ಆಪ್ತ ಸಮಾಲೋಚಕರ ನೇಮಕ: ಉಪಕುಲಪತಿ ಸುತ್ತೋಲೆ

ಮಂಗಳೂರು ವಿವಿ ಸಂಯೋಜಿತ 210 ಕಾಲೇಜು

Team Udayavani, Jul 22, 2019, 5:05 AM IST

ಮಂಗಳೂರು: ವಿದ್ಯಾರ್ಥಿಗಳು ತಪ್ಪು ದಾರಿ ತುಳಿಯದಂತೆ ಮುಂಜಾಗ್ರತೆ ವಹಿಸಲು ಮಂಗಳೂರು ವಿವಿ ಸಂಯೋಜಿತ ಎಲ್ಲ 210 ಕಾಲೇಜುಗಳಲ್ಲಿ ಆಪ್ತ ಸಮಾಲೋಚಕರ ನೇಮಕವಾಗಲಿದೆ. ವಾರಕ್ಕೊಮ್ಮೆ ಅಥವಾ ಪ್ರತಿ ದಿನ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ಲಭಿಸಲಿದೆ.

ಆಪ್ತ ಸಮಾಲೋಚಕರನ್ನು ನೇಮಿಸಬೇಕು ಎಂದು ಮಂಗಳೂರು ವಿವಿ ಉಪಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಈಗಾಗಲೇ ಪ್ರಾಂಶುಪಾಲರಿಗೆ ಸುತ್ತೋಲೆ ಕಳುಹಿಸಿದ್ದಾರೆ. ಕೋಪ, ಒತ್ತಡಗಳಿಂದ, ಅಲ್ಪಾವಧಿಯ ಸಂತೋಷಕ್ಕಾಗಿ ಅಥವಾ ಇತರ ಕಾರಣಗಳಿಂದಾಗಿ ವಿದ್ಯಾರ್ಥಿಗಳು ಭವಿಷ್ಯಕ್ಕೆ ಮಾರಕವಾಗುವಂತಹ ಚಟುವಟಿಕೆಗಳಲ್ಲಿ ತೊಡಗದಂತೆ ಮುನ್ನೆಚ್ಚರಿಕೆ ವಹಿಸುವ ಮತ್ತು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ದುರ್ಘ‌ಟನೆ ಕಾರಣ
ಪುತ್ತೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ತೊಕ್ಕೊಟ್ಟು ಇರಿತ ಸೇರಿದಂತೆ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಒಂದೆರಡು ತಿಂಗಳಲ್ಲಿ ನಡೆದ ದುರ್ಘ‌ಟನೆಗಳನ್ನು ಗಮನದಲ್ಲಿರಿಸಿ, ಇಂಥವು ಮರುಕಳಿಸಬಾರದು ಎಂಬ ಉದ್ದೇಶವನ್ನು ವಿವಿ ಹೊಂದಿದೆ.

ಅಲ್ಲದೆ ಕೆಲವು ಕಾಲೇಜು ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಕ್ಕೆ ಬಲಿ ಬೀಳುತ್ತಿದ್ದಾರೆ. ಅಂಥವರ ಬಗ್ಗೆ ಗಮನಕ್ಕೆ ಬಂದಲ್ಲಿ ಆಪ್ತ ಸಮಾಲೋಚನೆ ನೀಡಿ ಪಾರು ಮಾಡುವ ಉದ್ದೇಶವನ್ನೂ ಇದು ಹೊಂದಿದೆ. ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುವುದು ಕಂಡುಬಂದಲ್ಲಿ ಅಥವಾ ಇತರರು ಮಾಹಿತಿ ನೀಡಿದಲ್ಲಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಕಾಲೇಜುಗಳ ಆಡಳಿತ ಮಂಡಳಿಗಳು ಮುಂದಾಗಬೇಕು ಎಂದು ವಿವಿ ಉಪ ಕುಲಪತಿ ಪ್ರೊ| ಎಡಪಡಿತ್ತಾಯ ತಿಳಿಸಿದ್ದಾರೆ.

ವಾರಕ್ಕೊಮ್ಮೆ ಕೌನ್ಸೆಲಿಂಗ್‌
ಕಾಲೇಜುಗಳಲ್ಲಿ ಈಗಾಗಲೇ ಕೌನ್ಸೆಲಿಂಗ್‌ ವ್ಯವಸ್ಥೆ ಇದ್ದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿಸಬೇಕು. ಇಲ್ಲವಾದಲ್ಲಿ ಶೀಘ್ರ ನೇಮಕ ಮಾಡಬೇಕು. ಆಪ್ತಸಮಾಲೋಚನೆ ಅವಶ್ಯವಿರುವ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಕೌನ್ಸೆಲಿಂಗ್‌ ನಡೆಸಬಹುದು. ಅಥವಾ ಶಾಶ್ವತ ಸಿಬಂದಿ ನೇಮಿಸಿಕೊಂಡು ದಿನಂಪ್ರತಿ ಕೌನ್ಸೆಲಿಂಗ್‌ ಅವಶ್ಯವಿರುವವರಿಗೆ ಒದಗುವಂತೆ ನೋಡಿಕೊಳ್ಳಬಹುದು.

ಅಂಗಡಿಗಳ ಮಾಹಿತಿ ಕಲೆ ಹಾಕಿ

ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಷಿದ್ಧವಾದರೂ ಕೆಲವು ಕಾಲೇಜುಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ತಂಬಾಕು ಉತ್ಪನ್ನಗಳು, ಮಾದಕ ದ್ರವ್ಯಗಳು ಸಿಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಕಾಲೇಜುಗಳ ವ್ಯಾಪ್ತಿಯಲ್ಲಿರುವ ಅಂಗಡಿಗಳ ಸರ್ವ ಮಾಹಿತಿಯನ್ನು ಕಾಲೇಜು ಸಂಬಂಧಿಸಿದವರು ಕಲೆ ಹಾಕಬೇಕು. ಅಲ್ಲದೆ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳನ್ನು ನೀಡುತ್ತಿರುವ ಜಾಲ, ಅದರಲ್ಲಿ ಭಾಗಿಯಾದವರ ಬಗ್ಗೆ ಸಂಶಯವಿದ್ದಲ್ಲಿ ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪ್ರೊ| ಎಡಪಡಿತ್ತಾಯ ಮನವಿ ಮಾಡಿದ್ದಾರೆ.

ಕಾಲೇಜುಗಳ ವಿದ್ಯಾರ್ಥಿಗಳು ಅನ್ಯ ಮಾರ್ಗ ತುಳಿಯದಂತೆ ಸೂಕ್ತ ಮಾರ್ಗದರ್ಶನ ಮತ್ತು ಅವರ ಮನಃಪರಿವರ್ತನೆ ಮಾಡಲು ಆಪ್ತ ಸಮಾಲೋಚಕರ ಅಗತ್ಯವಿದೆ. ಹಾಗಾಗಿ ವಿವಿ ಸಂಯೋಜಿತ ಎಲ್ಲ ಕಾಲೇಜುಗಳಲ್ಲಿ ಆಪ್ತಸಮಾಲೋಚಕರನ್ನು ನೇಮಿಸಿಕೊಳ್ಳಬೇಕು ಎಂದು ಸುತ್ತೋಲೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯ ಬೆಳಗಿಸುವುದು ಇದರ ಉದ್ದೇಶ.‌
– ಪ್ರೊ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ, ಉಪ ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ

-ಧನ್ಯಾ ಬಾಳೆಕಜೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ