ಹ್ಯಾಂಡ್‌ಪಂಪ್‌ ಪರಿಶೀಲಿಸಿ, ಜಲಸಿರಿ ಯೋಜನೆ ಬಳಸಿ

Team Udayavani, May 22, 2019, 6:00 AM IST

ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಕುಡಿಯುವ ನೀರು ನಿರ್ವಹಣೆ ಕುರಿತ ಟಾಸ್ಕ್ಫೋರ್ಸ್‌ ಸಭೆ ನಡೆಯಿತು.

ಪುತ್ತೂರು: ಗ್ರಾಮೀಣ ಪ್ರದೇಶಗಳಲ್ಲಿ ನಿರುಪಯೋಗಿಯಾಗಿ ರುವ ಹ್ಯಾಂಡ್‌ಪಂಪ್‌ಗ್ಳನ್ನು ಮತ್ತೆ ಪರಿ ಶೀಲನೆ ನಡೆಸಬೇಕು. ಮರುಬಳಕೆಯ ಅವಕಾಶಗಳ ಕುರಿತು ಗ್ರಾ.ಪಂ.ಗಳಿಗೆ ತತ್‌ಕ್ಷಣ ನಿರ್ದೇಶನ ನೀಡಬೇಕು ಎಂದು ಶಾಸಕ ಸಂಜೀವ ಮಠಂದೂರು ನಿರ್ದೇಶನ ನೀಡಿದ್ದಾರೆ.

ಇತ್ತೀಚೆಗೆ ಮಿನಿ ವಿಧಾನ ಸೌಧದಲ್ಲಿರುವ ತಹಶೀಲ್ದಾರ್‌ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ನಿರ್ವಹಣೆ ಕುರಿತ ಟಾಸ್ಕ್ ಫೋರ್ಸ್‌ ಸಭೆಯಲ್ಲಿ ಅವರು ಮಾತನಾಡಿದರು. ಆಪತಾºಂಧವ ಎನಿಸಿದ ಹ್ಯಾಂಡ್‌ಪಂಪ್‌ ಗಳನ್ನು ಪತ್ತೆ ಮಾಡಿ ಅವುಗಳಲ್ಲಿ ನೀರು ಇದ್ದರೆ ಮತ್ತೆ ಬಳಕೆಗೆ ಅವಕಾಶ ಮಾಡಿ ಕೊಡಬೇಕು. ಇದರ ನೀರು ಕುಡಿಯಲು ಸಾಧ್ಯವಿಲ್ಲದಿದ್ದರೂ ಇತರ ಉದ್ದೇಶಗಳಿಗೆ ಬಳಸಬಹುದು. ಈ ನಿಟ್ಟಿನಲ್ಲಿ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಲಸಿರಿ ಯೋಜನೆ ಬಳಸಿ
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬರ ನೀಗಿಸಲು ನದಿ ನೀರನ್ನು ಬಳಕೆ ಮಾಡಿಕೊಳ್ಳಲು ಜಲಸಿರಿ ಯೋಜನೆ ಬಳಸಿಕೊಳ್ಳಬೇಕು. ಈ ಕುರಿತು ಬೇಡಿಕೆ ಸಲ್ಲಿಸುವಂತೆ ಶಾಸಕರು ಜಿ.ಪಂ. ಎಂಜಿನಿ ಯರಿಂಗ್‌ ಇಲಾಖಾಧಿಕಾರಿಗಳಿಗೆ ಶಾಸಕ ಮಠಂದೂರು ಸೂಚಿಸಿದರು.

ತೆರೆದ ಬಾವಿಗಳು ಕಾಣುವುದೇ ಇಲ್ಲ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಆವಶ್ಯಕತೆ ಪೂರೈಸಲು ಪ್ರಮುಖ ನದಿಗಳಾದ ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳಲ್ಲಿ ವೆಂಟೆಡ್‌ ಡ್ಯಾಂ ನಿರ್ಮಿಸಿ ಅವುಗಳ ಮುಖಾಂತರ ನೀರನ್ನು ಬಳಸಿಕೊಳ್ಳಲು “ಜಲಸಿರಿ ಯೋಜನೆ’ಯಲ್ಲಿ ಜೋಡಿಸಿಕೊಳ್ಳುವುದು ಸೂಕ್ತ ಎಂದು ಶಾಸಕರು ಸಲಹೆ ನೀಡಿದರು.

ಪ್ರತಿಕ್ರಿಯಿಸಿದ ಜಿ.ಪಂ. ಎಂಜಿನಿ ಯರಿಂಗ್‌ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ಸತ್ಯೇಂದ್ರ ಸಾಲ್ಯಾನ್‌, ನೇತ್ರಾವತಿ, ಕುಮಾರಧಾರಾ ನದಿಗಳ ನೀರನ್ನು ನಗರ ಪ್ರದೇಶಗಳ ಬೇಡಿಕೆ ಪೂರೈಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಗ್ರಾ.ಪಂ. ವ್ಯಾಪ್ತಿಯ ಬಳಕೆಗೆ ಸಾಧ್ಯತೆ ಕಡಿಮೆ ಎಂದರು.

ಬಂಟ್ವಾಳ ತಾಲೂಕಿನಲ್ಲಿ ಪ್ರಮುಖ ನದಿಗಳ ನೀರನ್ನು ಗ್ರಾಮೀಣ ಪ್ರದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಅದೇ ರೀತಿ ಪುತ್ತೂರಿನಲ್ಲಿಯೂ ಕಾರ್ಯಗತ ವಾಗಬೇಕು. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರ ಚರ್ಚಿಸಿ ಕ್ರಮ ಕೈಗೊಳ್ಳುವುದು ಆವಶ್ಯಕ ಎಂದರು.

ಸಮಸ್ಯೆ ಬಗೆಹರಿಸಿ
ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ನ ಸಮಸ್ಯೆಯಿದೆ. ಕೆಲವು ಕಡೆಗಳಲ್ಲಿ ತಾಂತ್ರಿಕ ತೊಂದರೆಗಳು ಇದೆ. ಈ ಕುರಿತು ಗ್ರಾ.ಪಂ. ಅಧಿಕಾರಿಗಳು ಹಾಗೂ ಅಧ್ಯಕ್ಷರೊಂದಿಗೆ ಚರ್ಚಿಸಿ ಪರಿ ಹರಿಸಿಕೊಳ್ಳಬೇಕು. ಕುಡಿಯುವ ನೀರಿನ ಪಂಪ್‌ಸೆಟ್‌ಗಳಿಗೆ ಪ್ರತ್ಯೇಕ ಟಿಸಿ ಅಳವಡಿಸುವುದು ಹೆಚ್ಚು ಸೂಕ್ತ ಎಂದು ಮೆಸ್ಕಾಂ ಅಧಿಕಾರಿ ರಾಮಚಂದ್ರ ತಿಳಿಸಿದರು. ಇನ್ನು ಕೆಲವೇ ದಿನಗಳಲ್ಲೇ ಮಳೆ ಬಂದರೆ ಒತ್ತಡ ಕಡಿಮೆಯಾಗುತ್ತದೆ. ಗ್ರಾಮೀಣ ಪ್ರದೇಶ ದಲ್ಲಿಯೂ ಕುಡಿಯುವ ನೀರಿಗೆ ಆದ್ಯತೆ ನೀಡಿ 24/7 ಮಾದರಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಶಾಸಕರು ಸೂಚಿಸಿದರು.

ತಿಂಗಳಿಗೆ ಬೇಕಾದಷ್ಟು ನೀರಿದೆ
ನಗರಸಭೆ ಅಧಿಕಾರಿಗಳೊಂದಿಗೂ ಇದೇ ಸಂದರ್ಭ ಶಾಸಕರು ಸಭೆ ನಡೆಸಿ ದರು. ನಗರಸಭಾ ವ್ಯಾಪ್ತಿಗೆ ಇನ್ನೂ ಒಂದು ತಿಂಗಳಿಗೆ ಬೇಕಾದಷ್ಟು ನೀರು ಉಪ್ಪಿನಂಗಡಿಯ ನೆಕ್ಕಿಲಾಡಿ ನಗರಸಭಾ ಆಣೆಕಟ್ಟಿನಲ್ಲಿ ಸಂಗ್ರಹವಿದೆ. ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಬಂದಿರುವುದರಿಂದ ನೀರಿನ ಪ್ರಮಾಣ ಹೆಚ್ಚಾಗಿದೆ. ನೀರು ಆಣೆಕಟ್ಟಿನಲ್ಲಿ ಭರ್ತಿ ಯಾಗಿ ಹೊರ ಹೋಗುತ್ತಿದೆ ಎಂದರು.

7 ಕೊಳವೆ ಬಾವಿ
ಉಪ್ಪಿನಂಗಡಿಯಿಂದ ನಗರಕ್ಕೆ ನೀರು ಸರಬರಾಜಿಗೆ ವಿದ್ಯುತ್‌ಗೆ ಎಕ್ಸ್‌ ಪ್ರಸ್‌ ಫೀಡರ್‌ ಇದೆ. ಅಲ್ಲಿಗೆ 33 ಕೆ.ವಿ. ವಿದ್ಯುತ್‌ನ ಆವಶ್ಯಕತೆಯಿದೆ. ನಗರದ ಐದು ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 10 ಕೊಳವೆಬಾವಿ ಮಂಜೂರಾಗಿದ್ದು, ಅವುಗಳಲ್ಲಿ 7 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಉಳಿದ ಮೂರನ್ನು ಆವಶ್ಯಕತೆಗೆ ಅನುಗುಣವಾಗಿ ಬಳಸಿಕೊಳ್ಳ ಲಾಗುವುದು ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.

ತಹಶೀಲ್ದಾರ್‌ ಡಾ| ಪ್ರದೀಪ್‌ ಕುಮಾರ್‌, ಜಿ.ಪಂ. ಎಂಜಿನಿಯರಿಂಗ್‌ ಇಲಾಖೆಯ ಸಹಾಯಕ ಎಂಜಿನಿಯರ್‌ ಭರತ್‌, ಜೂನಿಯರ್‌ ಎಂಜಿನಿಯರ್‌ ಗೋವರ್ಧನ್‌ ಹಾಗೂ ಸಂದೀಪ್‌, ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ನವೀನ್‌ ಭಂಡಾರಿ, ಮೆಸ್ಕಾಂ ಅಧಿಕಾರಿ ರಾಮಚಂದ್ರ, ಶಾಸಕರ ಆಪ್ತ ಸಹಾಯಕ ರತ್ನಪ್ರಸಾದ್‌ ಉಪಸ್ಥಿತರಿದ್ದರು.

ರಾಜ ಕಾಲುವೆ ಪತ್ತೆಹಚ್ಚಿ
ನಗರದಲ್ಲಿರುವ ಎಲ್ಲ ರಾಜ ಕಾಲುವೆಗಳನ್ನು ಪತ್ತೆ ಮಾಡಬೇಕು. ಅವುಗಳನ್ನು ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಿಸಿ ನೀರು ಹರಿದು ಹೋಗಲು ತೊಂದರೆಯಾಗುತ್ತಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಮತ್ತು ಅಂತಹ ಕಟ್ಟಡಗಳ ಪರವಾನಿಗೆ ರದ್ದುಗೊಳಿಸಬೇಕು. ದೇವಾಲಯದ ಪಕ್ಕದ ತಡೆಗೋಡೆ ಏರಿಸುವುದು, ಹಾಗೂ ಭವಿಷ್ಯದ ದೃಷ್ಟಿಯಿಂದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತ್ಯಾಜ್ಯ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ನಗರಸಭಾ ಅಧಿಕಾರಿಗಳಾದ ಅರುಣ್‌ ಹಾಗೂ ವಸಂತ್‌, ಸದಸ್ಯ ಅಶೋಕ್‌ ಶೆಣೈ ಸಭೆಯಲ್ಲಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ