕತೆ ಇರುತ್ತದೆ. ಬೂತ್‌ಗಳಿಗೆ ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ಕೊಂಡೊಯ್ಯುವುದು, ಮತದಾನಕ್ಕೆ ಬೇಕಾಗುವ ಇತರ ಅವಶ್ಯ ಸಾಮಗ್ರಿಗಳನ್ನು ಕೊಂಡೊಯ್ಯುವುದು ಸಹಿತ ವಿವಿಧ ಕೆಲಸಗಳಿಗೆ ವಾಹನಗಳ ಆವಶ್ಯಕತೆ ಇದೆ.

ಸಿಗದ ಹಣ: ಟ್ಯಾಕ್ಸಿ ನೀಡದಿರಲು ನಿರ್ಧಾರ
ಪಾಲಿಕೆ ಚುನಾವಣೆ ಉದ್ದೇಶಕ್ಕೆ ವಾಹನ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ ಅನ್ನು ಸಂಪರ್ಕಿಸಿದ್ದು, ಹಿಂದಿನ ಪಾವತಿ ಬಾಕಿ ಇರುವುದರಿಂದ ವಾಹನ ನೀಡದಿರಲು ಸಂಘಟನೆ ನಿರ್ಧರಿಸಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಮ್ಯಾಕ್ಸಿಕ್ಯಾಬ್‌, ಕಾರು, ಟೆಂಪೋ ಟ್ರಾವೆಲರ್‌ ಸಹಿತ ಸುಮಾರು 360 ವಾಹನಗಳನ್ನು ಚುನಾವಣ ಉದ್ದೇಶಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಚುನಾವಣೆ ಕಳೆದು ಆರು ತಿಂಗಳಾದರೂ ಬಳಸಿಕೊಂಡ ವಾಹನಗಳ ಮಾಲಕರಿಗೆ ಶೇ.25ರಷ್ಟು ಹಣ ನೀಡಲು ಬಾಕಿ ಇದೆ.

“ಲೋಕಸಭಾ ಚುನಾವಣೆ ವೇಳೆ ಬಳಸಿಕೊಂಡ ವಾಹನಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್‌ ಕಚೇರಿ ಮತ್ತು ಪೊಲೀಸ್‌ ಇಲಾಖೆಯಿಂದ ಸಂಪೂರ್ಣ ಹಣ ಪಾವತಿಯಾಗಿದೆ. ಆದರೆ ಮಹಾನಗರ ಪಾಲಿಕೆ ಮತ್ತು ತಾಲೂಕು ಕಚೇರಿಯಿಂದ ಹಣ ಬರಲು ಬಾಕಿ ಇದೆ. ಬೆಳ್ತಂಗಡಿ, ಸುಳ್ಯ ಮುಂತಾದೆಡೆ ಇನ್ನೂ ಹಣ ನೀಡಲು ಬಾಕಿ ಇದೆ. ಹೀಗಾಗಿ ವಾಹನ ನೀಡುವುದಿಲ್ಲ. ಸಂಘಟನೆ ವ್ಯಾಪ್ತಿಯಲ್ಲಿ ಬಾರದ ವಾಹನಗಳನ್ನು ನೀಡಿದರೆ ನಾವು ಜವಾಬ್ದಾರರಲ್ಲ’ ಎಂದು ಸಂಘದ ಅಧ್ಯಕ್ಷ ದಿನೇಶ್‌ ಕುಂಪಲ “ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ.

ವಾಹನ ಕೇಳ್ತಾರೆ; ಹಣ ಕೊಡಲ್ಲ
ಮಂಗಳೂರು ಸಹಿತ ದ.ಕ. ಜಿಲ್ಲೆಗೆ ಹೊರಭಾಗದಿಂದ ಬರುವ ಗಣ್ಯರ ಭದ್ರತೆ, ಚುನಾವಣೆ, ಪಲ್ಸ್‌ ಪೊಲೀಯೊ ಹಾಗೂ ಇತರ ತುರ್ತು ಸಂದರ್ಭ ಸಹಿತ ವಿವಿಧ ಕಾರಣಗಳಿಗೆ ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್‌ಗಳನ್ನು ದಿನ ಬಾಡಿಗೆ ರೀತಿಯಲ್ಲಿ ಹಣ ನಿಗದಿ ಮಾಡಿ ವಾಹನ ಪಡೆದು ಕೊಳ್ಳಲಾಗುತ್ತದೆ. ಆದರೆ ಬಳಕೆ ಮಾಡಿದ ವಾಹನಗಳಿಗೆ ಬಾಡಿಗೆ ನೀಡಲು ಇಲಾಖೆಗಳು ಹಿಂದೇಟು ಹಾಕುತ್ತವೆ. ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ 2016 ನ. 8ರಂದು ಕೊಂಡು ಹೋಗಿದ್ದ ಕೆಲವು ಟ್ಯಾಕ್ಸಿಗಳ ಬಿಲ್‌ ಪಾವತಿಗೆ ಹಲವು ತಿಂಗಳು ಕಾಯಬೇಕಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಭೇಟಿ ಸಂದರ್ಭ ಬಳಸಲಾಗಿದ್ದ ವಾಹನಗಳ ಬಿಲ್‌ ನೀಡಲು ಕೂಡ ಪೊಲೀಸ್‌ ಇಲಾಖೆ ಹಲವು ತಿಂಗಳು ಕಾಯಿಸಿತ್ತು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಳಕೆ ಮಾಡಲಾದ ಎಲ್ಲ ವಾಹನಗಳಿಗೆ ಹಣ ನೀಡಲಾಗಿತ್ತು. ಆದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳಸಿದ್ದ ವಾಹನಗಳ ಬಾಡಿಗೆ ಹಣವೂ ಸಂಪೂರ್ಣ ಸಂದಾಯವಾಗಿಲ್ಲ. ಈ ಕಾರಣಕ್ಕೆ ಈ ಚುನಾವಣೆಗೆ ವಾಹನ ನೀಡುವುದಿಲ್ಲ ಎಂದು ಸಂಘಟನೆ ಪ್ರಮುಖರು ತಿಳಿಸಿದ್ದಾರೆ.

-  ಧನ್ಯಾ ಬಾಳೆಕಜೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ