ನರಿಂಗಾನ: ಬತ್ತಿದ ಕೊಳವೆಬಾವಿ; ಟ್ಯಾಂಕರ್‌ ನೀರೇ ಆಶ್ರಯ

ಗಡಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಗಡಿಬಿಡಿ

Team Udayavani, Apr 25, 2019, 11:32 PM IST

ಆಳ್ವರಬೆಟ್ಟು ಭಾಗದಲ್ಲಿ ವರ್ಷಗಳಿಂದ ಬತ್ತಿ ಹೋಗಿರುವ ಕೊಳವೆಬಾವಿ.

ಉದಯವಾಣಿ ನರಿಂಗಾನ ಗ್ರಾ.ಪಂ.ಕೆಲವು ಪ್ರದೇಶಗಳಿಗೆ ಭೇಟಿ ಕೊಟ್ಟ ಸಂದರ್ಭ ಜನತೆ ನೀರಿಗಾಗಿ ಪಡುವ ಕಷ್ಟವನ್ನು ವಿವರಿಸಿದ್ದಾರೆ. ಗ್ರಾ.ಪಂ. ವ್ಯಾಪ್ತಿಯ ಪೊಟ್ಟಳಿಗೆ, ತೌಡುಗೋಳಿ ಕ್ರಾಸ್‌, ಮೊಂಟೆ ಪದವು, ಆಳ್ವರಬೆಟ್ಟು, ಶಾಂತಿಪಲ್ಕೆ, ಕಲ್ಮಂಜ ಮೊದಲಾದ ಭಾಗಗಳಲ್ಲಿ ನೀರಿನ ಸಮಸ್ಯೆಯ ನೈಜ ದರ್ಶನವಾಗಿದೆ.

ಇದು ಸಾಕ್ಷಾತ್‌ ವರದಿಗಳ ಸರಣಿ. ಪ್ರತಿ ಬೇಸಗೆಯಲ್ಲಿ ಸ್ಥಳೀಯ ಆಡಳಿತ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ತಾತ್ಕಾಲಿಕ ಪರಿಹಾರಗಳನ್ನು ಕೈಗೊಳ್ಳುತ್ತದೆ. ಆದರೆ ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ಹರಿಸುವುದು ಕಡಿಮೆ. ಹಾಗಾಗಿಯೇ ಜನರು ಯಾಕಾದ್ರೂ ಬೇಸಗೆ ಬರುತ್ತಪ್ಪಾ ಎಂದು ಶಾಪ ಹಾಕುತ್ತಾ ದಿನದೂಡುತ್ತಾರೆ. ಈ ಜನರ ಕಷ್ಟಗಳನ್ನು ಯಥಾವತ್ತಾಗಿ ವರದಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸುವತ್ತ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು, ಶಾಸಕರ ಕಣ್ಣು ತೆರೆಸುವುದು ನಮ್ಮ ಉದ್ದೇಶ. ಅದಕ್ಕಾಗಿ ನಮ್ಮ ತಂಡ ನೀರಿನ ಅತಿಯಾದ ಸಮಸ್ಯೆ ಇರುವಲ್ಲಿಗೆ ಭೇಟಿ ನೀಡುತ್ತದೆ. ಆಗ ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ. ನೀರಿನ ಕೊರತೆ ಹೆಚ್ಚಿದ್ದರೆ 91080 51452 ನಂಬರ್‌ಗೆ ವಾಟ್ಸಾಪ್‌ ಮಾಡಿ.

ಬಂಟ್ವಾಳ: ಜಿಲ್ಲೆಯ ಅತ್ಯಂತ ಹೆಚ್ಚು ಡ್ರೈ ಏರಿಯಾ ಎಂದು ಗುರುತಿಸಲ್ಪಟ್ಟಿರುವ ಕರ್ನಾಟಕ- ಕೇರಳ ಗಡಿ ಗ್ರಾಮ ಬಂಟ್ವಾಳ ತಾ|ನ ನರಿಂಗಾನ ಗ್ರಾ.ಪಂ.ವ್ಯಾಪ್ತಿಯಲ್ಲಿ ನೀರಿನದ್ದೇ ಸಮಸ್ಯೆ. ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನತೆ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ನೀರಿಗಾಗಿ ಕೊಳವೆಬಾವಿ ತೆಗೆದರೂ ಪ್ರಯೋಜನ ಇಲ್ಲದ ಸ್ಥಿತಿ ಇದೆ.

ಗ್ರಾಮದಲ್ಲಿ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು, ಸದ್ಯಕ್ಕೆ ಟ್ಯಾಂಕರ್‌ಗಳ ಮೂಲಕ ನೀರನ್ನು ತಂದು ಟ್ಯಾಂಕ್‌ಗಳಿಗೆ ಹಾಕಿ ಅದನ್ನು ಪೈಪಿನ ಮೂಲಕ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಸೀಮಿತ ಬಜೆಟ್‌ನಲ್ಲಿ ಅದನ್ನೂ ಪೂರೈಸುವುದು ಗ್ರಾ.ಪಂ.ಗೆ ಹೊರೆಯಾಗಿ ಪರಿಣಮಿಸಿದೆ.

ಗ್ರಾ.ಪಂ. ಒಟ್ಟು 6500 ಜನಸಂಖ್ಯೆಯಲ್ಲಿ 4 ಸಾವಿರದಷ್ಟು ಮಂದಿ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಗ್ರಾ.ಪಂ.ಮಾಹಿತಿ ನೀಡುತ್ತಿದೆ. ಗ್ರಾ.ಪಂ.ನ ಕಲ್ಮಂಜ ಭಾಗದಲ್ಲಿ 2-3 ಕೊಳವೆ ಬಾವಿಗಳು ಬತ್ತಿ ಹೋಗಿವೆ. ಆಳ್ವರಬೆಟ್ಟು ಪ್ರದೇಶ ದಲ್ಲಿ 2 ಕೊಳವೆಬಾವಿಗಳು ಬತ್ತಿವೆ. ಜತೆಗೆ ಹೊಸ ಕೊಳವೆಬಾವಿ ಕೊರೆದರೂ ಪ್ರಯೋಜನ ಆಗುತ್ತಿಲ್ಲ.

ಗ್ರಾ.ಪಂ. ವ್ಯಾಪ್ತಿಗೆ ಕಿನ್ಯಾದಿಂದ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ನೇರವಾಗಿ ಟ್ಯಾಂಕ್‌ಗಳಿಗೆ ನೀಡುವುದರಿಂದ ನೀರು ಪೋಲು ಸಾಧ್ಯತೆ ಕಡಿಮೆ ಇದೆ. ಆಳ್ವರಬೆಟ್ಟು ಭಾಗದಲ್ಲಿ ನೀರನ್ನು ಟ್ಯಾಂಕರ್‌ ಮೂಲಕ ನೇರವಾಗಿ ಮನೆಗಳಿಗೆ ಪೂರೈಕೆ ಮಾಡಲಾಗುತ್ತಿದ್ದು, ಮನೆಯವರ ಟ್ಯಾಂಕ್‌ಗೆ ನೀರು ಪೂರೈಕೆ ಮಾಡುತ್ತಾರೆ.

ವಾರಕ್ಕೆ ಸಾವಿರ ಲೀ. ನೀರು
ನಮ್ಮ ಆಳ್ವರಬೆಟ್ಟು ಭಾಗಕ್ಕೆ ಪ್ರತಿ ಮನೆಗಳಿಗೆ ವಾರಕ್ಕೆ ಒಂದು ಸಾವಿರ ಲೀ. ನೀರು ನೀಡುತ್ತಿದ್ದಾರೆ. ಅದು ಗರಿಷ್ಠ ಎಂದರೆ 2 ದಿನಕ್ಕೆ ಮಾತ್ರ ಸಾಕಾಗುತ್ತದೆ. ಉಳಿದಂತೆ ನಾವೇ ದುಬಾರಿ ಬೆಲೆ ತೆತ್ತು ನೀರು ತರಬೇಕಾದ ಸ್ಥಿತಿ ಇದೆ. ಮನೆಯಲ್ಲಿ ಇದ್ದ ಬಾವಿಯಲ್ಲೂ ನೀರು ಪೂರ್ತಿ ಆವಿಯಾಗಿದೆ. ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳುವುದೆಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರಾದ ಹಸನ್‌ ಕುಂಞಿ-ಇನಾಸ್‌ ಡಿ’ಸೋಜಾ

ಗ್ರಾಮಸ್ಥರ ಬೇಡಿಕೆ
ಗ್ರಾಮ ಪಂಚಾಯತ್‌ನ ನೀರಿನ ಸಮಸ್ಯೆ ನೀಗಿಸುವುದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಹರೇಕಳ-ಪಾವೂರು ಭಾಗದಲ್ಲಿ ನೇತ್ರಾವತಿ ನದಿಗೆ ಕಿರು ಅಣೆಕಟ್ಟು ನಿರ್ಮಿಸಿ, ಅದರ ನೀರನ್ನು ಗ್ರಾಮ ಪಂಚಾಯತ್‌ನ ಭಾಗಕ್ಕೆ ತಂದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು. ಆದರೆ ಅದು ಇಂದು-ನಾಳೆ ಆಗುವ ಯೋಜನೆಯಲ್ಲ. ಪ್ರಸ್ತುತ ಗ್ರಾಮ ಪಂಚಾಯತ್‌ ಬಂಟ್ವಾಳ ತಾಲೂಕಿಗೆ ಸೇರಿದರೂ ಅದು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಹಾಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ. ಖಾದರ್‌ ಅವರು ಈ ಭಾಗದ ಶಾಸಕರಾಗಿದ್ದು, ಡ್ಯಾಮ್‌ನ ಪ್ರಸ್ತಾವವೂ ಅವರ ಮುಂದಿದೆ ಎಂದು ಗ್ರಾಮಸ್ಥರು ಅಭಿಪ್ರಾಯಿಸಿದ್ದಾರೆ.

ನೀರು ಪೂರೈಸಲು ಗ್ರಾ.ಪಂ. ಗರಿಷ್ಠ ಪ್ರಯತ್ನ
ಪ್ರಸ್ತುತ ಸಮಸ್ಯೆ ಇರುವ ಭಾಗಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿ ಜನರ ಭವಣೆಯನ್ನು ನೀಗಿಸುವ ನಿಟ್ಟಿನಲ್ಲಿ ಗ್ರಾ.ಪಂ. ಗರಿಷ್ಠ ಪ್ರಯತ್ನ ಮಾಡುತ್ತಿದೆ. ಆದರೂ ಗ್ರಾಮಸ್ಥರಿಗೆ ಬೇಕಾದಷ್ಟು ನೀರು ನೀಡುವುದಕ್ಕೆ ಸಾಧ್ಯವಿಲ್ಲ. ಮುಂದೆ ನೀರಿನ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯೂ ಇರಬಹುದು. ಸರಕಾರ ಶಾಶ್ವತ ಪರಿಹಾರ ಕ್ರಮಕೈಗೊಂಡರೆ ನೀರಿನ ಸಮಸ್ಯೆ ನೀಗಬಹುದು.
-ನಾಗೇಶ್‌, ಪ್ರಭಾರ ಪಿಡಿಒ, ನರಿಂಗಾನ ಗ್ರಾ.ಪಂ.

ಅರ್ಧಕ್ಕಿಂತಲೂ ಹೆಚ್ಚು ಸಮಸ್ಯೆ
ಹರೇಕಳ-ಪಾವೂರು ಭಾಗದಲ್ಲಿ ಡ್ಯಾಂ ನಿರ್ಮಿಸಿ ಗ್ರಾಮಸ್ಥರಿಗೆ ನೀರು ನೀಡುವ ಕುರಿತು ಕಳೆದ ಹಲವು ವರ್ಷಗಳಿಂದ ಮಾತುಗಳು ಕೇಳಿಬರುತ್ತಿವೆ. ಅದು ಶೀಘ್ರ ಅನುಷ್ಠಾನಗೊಳ್ಳಬೇಕಿದೆ. ಪ್ರಸ್ತುತ ಗ್ರಾ.ಪಂ.ನ ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ನೀರಿನ ಬವಣೆ ಅನುಭವಿಸುತ್ತಿದ್ದಾರೆ.
– ಅಬ್ದುಲ್‌ ಲತೀಫ್‌, ಗ್ರಾ.ಪಂ. ಸದಸ್ಯರು

ಕೇವಲ 2 ಟ್ಯಾಂಕರ್‌ ನೀರು
13 ವರ್ಷಗಳಿಂದ ವಾಟರ್‌ ಮ್ಯಾನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿವರ್ಷವೂ ಬೇಸಗೆಯಲ್ಲಿ ಇದೇ ಸಮಸ್ಯೆ ಇದೆ. ನನ್ನ ವ್ಯಾಪ್ತಿಯಲ್ಲಿ 6 ಕೊಳವೆಬಾವಿಗಳಿದ್ದು, ಎಲ್ಲದರಲ್ಲೂ ನೀರು ಗಣನೀಯ ಕುಸಿದಿದೆ. 4 ಟ್ಯಾಂಕ್‌ಗಳಿಗೆ 2 ಟ್ಯಾಂಕರ್‌ ನೀರು ಹಾಕಲಾಗುತ್ತಿದೆ. ಆದರೂ ಎಲ್ಲರಿಗೂ ನೀರು ಕೊಡುವುದು ಕಷ್ಟ ಸಾಧ್ಯ.
– ಶಂಕರ ಕುಲಾಲ್‌, ವಾಟರ್‌ಮ್ಯಾನ್‌

ಉದಯವಾಣಿ ಆಗ್ರಹ
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿ.ಪಂ. ತತ್‌ಕ್ಷಣ ಗಮನ ಹರಿಸಬೇಕು. ಹೆಚ್ಚುವರಿಯಾಗಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಯಾಗಬೇಕು. ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಶೀಘ್ರ ಕ್ರಮ ಕೈಗೊಳ್ಳಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ