ಬಸ್ ಢಿಕ್ಕಿ: ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
Team Udayavani, Jan 16, 2020, 9:32 PM IST
ಸುರತ್ಕಲ್: ಬೈಕಂಪಾಡಿಯ ರಾ.ಹೆ. 66 ರಲ್ಲಿ ಸಂಭವಿಸಿದ ಅಪಘಾತದಲ್ಲಿ ಕೃಷ್ಣಾಪುರ 7ನೇ ವಿಭಾಗದ ನಿವಾಸಿ ಸುಂದರ ಸಾಲ್ಯಾನ್ (70) ಸಾವನ್ನಪ್ಪಿದ್ದಾರೆ.
ಇವರು ಗುರುವಾರ ಬೆಳಗ್ಗೆ ಬೈಕಂಪಾಡಿಯಲ್ಲಿ ಮನೆಯ ಕಡೆಗೆ ಬರಲು ಬಸ್ಸಿಗೆ ಕಾಯುತ್ತಿದ್ದಾಗ ಅತಿವೇಗದಿಂದ ಬಂದ ಕೃಷ್ಣಾಪುರಕ್ಕೆ ಹೋಗುವ ಸಿಟಿ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಸುಂದರ ಸಾಲ್ಯಾನ್ ಅವರನ್ನು ಬಸ್ಸು ಸುಮಾರು ದೂರ ಎಳೆದುಕೊಂಡು ಹೋಗಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರು ಪಣಂಬೂರು ನವ ಮಂಗಳೂರು ಬಂದರು ಮಂಡಳಿಯ ಮೆರೈನ್ ವಿಭಾಗದಲ್ಲಿ ಆಪರೇಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸರಳ ಮತ್ತು ಸಾತ್ವಿಕ ವ್ಯಕ್ತಿತ್ವದವರಾಗಿದ್ದ ಅವರು ವಿವಿಧ ಸಂಘ – ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಪರಿಸರದಲ್ಲಿ ಚಿರಪರಿಚಿತರಾಗಿದ್ದರು.