ವಿಮಾನ ಸಿಬಂದಿ ಮೇಲೆ ದೌರ್ಜನ್ಯ, ಹಲ್ಲೆ ಪ್ರಕರಣ
Team Udayavani, Feb 15, 2018, 2:05 PM IST
ಮಹಾನಗರ: ಅದ್ಯಪಾಡಿಯಲ್ಲಿ ಫೆ. 9ರಂದು ರಾತ್ರಿ ಇಂಡಿಗೊ ಏರ್‌ಲೈನ್ಸ್ ನ ಓರ್ವ ಮಹಿಳಾ ಮತ್ತು ಪುರುಷ ಸಿಬಂದಿ ಮೇಲೆ ನಡೆದ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬುಧವಾರ ನಗರದ ಬಾವುಟಗುಡ್ಡೆಯ ಬಸ್ ತಂಗುದಾಣದಲ್ಲಿ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ಸುಹಾನ್ ಆಳ್ವ, ವಿದ್ಯಾರ್ಥಿನಿ ನಾಯಕರಾದ ಸಮಂತ, ಚೆರಿ, ಸೌಜನ್ಯಾ ಹೆಗ್ಡೆ, ಆಶಿಕ್ ಅವರು ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಂಡಿಗೊ ಸಂಸ್ಥೆ ಕೆಲವು ಸಿಬಂದಿ ಕೂಡ ಭಾಗವಹಿಸಿದ್ದರು.
ಮಂಗಳೂರು ಸ್ಮಾರ್ಟ್ ಸಿಟಿ ಆಗಿ ಬೆಳವಣಿಗೆ ಹೊಂದುತ್ತಿದ್ದು, ಈ ಸಂದರ್ಭದಲ್ಲಿ ಜನರು ಕೂಡ ಸ್ಮಾರ್ಟ್ ಆಗಬೇಕು. ಆದರೆ ಇಲ್ಲಿ ಅದಕ್ಕೆ ತದ್ವಿರುದ್ಧವಾಗಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದು ಖಂಡನೀಯ ಎಂದು ವಿದ್ಯಾ ದಿನಕರ್ ಹೇಳಿದರು.
ನೈತಿಕ ಪೊಲೀಸ್‌ಗಿರಿ ಮತ್ತು ದೌರ್ಜನ್ಯವನ್ನು ನಿಯಂತ್ರಿಸಲು ಪೊಲೀಸರು ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಮಹಿಳೆಯರು ಧ್ವನಿ ಎತ್ತ ಬೇಕು ಎಂದರು. ಇಂಡಿಗೊ ವಿಮಾನದ ಸಿಬಂದಿ ಮೇಲೆ ನಡೆದ ದೌರ್ಜನ್ಯದ ಆರೋಪಿಗಳನ್ನು 48 ಗಂಟೆಗಳ ಒಳಗಾಗಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರನ್ನು ಸುಹಾನ್ ಆಳ್ವ ಅಭಿನಂದಿಸಿದರು.