ಬೇಕಾದಷ್ಟು ನೀರಿದ್ದರೂ ಬೇಸಗೆಯಲ್ಲಿ ಕುಡಿಯುವ ನೀರಿಗೆ ಬರ

Team Udayavani, Nov 8, 2019, 4:06 AM IST

ಮಂಗಳೂರು ನಗರ ಬೆಳೆದಂತೆ ಇಲ್ಲಿನ ಸಮಸ್ಯೆಗಳು ಹೆಚ್ಚುತ್ತಿದ್ದು, ಟ್ರಾಫಿಕ್‌-ಪಾರ್ಕಿಂಗ್‌, ಒಳಚರಂಡಿ, ಫುಟ್‌ಪಾತ್‌, ತ್ಯಾಜ್ಯ ನಿರ್ವಹಣೆ ಜ್ವಲಂತ ನಗರ ಸಮಸ್ಯೆಗಳಾಗಿ ಕಾಡುತ್ತಿವೆ. 5 ವರ್ಷಗಳಿಗೊಮ್ಮೆ ಪಾಲಿಕೆ ಚುನಾವಣೆ ನಡೆದು ವಿವಿಧ ರಾಜಕೀಯ ಪಕ್ಷಗಳಿಂದ ಜನಪ್ರತಿನಿಧಿಗಳು ಆಯ್ಕೆಯಾಗಿ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇನ್ನೂ ದೊರಕಿಲ್ಲ. ಇದೀಗ ಮತ್ತೆ ಚುನಾವಣೆ ಬಂದಿದ್ದು, ನಗರದ ಆದ್ಯತೆಯ ನಾಗರಿಕ ಸಮಸ್ಯೆಗಳಿಗೆ ಮುಂದಿನ ಆಡಳಿತಾವಧಿಯಲ್ಲಾದರೂ ಮುಕ್ತಿ ಸಿಗಬೇಕೆಂಬುದು ಮತದಾರರ ನಿರೀಕ್ಷೆ. ಈ ಹಿನ್ನೆಲೆಯಲ್ಲಿ “ಸುದಿನ’ ಜನರ ಧ್ವನಿಯಾಗಿ “ನಗರ ಸಮಸ್ಯೆ-ಜನರ ನಿರೀಕ್ಷೆ’ ಅಭಿಯಾನವನ್ನು ಹಮ್ಮಿಕೊಂಡಿದೆ.

ಮಹಾನಗರ: ಬಗಲಲ್ಲಿ ಜಲರಾಶಿ; ಒಡಲಲ್ಲಿ ಕುಡಿಯುವ ನೀರಿಗೆ ತತ್ವಾರ. ಮಳೆಗಾಲದಲ್ಲಿ ನೆರೆ; ಬೇಸಗೆ ಕಾಲದಲ್ಲಿ ನೀರಿಗೆ ಇನ್ನಿಲ್ಲದ ಬರ. ಇದು ಮಂಗಳೂರು ನಗರದ ಪರಿಸ್ಥಿತಿ ವಾಸ್ತ ವಾಂಶ. ಹೀಗಾಗಿ, ಅರಬೀ ಸಮುದ್ರದ ತಡಿಯಲ್ಲಿ, ನೇತ್ರಾವತಿ, ಫಲ್ಗುಣಿ ನದಿಗಳನ್ನು ಮಡಲಲ್ಲಿಟ್ಟುಕೊಂಡಿರುವ ನಗರಕ್ಕೆ ಕುಡಿ ಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಕೂಡ ವರ್ಷದಿಂದ ವರ್ಷಕ್ಕೆ ದೊಡ್ಡ ಸವಾಲಾಗುತ್ತಿದೆ.

ನಗರದಲ್ಲಿ ಪ್ರಸ್ತುತ 78,968 ಮನೆಗಳಿಗೆ ಕುಡಿಯುವ ನೀರು ಸಂಪರ್ಕವಿದೆ. 761.11 ಕಿ.ಮೀ. ನೀರು ವಿತರಣೆ ಪೈಪ್‌ಲೈನ್‌ಗಳಿವೆ. ತುಂಬೆ ವೆಂಟೆಡ್‌ ಡ್ಯಾಂನ ನೀರು ಸಂಗ್ರಹ ಸಾಮರ್ಥ್ಯ ನಗರದ 2031ರ ವರೆಗೆ ಬೇಡಿಕೆ ಪೂರೈಕೆಗೆ ಸಾಕಾಗುವಷ್ಟಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ತುಂಬೆಯಿಂದ ದಿನಂಪ್ರತಿ 170 ಎಂಎಲ್‌ಡಿ ನೀರು ಸರಬರಾಜು ಆಗುತ್ತಿದೆ. ನಗರದ ನೀರಿನ ಬೇಡಿಕೆ 135 ಎಂಎಲ್‌ಡಿ. ಲೆಕ್ಕಚಾರದ ಪ್ರಕಾರ 35 ಎಂಎಲ್‌ಡಿ ನೀರು ಮಿಗತೆ ಇದೆ. ಇದರ ಜತೆಗೆ ನಗರ ವ್ಯಾಪ್ತಿಯಲ್ಲಿ ಪಾಲಿಕೆಗೆ ಸೇರಿದ 150ಕ್ಕೂ ಅಧಿಕ ಬೋರ್‌ವೆಲ್‌ ಕಾರ್ಯಾಚರಿಸುತ್ತಿವೆ. ಹೆಚ್ಚಿನ ವಸತಿ ಸಂಕೀರ್ಣಗಳು ತಮ್ಮದೆ ಆದ ಬೋರ್‌ವೆಲ್‌ಗ‌ಳನ್ನು ಹೊಂದಿವೆ. ಖಾಸಗಿ ಬಾವಿಗಳೂ ಇವೆ. ಇವುಗಳಿಂದ ಲಭ್ಯವಾಗುತ್ತಿರುವ ನೀರಿನ ಪ್ರಮಾಣದ ಲೆಕ್ಕಚಾರ ಪರಿಗಣಿಸಿ ದರೆ ಒಟ್ಟು ನಗರಕ್ಕೆ ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣ ಬಹಳಷ್ಟು ಹೆಚ್ಚಿದೆ. ಅದರೂ ಬೇಸಗೆಯಲ್ಲಿ ನಗರವೂ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದೆ. ಇದು ಒಟ್ಟು ನಗರ ನೀರು ಸರಬರಾಜು ವ್ಯವಸ್ಥೆಯಲ್ಲಿ ಲೋಪವಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ.

ಟ್ಯಾಂಕರ್‌ ನೀರೆ ಗತಿ
ಮಿಗತೆ ನೀರು ಇದ್ದರೂ ಕೊರತೆಗೆ ಮುಖ್ಯ ಕಾರಣ ನೀರು ವಿತರಣೆ ವ್ಯವಸ್ಥೆಯಲ್ಲಿನ ಲೋಪಗಳು. ಹೆಚ್ಚಿನ ಪ್ರದೇಶಗಳಿಗೆ 2 ದಿನಗಳಿಗೊಮ್ಮೆ 5 ತಾಸುಗಳ ನೀರು ನೀಡಲಾ ಗುತ್ತಿದೆ. ಕೊನೆಯಲ್ಲಿರುವ ಪ್ರದೇಶಗಳಿಗೆ ನೀರು ಹೋಗುತ್ತಿಲ್ಲ. ಮಳೆಗಾಲ, ಬೇಸಗೆ ಕಾಲಗಳೆಲ್ಲರಡಲ್ಲೂ ಇಲ್ಲಿಗೆ ಟ್ಯಾಂಕರ್‌ ನೀರೇ ಗತಿ.

ಕಾರ್ಯಗತಗೊಳ್ಳದ 24×7 ನೀರು ವಿತರಣೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24×7 ನೀರು ವಿತರಣೆ ಮಾಡುವ ಪ್ರಸ್ತಾಪ ಹಲವು ವರ್ಷಗಳಿಂದ ಇದೆ. ಅನುಷ್ಠಾನದ ನಿಟ್ಟಿನಲ್ಲಿ ಹಲವಾರು ವಿಶೇಷ ಸಭೆಗಳು, ಪ್ರಾತ್ಯಕ್ಷಿಕೆಗಳು, ಖಾಸಗಿ ಸಂಸ್ಥೆಗಳಿಂದ ಪ್ರಸ್ತಾವನೆಗಳು ನಡೆದಿವೆ. ಆದರೆ ಇನ್ನೂ ಇದು ಕಾರ್ಯಗತಗೊಂಡಿಲ್ಲ. ಇದೀಗ ಎಡಿಬಿ 2ನೇ ಹಂತದಲ್ಲಿ 24×7 ನೀರು ವಿತರಣೆ ಅನುಷ್ಠಾನವನ್ನು ಮುಂದಿ ಟ್ಟುಕೊಂಡು ಜಲಸಿರಿ ಶೀರ್ಷಿಕೆಯಡಿ ಯೋಜನೆ ಸಿದ್ಧಗೊಂಡಿದೆ. ಇದು ಕಾರ್ಯಗತಗೊಂಡು 24×7 ನೀರು ಲಭ್ಯವಾಗಲಿ ಎಂಬುದು ನಗರದ ಜನರ ನಿರೀಕ್ಷೆ.

ಸಾಮಾನ್ಯವಾಗಿ ಬೇಸಗೆಯಲ್ಲಿ ಮನೆಗೆ ಪಾಲಿಕೆ ಸರಬರಾಜು ಮಾಡುವ ನೀರು ಬರುವುದಿಲ್ಲ ಎನ್ನುವಾಗ ಜನರು ಕರೆ ಮಾಡುವುದು ಅಲ್ಲಿನ ಕಾರ್ಪೊರೇಟರ್‌ಗೆ. ಆದರೆ ಐದಾರು ದಿನ ನೀರು ಬರದಿದ್ದರೂ ಹಲವೆಡೆ ಸ್ಥಳೀಯ ಪಾಲಿಕೆ ಸದಸ್ಯರು ಸ್ಪಂದಿಸುವುದಿಲ್ಲ ಎನ್ನುವ ಆರೋಪ ಸಾರ್ವಜನಿಕರದ್ದು. ಹೀಗಿರುವಾಗ, ಇದೀಗ ಮಹಾನಗರ ಪಾಲಿಕೆ ಚುನಾವಣೆ ಬಂದಿದ್ದು, ಎಲ್ಲ ವಾರ್ಡ್‌ಗಳಲ್ಲಿಯೂ ಸಮರ್ಪಕ, ನಿರಂತರ ಕುಡಿಯುವ ನೀರು ಸರಬರಾಜು ಆಗಬೇಕು ಎನ್ನುವುದು ನಗರದ ಪ್ರತಿಯೊಬ್ಬರ ನಾಗರಿಕರ ಬಹು ಮುಖ್ಯ ನೀರಿಕ್ಷೆಯಾಗಿದೆ.

ಸಮಸ್ಯೆ ನಿವಾರಣೆಗೆ ಪೂರಕ ಕ್ರಮ ಅಗತ್ಯ
ಅಂದಾಜು ನೀರಿನ ಬೇಡಿಕೆ, ಲಭ್ಯ ನೀರಿನ ಪ್ರಮಾಣದ ಮಾಹಿತಿ ಕ್ರೋಡೀಕರಣ, ಇರುವ ಜಲ ಮೂಲಗಳು, ಅವುಗಳಲ್ಲಿ ದೊರೆ ಯುವ ನೀರಿನ ಪ್ರಮಾಣದ ನಿಖರ ಬಗ್ಗೆ ಮಾಹಿತಿ ಹೊಂದುವುದು, ಜನವರಿಯಿಂದ ಜೂನ್‌ವರೆಗೆ ನೇತ್ರಾವತಿ ನದಿ ಸಹಿತ ಜಿಲ್ಲೆಯ ನದಿಗಳ ಒಳಹರಿವು ಬಗ್ಗೆ ನಿರಂತರ ನಿಗಾ; ಅದನ್ನು ಆಧರಿಸಿ ನೀರು ಪೂರೈಕೆ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳುವುದು ಮುಂತಾದ ಕ್ರಮಗಳ ಬಗ್ಗೆ ಗಮನ ಹರಿಸುವುದು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪೂರಕವಾಗಬಹುದು. ನಗರದ ಕುಡಿಯುವ ನೀರಿನ ಬೇಡಿಕೆ-ಬಳಕೆ ಪ್ರಮಾಣ ಜಾಸ್ತಿಯಾದಂತೆ, ತುಂಬೆ ಡ್ಯಾಂನ ಎತ್ತರ ಹೆಚ್ಚಿಸುವುದಷ್ಟೇ ಪರಿಹಾರವಲ್ಲ. ಅದರ ಬದಲು ಮಳೆಕೊಯ್ಲು ವ್ಯವಸ್ಥೆ, ನೀರಿನ ಮಿತ ಬಳಕೆ ಮೂಲಕ ಅಂತರ್ಜಲ-ಜಲ ಸಂರಕ್ಷಣೆಯತ್ತ ಕೂಡ ನಗರವಾಸಿಗಳಲ್ಲಿ ಜಾಗೃತಿ ಮೂಡಿಸುವುದಕ್ಕೆ ಪಾಲಿಕೆಯಲ್ಲಿ ಮುಂದೆ ಅಧಿಕಾರದ ಚುಕಾಣಿ ಹಿಡಿಯುವ ಪಕ್ಷ ಗಮನಹರಿಸಿದರೆ ಉತ್ತಮ.

ಜಲಸಂಗ್ರಹ ಸ್ಥಾವರಗಳು
ಪ್ರಸ್ತುತ ನೀರು ಸರಬರಾಜು ವ್ಯವಸ್ಥೆಯಲ್ಲಿ ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ತುಂಬೆಯಲ್ಲಿ ನೀರೆತ್ತುವ ಸ್ಥಾವರ ಅಥವಾ ಪೈಪ್‌ಲೈನ್‌ನಲ್ಲಿ ಸಮಸ್ಯೆಯಾದರೆ ಅದು ದುರಸ್ತಿಯಾಗುವವರೆಗೆ ನಗರಕ್ಕೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ. ನಗರ ವ್ಯಾಪ್ತಿಯಲ್ಲಿ ಬೃಹತ್‌ ಜಲಸಂಗ್ರಹ ಸ್ಥಾವರ ನಿರ್ಮಾಣ ಇದಕ್ಕೆ ಪರಿಹಾರ ಒದಗಿಸಬಲ್ಲದು. ಈಗಾಗಲೇ ಎಂಆರ್‌ಪಿಎಲ್‌ನಲ್ಲಿ ಈ ಮಾದರಿಯ ಸ್ಥಾವರ ಇದೆ. ಜಲಸಿರಿ ಯೋಜನೆಯಲ್ಲಿ ಪಾಲಿಕೆ ವ್ಯಾಪ್ತಿಯ ಲೇಡಿಹಿಲ್‌ ಸಮೀಪದ ಅಫೀಸರ್ ಕ್ಲಬ್‌ ಬಳಿ, ಬಾಳದಲ್ಲಿ ತಲಾ 10 ಲಕ್ಷ ಲೀಟರ್‌ ಸಾಮರ್ಥ್ಯದ ಎರಡು ಜಲಸಂಗ್ರಹ ಸ್ಥಾವರಗಳ ನಿರ್ಮಿಸುವ ಪ್ರಸ್ತಾವನೆ ಇದೆ. ಇದರ ಹೊರತಾಗಿ ಕನಿಷ್ಠ 3ರಿಂದ 5 ಎಕ್ರೆ ಪ್ರದೇಶದಲ್ಲಿ ನಗರಕ್ಕೆ ಕನಿಷ್ಠ 15 ದಿನಗಳಿಗೆ ಸಾಕಾಗುವಷ್ಟು ಕುಡಿಯು ನೀರು ಸಂಗ್ರಹದ ಸ್ಥಾವರವೊಂದರ ನಿರ್ಮಾಣದ ಸಾಧ್ಯತೆಗಳನ್ನು ಪರಿಶೀಲಿಸಬಹುದಾಗಿದೆ.

ವಿತರಣೆಯಲ್ಲಿ ಸುಧಾರಣೆ ಅನಿವಾರ್ಯ
ಜಲ ಮೂಲಗಳು ಎಷ್ಟು ಉನ್ನತೀಕರಣವಾದರೂ ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆಯಾಗದಿದ್ದರೆ ಸಮಸ್ಯೆ ಪರಿಹಾರ ಕಾಣಲು ಸಾಧ್ಯವಿಲ್ಲ. ನೀರು ವಿತರಣೆ ಜಾಲದಲ್ಲಿರುವ ದೋಷಗಳಿಂದ ಬಹಳಷ್ಟು ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ.

ವಿತರಣೆಯಾಗುತ್ತಿರುವ ನೀರಿನ ಬಗ್ಗೆ ಪಾಲಿಕೆಯಲ್ಲಿ ನಿಖರ ಅಂಕಿ-ಅಂಶವಿಲ್ಲ. ಇನ್ನೂ ಮೀಟರ್‌ ಅಳವಡಿಸದಿರುವ ಸಂರ್ಪಕಗಳು ಬಹಳಷ್ಟಿವೆ. ಅಕ್ರಮ ಸಂಪರ್ಕಗಳಿವೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ-ಬದ್ಧತೆ ಪ್ರದರ್ಶಿತವಾಗುತ್ತಿಲ್ಲ. ಕುಡಿಯುವ ನೀರು ಸಂಪರ್ಕ ಜಾಲದ( ಪೈಪ್‌ಲೈನ್‌ ನೆಟ್‌ವರ್ಕ್‌) ನಿಖರ ನಕ್ಷೆ ಪಾಲಿಕೆಯಲ್ಲಿಲ್ಲ. ವಾಲ್‌ ಮನ್‌ಗಳು ಮಾಹಿತಿಯೇ ಆಧಾರ. ಎಡಿಬಿ 1ನೇ ಹಂತದ ಯೋಜನೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ರೂಪಿಸಿರುವ ಯೋಜನೆಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ.

ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳ ಸ್ಥಾಪನೆ, ಅದರಿಂದ ಹೊಂದಬಹುದಾದ ನೀರಿನ ಪ್ರಮಾಣದ ಬಗ್ಗೆ ಅಂದಾಜು ಮತ್ತು ಅದನ್ನು ಕೈಗಾರಿಕೆಗಳ ಬಳಕೆಗೆ ನೀಡುವುದು, ಸಮುದ್ರದ ಉಪ್ಪುನೀರು ಸಂಸ್ಕರಣೆ ಸೇರಿದಂತೆ ಪರ್ಯಾಯ ಮಾರ್ಗಗಳತ್ತವೂ ಗಮನ ಹರಿಸಬಹುದಾಗಿದೆ.

- ಕೇಶವ ಕುಂದರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ