ವಿನಾಯಕ ಚತುರ್ಥಿ ಬರುವ ಮುನ್ನವೇ ಬಾಳೆಹಣ್ಣು ದುಬಾರಿ

Team Udayavani, Aug 18, 2017, 8:30 AM IST

ಬಜಪೆ: ಗಣೇಶನ ಚತುರ್ಥಿಗೆ ಇನ್ನೂ ಎಂಟು ದಿನ ಇರುವಾಗಲೇ ಕದಳಿ ಬಾಳೆ ಹಣ್ಣಿನ ದರ ಗಗನಕ್ಕೇರಿದೆ.
ಈಗಾಗಲೇ ಕೆ.ಜಿ.ಗೆ 100 ರೂ. ದಾಟಿದ್ದು, ಇದುವರೆಗಿನ ಹೆಚ್ಚಿನ ದರವಾಗಿದೆ. ಕೃಷಿಕರ ಅಂದಾಜಿನ ಪ್ರಕಾರ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಇದಕ್ಕೆ ಕಾರಣ ಕಳೆದ ಸಾಲಿನ ಮಳೆ ಕಡಿಮೆ ಎನ್ನಲಾಗುತ್ತಿದೆ.

ಬಾಳೆಗಿಡಗಳಿಗೆ ನೀರು ಅವಶ್ಯ. ಆದರೆ ಕಳೆದ ಸಾಲಿನಲ್ಲಿ ಮಳೆ ಸಾಕಷ್ಟು ಕಡಿಮೆಯಾಗಿದ್ದರಿಂದ ಹೆಚ್ಚಿನ ಬಾಳೆ ಗಿಡಗಳು ನೀರಿಲ್ಲದೆ ಒಣಗಿದವು. ಇದರ ಪರಿಣಾಮ ಇಳುವರಿ ಮೇಲೆ ಆಗಿದೆ. ಮೇ ತಿಂಗಳಲ್ಲಿ ಸಾವಿರಾರು ಬಾಳೆಗಿಡ ಸತ್ತಿದ್ದು, ಆಗಸ್ಟ್‌ ತಿಂಗಳಲ್ಲಿ ಬಾಳೆಯ ಫಸಲು ಕಡಿಮೆಯಾಗಿದೆ. ಇದೂ ದರ ಹೆಚ್ಚಾಗಲು  ಕಾರಣ ಎನ್ನುತ್ತಾರೆ ವ್ಯಾಪಾರಸ್ಥರು.
ನಾಗಪಂಚಮಿ,ಅಷ್ಟಮಿ. ಸೋಣ ತಿಂಗಳು, ಚೌತಿ ಹಬ್ಬಗಳೆಂದು ಒಂದರ ಹಿಂದೆ ಮತ್ತೂಂದು ಹಬ್ಬ ಸಾಲಾಗಿ ಬರುತ್ತಿವೆ. ಈ ಸಂದರ್ಭದಲ್ಲಿ ಬಾಳೆ ಹಣ್ಣಿಗೂ ಹೆಚ್ಚಿನ ಬೇಡಿಕೆ ಇರಲಿದೆ. ದೇವಸ್ಥಾನಗಳಲ್ಲಿ ಹೆಚ್ಚಾಗಿ ಕದಳಿ ಬಾಳೆಹಣ್ಣುಗಳನ್ನೇ ಬಳಸುವುದರಿಂದ ದರ ಏರಿಕೆಯಾಗಿದೆ.

ಮಾರುಕಟ್ಟೆಯಲ್ಲಿ ಒಂದು ವಾರದ ಹಿಂದೆ ಒಂದು ಕೆ.ಜಿ.ಗೆ ಕದಳಿ (ಪುತ್ತೂರು) 25 ರೂ ಇದ್ದರೆ, ಈಗ 75 ರೂ. ಆಗಿದೆ. ಕದಳಿ (ಅರಸೀಕೆರೆ) ಬಾಳೆಹಣ್ಣಿಗೆ 50 ರೂ. ಇದ್ದದ್ದು  85 ರೂ. ಗೆ ಏರಿದೆ. ನೇಂದ್ರ 30 ರೂ. ಇದ್ದದ್ದು ಈಗ 55 ರೂ., ಪಚ್ಚೆ ಬಾಳೆ 15 ರೂ. ಇದ್ದದ್ದು 50 ರೂ. ಗೆ ಏರಿಕೆಯಾಗಿದೆ. ಕೆಲವೆಡೆ ಕದಳಿ ಬಾಳೆಹಣ್ಣಿಗೆ ನೂರು ರೂ. ಗಳೂ ಇದೆ. 

ಕೃಷಿಕರಲ್ಲಿ ಹೆಚ್ಚಿದ ಆಸಕ್ತಿ
ಬಾಳೆಹಣ್ಣಿಗೆ ಬೆಲೆ ಬಂದಿರುವುದು ಗ್ರಾಹಕರಿಗೆ ಕೊಂಚ ನಿರಾಸಕ್ತಿ ಮೂಡಿಸಿ ದ್ದರೂ ಕೃಷಿಕರಿಗೆ ಆಸಕ್ತಿ ಮೂಡಿಸಿದೆ. ಬಾಳೆ ಗಿಡಕ್ಕೆ ಬೇಡಿಕೆ ಹೆಚ್ಚಿದೆ. ಹಾಗಾಗಿ 15 ರೂ. ಗೆ ಇದ್ದ ಬಾಳೆಸಸಿಗೆ 25 ರೂ. ಆಗಿದೆ. ಎಲ್ಲ ಕೃಷಿಕರು ಬಾಳೆ ಕೃಷಿಯತ್ತ ಒಲವು ತೋರುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ದರ ಕಡಿಮೆ ಯಾಗಬಹುದು ಎನ್ನುತ್ತಾರೆ ಪಡುಪೆರಾರ ಕತ್ತಲ್‌ಸಾರ್‌ನ ಕೃಷಿಕ ಆಶೋಕ್‌ ಶೇಣವ.

ಕದಳಿಗೆ ಬೇಡಿಕೆ
ಸುಮಾರು 15 ರಿಂದ 20 ಬಾಳೆ ಗೊನೆಗಳು ಸದಾ ನೇತಾಡುತ್ತಿದ್ದವು. ಕದಳಿ ಬಾಳೆಹಣ್ಣಿಗೆ ಹೆಚ್ಚು ಬೇಡಿಕೆಯಿದೆ. ಅರಸೀಕೆರೆ, ಪುತ್ತೂರು, ತಮಿಳುನಾಡು ಕಡೆಯಿಂದ ಈ ಬಾಳೆಹಣ್ಣುಗಳು ಬರುತ್ತಿದ್ದವು.ಈಗ ಫಸಲು ಕಡಿಮೆಯಾಗಿದೆ. ತಮಿಳುನಾಡಿನ ಬಾಳೆಹಣ್ಣು ಬರುವುದಿಲ್ಲ. ಅರಸೀಕೆರೆ ಬಾಳೆಹಣ್ಣು 48 ರಿಂದ 78 ಕ್ಕೆ ಏರಿದೆ. ಈ ತನಕ ಕೆ.ಜಿ.ಗೆ 100 ರೂ. ನಂತೆ ಇದುವರೆಗೆ ಮಾರಿಲ್ಲ. ಇದೇ ಪ್ರಥಮ ಬಾರಿ ಎಂಬುದು ಬಜಪೆ ಮಾರುಕಟ್ಟೆಯ ವ್ಯಾಪಾರಿ ಫಾರೂಕ್‌ ಅಭಿಪ್ರಾಯ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ