ದ.ಕ: 901 ಶೌಚಾಲಯ ರಹಿತ ಕುಟುಂಬ

ಶೌಚಾಲಯ ನಿರ್ಮಾಣಕ್ಕೆ ಜಿ.ಪಂ. ಅಧ್ಯಕ್ಷರ ಸೂಚನೆ

Team Udayavani, Nov 23, 2019, 4:15 AM IST

ಸಾಂದರ್ಭಿಕ ಚಿತ್ರ

ಮಂಗಳೂರು: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 901 ಶೌಚಾಲಯ ರಹಿತ ಕುಟುಂಬಗಳಿವೆ. ಇವುಗಳಿಗೆ ಶೌಚಾಲಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ನೀರು
ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನೆ ನಂಬರ್‌ ಹೊಂದಿರುವ ಮತ್ತು ಹೊಂದದೇ ಇರುವ ಕುಟುಂಬಗಳಲ್ಲಿ ಶೌಚಾಲಯ ರಹಿತ ಕುಟುಂಬಗಳು 901 ಇವೆ. ಮನೆ ನಂಬರ್‌ ಹೊಂದಿರುವ 728 ಕುಟುಂಬಗಳು ಹಾಗೂ ಮನೆ ನಂಬರ್‌ ಹೊಂದದೇ ಇರುವ 173 ಕುಟುಂಬಗಳು ಶೌಚಾಲಯ ಹೊಂದಿಲ್ಲ ಎಂಬ ವರದಿ ಇದೆ ಎಂದು ಅಧ್ಯಕ್ಷರು ತಿಳಿಸಿದರು.

2018-19ನೇ ಸಾಲಿನಲ್ಲಿ ಸಾರ್ವಜನಿಕ ಶೌಚಾಲಯ ಯೋಜನೆಯಲ್ಲಿ ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ಭೌತಿಕ ಪ್ರಗತಿಯಲ್ಲಿ 50 ಘಟಕಗಳ ಗುರಿ ಹೊಂದಲಾಗಿದೆ. ಇದರಲ್ಲಿ 39 ಪೂರ್ಣಗೊಂಡು, 11 ಪ್ರಗತಿಯಲ್ಲಿವೆ. 2019-20ನೇ ಸಾಲಿನಲ್ಲಿ 71 ಶೌಚಾಲಯಗಳ ಗುರಿ ಇದೆ ಎಂದು ತಾಲೂಕುಗಳ ಕಾರ್ಯನಿರ್ವಹಣಾಧಿ ಕಾರಿಗಳು ತಿಳಿಸಿದರು.

ಮಂಗಳೂರು ತಾಲೂಕಿನ ಕಂದಾವರ, ಗುರುಪುರ, ಪಡುಪೆರಾರ ಮತ್ತು ಗಂಜಿಮಠ ಗ್ರಾ.ಪಂ.ಗಳ ಘನ/ದ್ರವ್ಯ ತ್ಯಾಜ್ಯವಿಲೇವಾರಿ ಘಟಕಗಳ ಕಾಮಗಾರಿ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

2019-20ನೇ ಸಾಲಿನ ಗ್ರಾಮೀಣ ನೀರು ಸರಬರಾಜು ಯೋಜನೆಯ ಒಟ್ಟು ಭೌತಿಕ ಗುರಿ 513 ಆಗಿದ್ದು, ಭೌತಿಕ ಸಾಧನೆ 224 ಆಗಿರುತ್ತದೆ. ಈ ಕಾಮಗಾರಿಗಳಿಗೆ ಅಂದಾಜು ವೆಚ್ಚ 13,353.48 ಲ.ರೂ. ಆಗಿದೆ.

ಮುಂದಿನ 6 ತಿಂಗಳುಗಳಲ್ಲಿ ಯಾವ ಕೆಲಸಗಳು ನಡೆಯುತ್ತವೆ ಎಂಬುದನ್ನು ನ. 30ರೊಳಗೆ ವಿವರ ಸಲ್ಲಿಸಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಡಾ| ಆರ್‌. ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿ ದರು. ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ