ಶಾಂತಿ ಸಭೆಗೆ ಬಿಜೆಪಿ ಬಹಿಷ್ಕಾರ, ರೈ ವಿಶ್ರಾಂತಿ ಪಡೆಯಲಿ; ಡಿವಿಎಸ್
Team Udayavani, Jul 13, 2017, 10:27 AM IST
ಮಂಗಳೂರು:ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗುರುವಾರ ಕರೆದಿರುವ ಶಾಂತಿ ಸಭೆಗೆ ಬಿಜೆಪಿ ಬಹಿಷ್ಕಾರ ಹಾಕಿದೆ.
ಶಾಂತಿ ಸಭೆ ಕುರಿತು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಇವತ್ತಿನ ಶಾಂತಿ ಸಭೆಗೆ ನಾವ್ಯಾರೂ ಹೋಗುವುದಿಲ್ಲ. ಜಿಲ್ಲೆಯಲ್ಲಿ ಶಾಂತಿ ಕದಡಿದವರ ಸಭೆಗೆ ನಾವ್ಯಾಕೆ ಹೋಗಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್, ರಮಾನಾಥ ರೈ ಅವರ ಬೆಂಬಲಿಗರ ಸಭೆಗೆ ನಾವು ಹೋಗಲ್ಲ. ರಮಾನಾಥ ರೈ ಅವರಿಗೆ ಅನಾರೋಗ್ಯ ಇದೆ. ಹಾಗಾಗಿ ಅವರು ವಿಶ್ರಾಂತಿ ಪಡೆಯಲಿ. ಅಷ್ಟೇ ಅಲ್ಲ 3 ದಿನಗಳ ಕಾಲ ದಕ ಜಿಲ್ಲೆಯಲ್ಲಿ ಸುತ್ತಾಟ ನಡೆಸುತ್ತೇನೆ ಎಂದುಹೇಳಿದರು.
ಶಾಂತಿ ಸಭೆಗೆ ಜಿಲ್ಲಾಡಳಿತ ಎಲ್ಲರನ್ನೂ ಆಹ್ವಾನಿಸಿಲ್ಲ. ಹಿಂದೂ ಸಂಘಟನೆಗಳಿಗೂ ಆಹ್ವಾನ ನೀಡಿಲ್ಲ ಎಂದು ಡಿವಿ ಆರೋಪಿಸಿದರು.
ಮತೀಯ ಸಂಘಟನೆಗಳಿಂದ ಜೀವಬೆದರಿಕೆ
ಸಾರ್ವಜನಿಕ ಜೀವನದಲ್ಲಿ ಅಲರ್ಟ್ ಆಗಿರಿ ಎಂದು ಸಂಸದೆ ಶೋಭಾ ಕರಂದ್ಲಾಜೆ, ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ಶೋಭಾ ಕರಂದ್ಲಾಜೆ ಅವರು ಆಪ್ತ ನಾಯಕರಲ್ಲಿ ಹೇಳಿಕೊಂಡಿರುವುದಾಗಿ ಮಾಧ್ಯಮದಲ್ಲಿ ವರದಿಯಾಗಿದೆ.