ಶಾಲೆಗೆ ನಿರಂತರ ಗೈರು: ಮಕ್ಕಳ ಮನವೊಲಿಸಿ ಕಳುಹಿಸಿದ ಪೊಲೀಸ್!
Team Udayavani, Nov 6, 2019, 3:45 AM IST
ವಿಟ್ಲ: ಶಾಲೆಗೆ ಸತತ ಗೈರಾಗುತ್ತಿದ್ದ ವಿದ್ಯಾರ್ಥಿಗಳಿಬ್ಬರನ್ನು ಮರಳಿ ಶಾಲೆಗೆ ತೆರಳುವಂತೆ ಮಾಡುವಲ್ಲಿ ವಿಟ್ಲ ಠಾಣೆಯ ಬೀಟ್ ಪೊಲೀಸ್ ಸಿಬಂದಿಯೋರ್ವರು ಯಶಸ್ವಿಯಾಗಿದ್ದಾರೆ. ಇಡ್ಕಿದು ಗ್ರಾಮದ ಕೋಲ್ಪೆಯ ಗೋಪಾಲಕೃಷ್ಣ – ಸುಂದರಿ ದಂಪತಿಯ ಮಕ್ಕಳಾದ ಶ್ರವಣ್ ಕುಮಾರ್ ಮತ್ತು ನಮಿತಾ ಕೋಲ್ಪೆ ಪ್ರಾಥಮಿಕ ಶಾಲೆಯಲ್ಲಿ ಕ್ರಮವಾಗಿ 7 ಮತ್ತು 3ನೇ ತರಗತಿಯ ವಿದ್ಯಾರ್ಥಿಗಳು.
ಅವರೀರ್ವರೂ ಒಂದು ತಿಂಗಳಿಂದ ಶಾಲೆಗೆ ಹಾಜರಾಗಿರಲಿಲ್ಲ. ಕೂಲಿ ಕಾರ್ಮಿಕರಾದ ಹೆತ್ತವರು ಕೂಡ ಮಕ್ಕಳನ್ನು ಶಾಲೆಗೆ ಹೋಗುವಂತೆ ಹುರಿ ದುಂಬಿಸುವ ಮನಸ್ಸು ಮಾಡಿರಲಿಲ್ಲ. ಮಕ್ಕಳನ್ನು ಹೇಗಾ ದರೂ ಶಾಲೆಗೆ ಮರಳಿ ಕರೆತರಬೇಕೆಂದು ಯೋಚಿ ಸಿದ ಶಿಕ್ಷಕರಾದ ಶ್ರೀಪತಿ ನಾಯಕ್ ಮತ್ತು ಪ್ರವೀಣ್ ಕುಮಾರ್ ಅವರು ಬೀಟ್ ಪೊಲೀಸ್ ಬಾಲಕೃಷ್ಣ ಅವರ ನೆರವು ಯಾಚಿಸಿದರು. ಅದರಂತೆ ಮೂವರೂ ಜತೆಗೂಡಿ ಗೋಪಾಲಕೃಷ್ಣ ಅವರ ಮನೆಗೆ ತೆರಳಿ ಮಕ್ಕಳು ಮತ್ತು ಹೆತ್ತವರೊಂದಿಗೆ ಮಾತನಾಡಿದರು. ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಹೇಳಿ ಶಾಲೆಗೆ ಬರುವಂತೆ ಮನವೊಲಿಸಿದರು.