ಸುಟ್ಟ ಸ್ಥಿತಿಯಲ್ಲಿ ದಂಪತಿ ನಿಗೂಢ ಸಾವು

ತೊಕ್ಕೊಟ್ಟು ಚೆಂಬುಗುಡ್ಡೆ ಸಮೀಪ ಘಟನೆ

Team Udayavani, Jun 20, 2019, 9:39 AM IST

ಉಳ್ಳಾಲ : ತೊಕ್ಕೊಟ್ಟು ಚೆಂಬುಗುಡ್ಡೆ ಸಮೀಪದ ಮನೆಯೊಂದರಲ್ಲಿ ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ದಂಪತಿ ಶವ ಬುಧವಾರ ಪತ್ತೆಯಾಗಿದೆ. ಆಕಸ್ಮಿಕವಾಗಿ ಮೃತಪಟ್ಟಿದ್ದಾರೋ ಅಥವಾ ಆತ್ಮಹತ್ಯೆಗೈದಿದ್ದಾರೋ ಎನ್ನುವುದು ಖಚಿತವಾಗಿಲ್ಲ.

ಮೂಲತಃ ಕೇರಳದ ತಲಶೆರಿ ಚಿಣ್ಣೇರಿ ನಿವಾಸಿಗಳಾಗಿದ್ದು, ಕೆಲವು ವರ್ಷಗಳಿಂದ ಚೆಂಬುಗುಡ್ಡೆಯಲ್ಲಿ ನೆಲೆಸಿದ್ದ ಪದ್ಮನಾಭ (75) ಮತ್ತು ವಿಮಲಾ (60) ಮೃತರು. ಬುಧವಾರ ಮಧ್ಯಾಹ್ನ ಅಳಿಯ ಉಮಾನಾಥ್‌ ಅವರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ದಂಪತಿಗೆ ಓರ್ವ ಪುತ್ರಿ ಮತ್ತು ಇಬ್ಬರು ಪುತ್ರರಿದ್ದಾರೆ. ಪುತ್ರಿಯನ್ನು ವಿಟ್ಲ ಕನ್ಯಾನಕ್ಕೆ ಮದುವೆ ಮಾಡಿಕೊಡಲಾಗಿದ್ದು, ಪುತ್ರರಿಬ್ಬರು ವಿವಾಹವಾಗಿ ಬೇರೆ ಮನೆಯಲ್ಲಿ ವಾಸವಿದ್ದಾರೆ. ದಂಪತಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಅನಾರೋಗ್ಯದಿಂದಿದ್ದ ಪದ್ಮನಾಭ ಆವರು ಇತ್ತೀಚೆಗಷ್ಟೆ ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದರು. ಪ್ರತಿದಿನ ಮಗಳೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು ಎನ್ನವಾಗಿದೆ.

ಕರೆ ಸ್ವೀಕರಿಸಿರಲಿಲ್ಲ
ಮಗಳು ಸೋಮವಾರ ಮಧ್ಯಾಹ್ನ ಕರೆ ಮಾಡಿದ್ದರು. ವಿಟ್ಲಕ್ಕೆ ಬರಲು ಕಾರು ಕಳುಹಿಸುತ್ತೇವೆ ಎಂದಿದ್ದರೂ, ದಂಪತಿ ಸದ್ಯ ಬರುವುದಿಲ್ಲವೆಂದು ತಿಳಿಸಿದ್ದರೆನ್ನಲಾಗಿದೆ. ಮಂಗಳವಾರ ಸಂಜೆ ಮತ್ತೆ ಕರೆ ಮಾಡಿದಾಗ ಯಾರೂ ಸ್ವೀಕರಿಸಿರಲಿಲ್ಲ. ಸಂಶಯಗೊಂಡು ಬುಧವಾರ ಅಳಿಯ ಉಮಾನಾಥ ಅವರು ಚೆಂಬುಗುಡ್ಡೆಗೆ ಬಂದಿದ್ದರು. ಈ ವೇಳೆ ಬಾಗಿಲು ಮುಚ್ಚಿದ್ದು, ನೊಣಗಳು ಹೊರಬರುವುದನ್ನು ಗಮನಿಸಿ ದಂಪತಿಯ ಇಬ್ಬರು ಪುತ್ರರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅಡುಗೆ ಕೋಣೆಯಲ್ಲಿ ದಂಪತಿ ಶವ ಸುಟ್ಟುಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವಗಳ ಸಮೀಪದಲ್ಲೇ ಚಿಮಿಣಿ ದೀಪ ಬಿದ್ದಿತ್ತು. ವಿದ್ಯುತ್‌ ಹೋದಾಗ ಚಿಮಿಣಿ ಉರಿಸಲು ವಿಮಲಾ ಮುಂದಾದಾಗ ದುರಂತ ಸಂಭವಿಸಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಸಂಬಂಧಿಕರ ಪ್ರಕಾರ ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿ, ಕಿಟಕಿಗೂ ಪರದೆಗಳನ್ನು ಅಡ್ಡವಾಗಿ ಕಟ್ಟಿರುವುದರಿಂದ ವಿಷ ಸೇವಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.

ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯಲ್ಲಿ ಶವಮಹಜರು ಪರೀಕ್ಷೆ ನಡೆದಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಎಸಿಪಿ ರಾಮರಾವ್‌, ಠಾಣಾಧಿಕಾರಿ ಗೋಪಿಕೃಷ್ಣ , ಎಸ್‌.ಐ. ಗುರುವಪ್ಪ ಕಾಂತಿ, ಎಎಸ್‌ ಐ ಶಾಂತಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸ್ವಾಭಿಮಾನಿ ದಂಪತಿ
ಯಾರೊಂದಿಗೂ ಹೆಚ್ಚು ಬೆರೆಯದ ದಂಪತಿ, ಪುತ್ರಿ ಮನೆಯಲ್ಲಿ ಸ್ವಲ್ಪ ಕಾಲವಿದ್ದು ಹಿಂದಿರುಗಿದ್ದರು. ಸರಕಾರದ ಪಿಂಚಣಿಯನ್ನೇ ಬಳಸಿ ಜೀವಿಸುತ್ತಿದ್ದರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ