ಸಮನ್ವಯ-ಸಂವರ್ಧನೆ; ಪಂಚಭಾಷಾ ಅಕಾಡೆಮಿ ಅಧ್ಯಕ್ಷರ ಸಂಕಲ್ಪ

ಉದಯವಾಣಿ ಸಂವಾದ

Team Udayavani, Oct 23, 2019, 5:45 AM IST

ಮಂಗಳೂರು: ಪ್ರಾದೇಶಿಕ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಉನ್ನತಿಗಾಗಿ ಕೊಡಗನ್ನು ಒಳಗೊಂಡಂತೆ ಕರಾವಳಿ ಭಾಗದ ಪಂಚಭಾಷಾ ಅಕಾಡೆಮಿಗಳು ಪರಸ್ಪರ ಸಮನ್ವಯದಿಂದ ಒಗ್ಗೂಡಿ ಕೆಲಸ ಮಾಡುವ ಮೂಲಕ ಭಾಷಾ ಸಾಮರಸ್ಯಕ್ಕೆ ಮಾದರಿಯಾಗುವ ಆಶಯ ವ್ಯಕ್ತಪಡಿಸಿವೆ.

ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ ಮತ್ತು ಕೊಡವ ಸಾಹಿತ್ಯ ಅಕಾಡೆಮಿಗಳ ನೂತನ ಅಧ್ಯಕ್ಷರೊಂದಿಗೆ ಮಂಗಳವಾರ “ಉದಯವಾಣಿ’ಯ ಮಂಗಳೂರು ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ದಯಾನಂದ ಕತ್ತಲಸಾರ್‌, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಜಗದೀಶ್‌ ಪೈ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮತ್ತು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ
ಡಾ| ಪಾರ್ವತಿ ಅಪ್ಪಯ್ಯ ಅವರು ತಮ್ಮ ಯೋಚನೆ- ಯೋಜನೆಗಳ ಕುರಿತು ಸುದೀರ್ಘ‌ ವಿಚಾರ ವಿನಿಮಯ ಮಾಡಿದರು. ಜತೆಗೆ ತಮ್ಮ ಅವಧಿಯಲ್ಲಿ ಸಾಹಿತ್ಯ ಅಕಾಡೆಮಿಗಳ ವಲಯದಲ್ಲಿ ಮೇಲ್ಪಂಕ್ತಿ ಹಾಕುವ ಇಚ್ಛೆ ಮತ್ತು ಭರವಸೆ ವ್ಯಕ್ತಪಡಿಸಿದರು.

ಪ್ರಾದೇಶಿಕ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿ ಕೊಡಗನ್ನು ಒಳಗೊಂಡಂತೆ ಕರಾವಳಿಯಲ್ಲಿ ಪಂಚ ಅಕಾಡೆಮಿಗಳಿದ್ದು, ಈ ಐದು
ಅಕಾಡೆಮಿಗಳು ಒಟ್ಟಾಗಿ ಇಲ್ಲಿನ ಭಾಷೆಗಳ ಉತ್ತೇಜನಕ್ಕೆ
ಕೈಜೋಡಿಸಬೇಕು ಎನ್ನುವ ಆಶಯದೊಂದಿಗೆ “ಉದಯವಾಣಿ’ಯು ಈ ಸಂವಾದಕ್ಕೆ ವೇದಿಕೆ ಕಲ್ಪಿಸಿತ್ತು.  ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌
ಮಾತನಾಡಿ, ತುಳು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೂ ಮೊದಲು ರಾಜ್ಯದ ಅಧಿಕೃತ ಭಾಷೆಗಳ ಪಟ್ಟಿಗೆ ಸೇರಬೇಕು. ಇದಕ್ಕೆ ಈ ಭಾಗದ ಇತರ ಅಕಾಡೆಮಿಗಳ ಸಹಕಾರ ಬೇಕು ಎಂದರು.

ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಮಾತನಾಡಿ, ತುಳುಭವನ ಈಗಾಗಲೇ ನಿರ್ಮಾಣವಾಗಿದೆ. ಹಾಗೆಯೇ ಬ್ಯಾರಿ, ಕೊಂಕಣಿ ಮತ್ತು ಅರೆಭಾಷೆ ಭವನಗಳನ್ನು ಒಟ್ಟಿಗೆ ಸ್ಥಾಪಿಸಬೇಕು. ಹಾಗಾದರೆ ಎಲ್ಲ ಅಕಾಡೆಮಿಗಳು ಒಂದಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಜತೆಗೆ ಸರಕಾರದಿಂದಲೂ ವಿಶೇಷ ಅನುದಾನ ಪಡೆಯಲು ಸಾಂಘಿಕ ಬಲ ಲಭಿಸುತ್ತದೆ ಎಂದರು.

ಅಕಾಡೆಮಿಗಳೆಲ್ಲ ಸಮನ್ವಯದಿಂದ ಕೆಲಸ ಮಾಡುವುದಕ್ಕೆ ತಾವು ಕೂಡ ಪೂರ್ಣ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಕೊಂಕಣಿ ಅಕಾಡೆಮಿ ಅಧ್ಯಕ್ಷ ಡಾ| ಜಗದೀಶ ಪೈ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮತ್ತು ಕೊಡವ ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ ಅಭಿಮತ ವ್ಯಕ್ಯಪಡಿಸಿದರು.

ಸಂವಾದಕ್ಕೆ ಅಧ್ಯಕ್ಷರ ಶ್ಲಾಘನೆ
ಪಂಚ ಭಾಷಾ ಅಕಾಡೆಮಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ವಿಚಾರ ಹಂಚಿಕೊಳ್ಳಲು ಅವಕಾಶ ಒದಗಿಸುವ ಮೂಲಕ “ಉದಯವಾಣಿ’ ಅಕಾಡೆಮಿಗಳು ಒಂದಾಗಿ ಕಾರ್ಯನಿರ್ವಹಿಸಲು ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಇದನ್ನೇ ಪ್ರೇರಣೆಯಾಗಿ ಪಡೆದು ಮುನ್ನಡೆಯುತ್ತೇವೆ. ಅಕಾಡೆಮಿಗಳ ಹೊಸ ಅಧ್ಯಕ್ಷರನ್ನು ಪ್ರಾರಂಭಿಕ ಹಂತದಲ್ಲಿಯೇ ಕರೆಸಿ ಸಂವಾದಕ್ಕೆ ವೇದಿಕೆ ಕಲ್ಪಿಸುವ ಮೂಲಕ ಮೊಗ್ಗಾದ ಹೂವನ್ನು ಅರಳಿಸುವ ಕೆಲಸವನ್ನು ಪತ್ರಿಕೆ ಮಾಡಿದೆ. ಯಾವುದೇ ಭಾಷೆಯನ್ನಾಡುವ ಜನರು ಸೀಮಿತ ವ್ಯಾಪ್ತಿಯೊಳಗಿದ್ದರೂ ಒಗ್ಗಟ್ಟಿನಿಂದ ಮುನ್ನಡೆದಾಗ ಆ ಭಾಷೆ ಸರ್ವ ವ್ಯಾಪಿಯಾಗಿ ಬೆಳೆಯುವ ಸಾಧ್ಯತೆಗಳನ್ನು ಈ ಸಂವಾದ ತೆರೆದಿಟ್ಟಿದೆ ಎಂದು ಎಲ್ಲ ಐದು ಅಕಾಡೆಮಿಗಳ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಅಧ್ಯಕ್ಷರು ತಮ್ಮ ಮಾತೃಭಾಷೆಯಲ್ಲಿ ಸಂದೇಶ ನೀಡಿದರು.

ತುಳು ರಾಜ್ಯ ಭಾಷೆಯಾಗಲಿ
ತುಳು ಭಾಷೆಗೆ ಮೊದಲು ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಪ್ರಮುಖರ ನೇತೃತ್ವದಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು. ವಿಶ್ವ ಮಟ್ಟದ ತುಳು ಸಮ್ಮೇಳನ, ಮಕ್ಕಳ ತುಳು ಸಮ್ಮೇಳನ, ಶಾಲಾ ಮಕ್ಕಳಿಗೆ ತುಳುನಾಡಿನ ಆಟೋಟಗಳನ್ನು ಪರಿಚಯಿಸುವ ಕ್ರೀಡಾಕೂಟ, ತುಳು ಪಠ್ಯವನ್ನು ದ್ವಿತೀಯ ಪಿಯುಸಿ ವರೆಗೆ ವಿಸ್ತರಿಸುವ ಕಾರ್ಯಕ್ರಮ ಆಯೋಜಿಸಲಾಗುವುದು. ತುಳು ಕಲಾವಿದರಿಗೆ ಮಾಸಾಶನ ಏರಿಸುವ ಹಾಗೂ ಪಾಡªನದ ದಾಖಲೀಕರಣಕ್ಕೆ ಆದ್ಯತೆ ನೀಡಲಾಗುವುದು.
-ದಯಾನಂದ ಕತ್ತಲಸಾರ್‌

ಕೊಂಕಣಿ ಭವನಕ್ಕೆ ಪ್ರಯತ್ನ
ಕೊಂಕಣಿ ಮಾತನಾಡುವ ಎಲ್ಲ 42 ಸಮುದಾಯ ಗಳ ಜನರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕೊಂಕಣಿ ಭಾಷೆ, ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೊಂಕಣಿ ಭವನ ನಿರ್ಮಾಣಕ್ಕೂ ಪ್ರಯತ್ನಿಸಲಾಗುವುದು. ಕೊಂಕಣಿಯನ್ನು ಭಾಷೆಯಾಗಿ ಕಲಿಯುವ ವಿದ್ಯಾರ್ಥಿಗಳಿಗೆ ವೃತ್ತಿ ಭದ್ರತೆ, ವರ್ಷಕ್ಕೊಮ್ಮೆ ಕೊಂಕಣಿ ಸಮ್ಮೇಳನ, ವಿವಿಧ ಕ್ಷೇತ್ರಗಳಲ್ಲಿನ ಕೊಂಕಣಿ ಸಾಧಕರನ್ನು ಮತ್ತು ಸಂಸ್ಥೆಗಳನ್ನು ಗುರುತಿಸಿ ಪ್ರಶಸ್ತಿ ನೀಡುವುದಕ್ಕೆ ಮೊದಲ ಆದ್ಯತೆ.
– ಡಾ| ಜಗದೀಶ್‌ ಪೈ

ಪಂಚಭಾಷಾ ಸಮ್ಮೇಳನ
ಬ್ಯಾರಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಮೂಲ್ಯ ಸೇವೆ ಸಲ್ಲಿಸಿದ ಕಲಾವಿದರಿಗೆ ಮಾಸಾಶನ, ಬ್ಯಾರಿ, ತುಳು, ಕೊಂಕಣಿ, ಅರೆ ಭಾಷೆ ಮತ್ತು ಕೊಡವ ಭಾಷಾ ಅಕಾಡೆಮಿಗಳನ್ನು ಒಟ್ಟು ಸೇರಿಸಿ ಪಂಚಭಾಷಾ ಸಮ್ಮೇಳನ ಆಯೋಜಿಸುವ ಚಿಂತನೆಯಿದೆ. ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸೇವೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಜಾತಿ, ಧರ್ಮದ ನೆರಳು ಬೀಳಬಾರದು.
– ರಹೀಂ ಉಚ್ಚಿಲ

ಅರೆಭಾಷಾ ಮ್ಯೂಸಿಯಂ
ಅರೆಭಾಷಾ ಸಂಸ್ಕೃತಿ, ಸಾಧನೆಗಳನ್ನು ಪರಿಚಯಿ ಸುವ ಮ್ಯೂಸಿಯಂ ನಿರ್ಮಿಸುವ ಉದ್ದೇಶವಿದೆ. ಅರೆಭಾಷೆಯಲ್ಲಿ ಉತ್ತಮ ಪ್ರಾದೇಶಿಕ ಚಲನಚಿತ್ರ ಮತ್ತು ರಂಗ ಚಟುವಟಿಕೆಯ ದೂರದೃಷ್ಟಿ ಹೊಂದಲಾಗಿದೆ. ಸುಳ್ಯದ ಸ್ವಾತಂತ್ರÂ ಹೋರಾಟಗಾರರ ಬಗ್ಗೆ ದಾಖಲೀಕರಣ, ಅರೆಭಾಷೆ ಮಾತನಾಡುವ ಜನಾಂಗದ ಶುಭಕಾರ್ಯ ಪದ್ಧತಿಗಳನ್ನು ದಾಖಲೀಕರಿಸುವ ಯೋಚನೆಯಿದೆ. ಪಂಚಭಾಷಾ ಸಮ್ಮೇಳನದಿಂದ ಐದೂ ಭಾಷೆಗಳ ಸಾಂಸ್ಕೃತಿಕ ವಿನಿಮಯದ ಜತೆಗೆ ಸಾಮುದಾಯಿಕ ಒಗ್ಗೂಡುವಿಕೆಯೂ ಸಾಧ್ಯ.
-ಲಕ್ಷ್ಮೀನಾರಾಯಣ ಕಜೆಗದ್ದೆ

ಕೊಡವ ಭಾಷಿಕರ ವಿಶ್ವಮೇಳ
ಕೊಡವ ಭಾಷಾ ಸಂಸ್ಕೃತಿಗೆ ಸಂಬಂಧಿಸಿ ಆಚಾರ- ವಿಚಾರ, ಪದ್ಧತಿ ಪರಂಪರೆ ಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಇರುವ ಕೊಡವ ಭಾಷಿಕರನ್ನು ಒಂದೆಡೆ ಸೇರಿಸಿ ವಿಶ್ವ ಮೇಳ ನಡೆಸಲಾಗುವುದು. ಎಲ್ಲ ಕೊಡವ ಭಾಷಿಕರನ್ನು ಸೇರಿಸಿ ಸಂಸತ್‌ ಆಯೋಜನೆಯ ಯೋಚನೆಯಿದೆ. ತುಳುವಿನಂತೆ ಕೊಡವ ಭಾಷೆಯು 8ನೇ ಪರಿಚ್ಛೇದಕ್ಕೆ ಸೇರಬೇಕಿದೆ. ಈ ಪ್ರಯತ್ನಕ್ಕೆ ಉಳಿದ ಭಾಷಾ ಅಕಾಡೆಮಿಗಳೂ ಬೆಂಬಲ ನೀಡಬೇಕು.
ಡಾ| ಪಾರ್ವತಿ ಅಪ್ಪಯ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ