ಎಚ್1ಎನ್1: ಭಯಬೇಡ : ಮುನ್ನೆಚ್ಚರಿಕೆ ಇರಲಿ
Team Udayavani, Jul 19, 2017, 5:00 AM IST
ಎಚ್1ಎನ್1 ಸೋಂಕಿತರು ಮಾಸ್ಕ್ ಧರಿಸಿಕೊಂಡೇ ಓಡಾಡಬೇಕು. ಮನೆ ಹಾಗೂ ಸುತ್ತಲಿನ ಪರಿಸರವನ್ನು ಆದಷ್ಟು ಸ್ವತ್ಛವಾಗಿಟ್ಟು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳ ಬೇಕು. ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯುವುದರೊಂದಿಗೆ ವೈಯಕ್ತಿಕ ಸ್ವಚ್ಛತೆಗೆ ಗಮನ ನೀಡಬೇಕು.
ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗ ಹಾವಳಿಯೂ ಹೆಚ್ಚುತ್ತಿದೆ. ಮಲೇರಿಯಾ, ಡೆಂಗ್ಯೂ ನಡುವೆ ಎಚ್1ಎನ್1 ಈಗ ವ್ಯಾಪಕವಾಗುತ್ತಿದೆ. ಈಗಾಗಲೇ ಮಂಗಳೂರು, ಉಡುಪಿ ಭಾಗಗಳಲ್ಲಿ ಅತೀ ಹೆಚ್ಚು ಜನ ಎಚ್1ಎನ್1ನಿಂದ ಬಳಲುತ್ತಿದ್ದಾರೆ. ಈ ನಡುವೆ ಜ್ವರ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೂ ಅಷ್ಟೇ ಮುಖ್ಯ.
ಮಾರಣಾಂತಿಕವಲ್ಲ
ಕೆಮ್ಮುವುದು, ಸೀನುವುದರಿಂದ ವೈರಸ್ ಗಾಳಿಯ ಮುಖಾಂತರ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಎಚ್1ಎನ್1ಗೆ ಕಾರಣವಾಗುತ್ತದೆ. ಆರೋಗ್ಯವಂತ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾಗುವುದರಿಂದ ಈ ಜ್ವರ ಕಾಣಿಸಿಕೊಂಡರೂ ಮಾರಣಾಂತಿಕವಾಗಿ ಪರಿಣಮಿಸದು. ಆದರೆ ಎಳೆಯ ಮಕ್ಕಳು, 60 ವರ್ಷ ದಾಟಿದವರು, ಕಿಡ್ನಿ, ಹೃದಯ, ರಕ್ತನಾಳ ಸಂಬಂಧಿ ಕಾಯಿಲೆ ಇರುವವರು, ಅಸ್ತಮಾ, ಟಿಬಿಯಿಂದ ಬಳಲುತ್ತಿರುವವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ಅವರು ಜ್ವರದ ಬಗ್ಗೆ ಜಾಗ್ರತೆ ವಹಿಸಬೇಕು.
ಮುನ್ನೆಚ್ಚರಿಕೆಯಿರಲಿ
ಎಚ್1ಎನ್1 ಸೋಂಕು ಬಹುಬೇಗ ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ರೋಗವಾಗಿದೆ. ಈ ನಿಟ್ಟಿನಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮವನ್ನು ಅಗತ್ಯವಾಗಿ ಪಾಲಿಸಬೇಕಿದೆ. ಮನೆಯ ಅಕ್ಕಪಕ್ಕ ಅಥವಾ ಹೊರಗಡೆ ಸೋಂಕು ಇರುವ ವ್ಯಕ್ತಿಯಿಂದ ಆದಷ್ಟು ಅಂತರ ಕಾಯ್ದುಕೊಳ್ಳುವ ಮೂಲಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳಿಂದ ದೂರವಿರಬೇಕು. ಸೋಂಕಿತರು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿದುಕೊಳ್ಳಬೇಕು. ಸೋಂಕಿತರು ಮಾಸ್ಕ್ ಧರಿಸಿಕೊಂಡೇ ಓಡಾಡಬೇಕು. ಮನೆ ಹಾಗೂ ಸುತ್ತಲಿನ ಪರಿಸರವನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯುವುದರೊಂದಿಗೆ ವೈಯಕ್ತಿಕ ಸ್ವಚ್ಛತೆಗೆ ಗಮನ ಹರಿಸುವುದು ಉತ್ತಮ.
ದ್ರವಾಹಾರ ಸೇವಿಸಿ
ಯಾವುದೇ ಜ್ವರ ಕಂಡು ಬಂದರೂ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರಕಾರಿ ಆಸ್ಪತ್ರೆಗಳಿಗೆ ತೆರಳಬೇಕು. ಅಲ್ಲಿ ಅದು ಎಚ್1ಎನ್1 ಎಂಬುದಾಗಿ ಅನುಮಾನ ಬಂದರೆ ರೋಗಿಯ ಗಂಟಲು, ಮೂಗಿನ ಸ್ರಾವದ ಸ್ಯಾಂಪಲ್ ಪಡೆದು ಅದನ್ನು ತಪಾಸಣೆಗಾಗಿ ಬೇರೆಡೆಗೆ ಕಳುಹಿಸಿಕೊಡಲಾಗುತ್ತದೆ. ಪರೀಕ್ಷೆ ಮಾಡಿ ಸೋಂಕು ತಗಲಿರುವುದು ದೃಢಪಟ್ಟರೆ ಮುಂದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಬೇಕು. ಸೋಂಕಿತರು ವಿಶ್ರಾಂತಿಗೆ ಹೆಚ್ಚಿನ ಗಮನ ಹರಿಸಬೇಕು. ವಿಟಮಿನ್‌ಯುಕ್ತ ಆಹಾರ ಸೇವನೆ, ದ್ರವಾಹಾರ ಸೇವನೆ ಜತೆಗೆ ಹೆಚ್ಚೆಚ್ಚು ನೀರು ಕುಡಿಯಬೇಕು.
ಲಕ್ಷಣಗಳೇನು?
ತೀವ್ರತರವಾದ ಜ್ವರ, ಶೀತ, ತಲೆನೋವು, ಕೆಮ್ಮು, ಮೈ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ಎದೆ, ಹೊಟ್ಟೆಯಲ್ಲಿ ನೋವು, ತಲೆ ಸುತ್ತುವುದು, ಆಗಾಗ ವಾಂತಿ, ಅತಿಸಾರ ಭೇದಿ, ಎಚ್ಚರ ತಪ್ಪುವಿಕೆಯಂತಹ ಲಕ್ಷಣಗಳು ಎಚ್1ಎನ್1 ಗೆ ಕಾರಣವಾಗುತ್ತವೆ. ಇಂತಹ ಲಕ್ಷಣಗಳು ಕಂಡು ಬಂದರೆ ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಬೇಕು.
ನಿರ್ಲಕ್ಷಿಸಬೇಡಿ
ಎಚ್1ಎನ್1 ಬಗ್ಗೆ ಜನ ಭಯಭೀತರಾಗದೇ, ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಜ್ವರವನ್ನು ನಿರ್ಲಕ್ಷಿಸಬಾರದು. ಜ್ವರದ ಲಕ್ಷಣ ಕಂಡು ಬಂದ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ರೋಗ ಕಂಡುಬಂದರೆ ಹೆಚ್ಚೆಚ್ಚು ದ್ರವಾಹಾರ ಸೇವಿಸಬೇಕು.
– ಡಾ| ರಾಜೇಶ್, ವೈದ್ಯರು
– ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ
ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ
ಉಳ್ಳಾಲದಿಂದ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ: ಅದೃಷ್ಟ ಚೆನ್ನಾಗಿತ್ತು ನೋಡಿ..
ಮಂಗಳೂರು : ಚೆಕ್ ಬೌನ್ಸ್ ಪ್ರಕರಣ ; 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ
ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ