ಮಾಜಿ ಮೇಯರ್‌ ವಾರ್ಡ್‌ ಅಭಿವೃದ್ಧಿ ಕಂಡರೂ ಆಗಬೇಕಾದ ಕೆಲಸ ಇನ್ನೂ ಇವೆ!

Team Udayavani, Oct 19, 2019, 5:07 AM IST

ಫಾದರ್‌ ಮುಲ್ಲರ್‌ ಆಸ್ಪತ್ರೆಯಿಂದ ಕೋಟಿ ಚೆನ್ನಯ ವೃತ್ತದವರೆಗೆ ಸಾಗುವ ರಸ್ತೆ

ಮಹಾನಗರ: ಒಂದೆಡೆ ಶೈಕ್ಷಣಿಕ ಸಂಸ್ಥೆಗಳು; ಇನ್ನೊಂದೆಡೆ ಧಾರ್ಮಿಕ ಸೇವಾ ಸಂಸ್ಥೆಗಳು; ಮತ್ತೂಂದೆಡೆ ಜನವಸತಿ ಪ್ರದೇಶವಿರುವ ಫಳ್ನೀರ್‌ ವಾರ್ಡ್‌ನಲ್ಲಿ ಮಾದರಿ ರಸ್ತೆ, ಚರಂಡಿ ವ್ಯವಸ್ಥೆ ಸಹಿತ ಕೆಲವು ಆದ್ಯತೆಯ ಅಭಿವೃದ್ಧಿಯು ಆಗಿದೆ. ಆದರೆ, ಕೆಲವು ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌, ಒಳ ಚರಂಡಿ ವ್ಯವಸ್ಥೆ, ಒಳರಸ್ತೆಗಳ ಮೇಲ್ದರ್ಜೆ ಸೇರಿದಂತೆ ಹಲವು ಆಗಬೇಕಾದ ಕೆಲಸಗಳು ಬಾಕಿಯಿವೆ.

ಪಾಲಿಕೆಯ 39ನೇ ವಾರ್ಡ್‌ ಆಗಿರುವ ಫ‌ಳ್ನೀರ್‌ನಲ್ಲಿ ಐದು ವರ್ಷದ ಅವಧಿಯಲ್ಲಿ ಗಮನಾರ್ಹ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಆಗಿರುವುದು ಕಾಣಿಸುತ್ತದೆ. ಏಕೆಂದರೆ, ಈ ವಾರ್ಡ್‌ ನಲ್ಲಿ ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಯಿಂದ ಕೋಟಿ ಚೆನ್ನಯ ವೃತ್ತದವರೆಗೆ ಮಂಗಳೂರಿನಲ್ಲಿಯೇ ಮಾದರಿಯಾಗಿರುವ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಆಕರ್ಷಕ ವಿದ್ಯುತ್‌ ದೀಪಗಳ ವ್ಯವಸ್ಥೆಯ ಮೂಲಕ ಈ ರಸ್ತೆ ಗಮನ ಸೆಳೆಯುತ್ತಿದೆ. ಈ ರಸ್ತೆಯ ಕೆಲ ವೆಡೆ ಫುಟ್‌ಪಾತ್‌ ಹಾಗೂ ಒಳಚರಂಡಿ ಕಾಮಗಾರಿ ಮಾಡಲಾಗಿದೆಯಾ ದರೂ, ಇನ್ನೂ ಇಲ್ಲಿ ಕಾಮಗಾರಿ ನಡೆಯಲು ಬಾಕಿ ಇವೆ. ಅದು ಕೂಡ ಪೂರ್ಣವಾದರೆ ಇದು ಮಾದರಿ ರಸ್ತೆಯಾಗಿ ಇನ್ನಷ್ಟು ಗಮನಸೆಳೆಯುವುದರಲ್ಲಿ ಅನು ಮಾನವಿಲ್ಲ.

ಜೆಪ್ಪು ಸೆಮಿನರಿ, ಸೈಂಟ್‌ ಜೋಸೆಫ್‌ ಚರ್ಚ್‌, ಸೈಂಟ್‌ ಜೋಸೆಫ್‌ ವರ್ಕ್‌ಶಾಪ್‌, ಸೈಂಟ್‌ ಜೋಸೆಫ್‌ ವೃದ್ಧಾಶ್ರಮ, ವೆಲೆನ್ಸಿಯಾ ಚರ್ಚ್‌, ಸೈಂಟ್‌ ಜೆರೋಸಾ ಶಾಲೆ, ರೋಶನಿ ನಿಲಯ, ಫಾತಿಮಾ ರಿಟ್ರೀಟ್‌ ಹೌಸ್‌ ಸಹಿತ ಹತ್ತು ಹಲವು ಧಾರ್ಮಿಕ ಸಂಸ್ಥೆಯ ಕೇಂದ್ರವಾಗಿರುವ ಈ ವಾರ್ಡ್‌ನ ನಿಕಟಪೂರ್ವ ಕಾರ್ಪೊರೇಟರ್‌ ಕಾಂಗ್ರೆಸ್‌ನ ಜೆಸಿಂತಾ ವಿಜಯ ಆಲ್ಫೆ†ಡ್‌ 2016-17ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಆಗಿ ಕಾರ್ಯವಹಿಸಿದ್ದರು. ಮೇಯರ್‌ ಆಗಿ ಹೆಚ್ಚು ಪ್ರಚಾರ ಬಯಸದೆ ಇದ್ದರೂ, ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯ ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಜನರು ಅಭಿಪ್ರಾಯಪಡುತ್ತಾರೆ. ಜನವಸತಿ ಪ್ರದೇಶ ಅಧಿಕವಿರುವ ಕಾರಣದಿಂದ ಮೂಲ ಸೌಕರ್ಯಗಳೇ ಇಲ್ಲಿ ಪ್ರಮುಖವಾಗುತ್ತದೆ. ಅದರಲ್ಲಿ ಕುಡಿ ಯುವ ನೀರಿನ ವ್ಯವಸ್ಥೆ, ವೆಲೆನ್ಸಿಯಾದಲ್ಲಿ ಸುಸಜ್ಜಿತ ವಾರ್ಡ್‌ ಕಚೇರಿ ಆರಂಭ, ವಾರ್ಡ್‌ನ ಜನರ ಸಮಸ್ಯೆಗಳಿಗೆ ಸ್ಪಂದನೆ, ರಸ್ತೆ, ವಿದ್ಯುತ್‌ ಸೇರಿದಂತೆ ಬೇರೆಬೇರೆ ಅಭಿವೃದ್ಧಿ ಚಟುವಟಿಕೆಗಳಲ್ಲಿ ಜೆಸಿಂತಾ ಹೆಚ್ಚು ತೊಡಗಿಸಿಕೊಂಡಿದ್ದರು ಎಂಬುದು ಕೆಲವರ ಅಭಿಪ್ರಾಯ.

ಒಳರಸ್ತೆ ಸುಧಾರಿಸಿಲ್ಲ
ಈ ವಾರ್ಡ್‌ನಲ್ಲಿ ಬಹುತೇಕ ಒಳರಸ್ತೆಗಳು ಕಾಂಕ್ರೀಟ್‌ ಭಾಗ್ಯ ಕಂಡಿಲ್ಲ; ಕನಿಷ್ಠ ಡಾಮರು ರಸ್ತೆಯ ಹೊಂಡ ಮುಚ್ಚುವ ಕಾರ್ಯವೂ ಇಲ್ಲಿ ಸಮರ್ಪಕವಾಗಿ ನಡೆದಿಲ್ಲ ಎಂಬುದು ಕೆಲವರು ದೂರು. ವೆಲೆನ್ಸಿಯಾದಿಂದ ಗೋರಿಗುಡ್ಡೆ ರಸ್ತೆ ಸೇರಿದಂತೆ ಬಹುತೇಕ ಒಳರಸ್ತೆಗಳಿಗೆ ಕಾಂಕ್ರೀಟ್‌ ಹಾಕಿದ್ದರೆ ವಾಹನ ಸವಾರರಿಗೆ ಉಪಯೋಗವಾಗುತ್ತಿತ್ತು ಎಂಬುದು ಅವರ ಆಗ್ರಹ.

ಇನ್ನು ಗೋರಿಗುಡ್ಡಕ್ಕೆ ಸಂಪರ್ಕಿಸುವಲ್ಲಿ ಇಕ್ಕಟ್ಟು ರಸ್ತೆ ಒಂದೆಡೆಯಾದರೆ, ಇಲ್ಲಿ ಕೆಲವೆಡೆ ಕುಡಿಯುವ ನೀರು ಸಮಸ್ಯೆಯೂ ಕೆಲವೊಮ್ಮೆ ಕಾಡುತ್ತಿದೆ ಎಂಬ ಅಭಿಪ್ರಾಯವೂ ಇದೆ. ಜತೆಗೆ, ನೆಹರೂ ರೋಡ್‌-ಗೋರಿಗುಡ್ಡೆ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆಯೂ ಬಹುವಾಗಿ ಕಾಡುತ್ತಿದೆ. ಇಲ್ಲಿ ಹೊಸದಾಗಿ ಒಳಚರಂಡಿ ಲೈನ್‌ ಇನ್ನಷ್ಟೇ ಮಾಡ ಬೇಕಾಗಿರುವ ಕಾರಣದಿಂದ ಸಮಸ್ಯೆ ಆಗುತ್ತಿದ್ದು ಇದಕ್ಕೆ ಇನ್ನು ಪರಿಹಾರ ಸಿಕ್ಕಿಲ್ಲ ಎಂಬುದು ಸ್ಥಳೀಯರ ದೂರು.

ಪ್ರಮುಖ ಕಾಮಗಾರಿ
– ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಯಿಂದ ಕೋಟಿ ಚೆನ್ನಯ ವೃತ್ತದವರೆಗೆ ಮಾದರಿ ರಸ್ತೆ ನಿರ್ಮಾಣ
– ವೆಲೆನ್ಸಿಯಾದಲ್ಲಿ ವಾರ್ಡ್‌ ಕಚೇರಿ ನಿರ್ಮಾಣ
– ವೆಲೆನ್ಸಿಯಾದಲ್ಲಿ ಪಾರ್ಕ್‌ ಅಭಿವೃದ್ಧಿ
– ಜೋಸೆಫ್‌ ನಗರದಲ್ಲಿ ರಸ್ತೆ ಅಭಿವೃದ್ಧಿ
– ಮರಿಯಾ ನಗರದಲ್ಲಿ ರಸ್ತೆ ಅಭಿವೃದ್ಧಿ
– ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸೂಕ್ತ ಪೈಪ್‌ಲೈನ್‌
– ಬಹುತೇಕ ಒಳರಸ್ತೆಗಳ ಅಭಿವೃದ್ಧಿ

ಫಳ್ನೀರ್‌ ವಾರ್ಡ್‌
ಭೌಗೋಳಿಕ ವ್ಯಾಪ್ತಿ: ಅತ್ತಾವರ ಸರಕಾರಿ ಶಾಲೆಯ ಹಿಂಭಾಗದಿಂದ ನಂದಿಗುಡ್ಡ ಸರ್ಕಲ್‌, ಸೈಂಟ್‌ ಜೋಸೆಫ್‌ ನಗರ, ಜೆಪ್ಪು ಸೆಮಿನರಿ, ಬಿ.ವಿ ರೋಡ್‌, ರೋಶನಿ ನಿಲಯ, ಸೂಟರ್‌ಪೇಟೆ 1 ಹಾಗೂ 2ನೇ ಕ್ರಾಸ್‌, ಗೋರಿಗುಡ್ಡೆ, ನೆಹರೂ ರೋಡ್‌ನಿಂದಾಗಿ ರಾ.ಹೆ. 66ಕ್ಕೆ ಸಂಪರ್ಕಿಸುವ ವ್ಯಾಪ್ತಿಯವರೆಗೆ ಈ ವಾರ್ಡ್‌ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದೆ.

ಒಟ್ಟು ಮತದಾರರು 6500
ನಿಕಟಪೂರ್ವ ಕಾರ್ಪೊರೇಟರ್‌-ಜೆಸಿಂತಾ ವಿಜಯ ಆಲ್ಫೆ†ಡ್‌ (ಕಾಂಗ್ರೆಸ್‌-ಮಾಜಿ ಮೇಯರ್‌)

“ಸಮಗ್ರ ವಾರ್ಡ್‌ ಅಭಿವೃದ್ಧಿ’
ವಾರ್ಡ್‌ನ ಸರ್ವತೋಮುಖ ಅಭಿವೃದ್ಧಿಗೆ ವಿಶೇಷವಾಗಿ ಶ್ರಮ ವಹಿಸಿದ್ದೇನೆ. ರೋಶನಿ ನಿಲಯ ಮುಂಭಾಗದಲ್ಲಿ ಮಾದರಿ ರಸ್ತೆ, ಪಾರ್ಕ್‌ ಸಹಿತ ವಿವಿಧ ಒಳರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಜನವಸತಿ ಸ್ಥಳದ ಬಹುತೇಕ ಸಮಸ್ಯೆ ನಿವಾರಣೆ ಹಾಗೂ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದೆ. ಈ ಮೂಲಕ ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
-ಜೆಸಿಂತಾ ವಿಜಯ ಅಲ್ಫ್ರೆಡ್‌,

-  ದಿನೇಶ್‌ ಇರಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ