ಇಂದಿನಿಂದ ಮಳೆ ಇಳಿಮುಖ ನಿರೀಕ್ಷೆ

Team Udayavani, Dec 3, 2019, 12:00 AM IST

ಮಂಗಳೂರು/ ಉಡುಪಿ: ಕರಾವಳಿಯಲ್ಲಿ ದಿನವಿಡೀ ಮೋಡಕವಿದ ವಾತಾವರಣ ಇದ್ದು, ಸಂಜೆಯ ವೇಳೆಗೆ ಮಳೆಯಾಗಿದೆ. ಅಲ್ಲಲ್ಲಿ ಹಗಲು ಕೂಡ ಆಗಾಗ ತುಂತುರು ಮಳೆ ಸುರಿಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಸೋಮವಾರ ಸಂಜೆ ವೇಳೆಗೆ ಮಳೆಯಾಗಿದೆ. ಮಂಗಳೂರಿನಲ್ಲಿ ಸಂಜೆ ಭಾರೀ ಮಳೆಯಾಗಿದೆ. ಹಳೆಯಂಗಡಿ, ವೇಣೂರು, ಬಂಟ್ವಾಳ, ಕಿನ್ನಿಗೋಳಿ, ವಿಟ್ಲದಲ್ಲಿ ಹನಿ ಮಳೆಯಾದರೆ, ಉಳ್ಳಾಲ ಸುತ್ತಮುತ್ತ, ಪುತ್ತೂರು, ಸುಳ್ಯದಲ್ಲಿಯೂ ಮಳೆ ಬಂದಿದೆ.

ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ತುಂತುರು ಮಳೆಯಾಗಿದೆ. ಸಿದ್ದಾಪುರ, ಕಾರ್ಕಳ, ಕುಂದಾಪುರ, ಪಡುಬಿದ್ರಿ, ಕಾಪು, ಉಡುಪಿಗಳಲ್ಲಿ ತುಂತುರು ಮಳೆ ಸುರಿದಿದೆ. ಮಧ್ಯಾಹ್ನದ ಅನಂತರ ಬಹುತೇಕ ಕಡೆ ಮೋಡ ಕವಿದ ವಾತಾವರಣವಿತ್ತು.

ಡಿ. 3-6: ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ
ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಡಿ. 3ರಿಂದ 6ರ ತನಕ ಅರಬ್ಬೀ ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅನಾಹುತವನ್ನು ತಡೆಯುವ ಸಲುವಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಮತ್ತು ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರಿಕೆ ದೋಣಿಗಳು ತತ್‌ಕ್ಷಣವೇ ದಡ ಸೇರಬೇಕು ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಮಳೆ ದೂರ?
ಹಿಂದೂ ಮಹಾಸಾಗರ ಮತ್ತು ಅರಬೀ ಸಮುದ್ರ ದಲ್ಲಿ ಲಕ್ಷದ್ವೀಪದ ಬಳಿ ರೂಪುಗೊಂಡಿರುವ ವಾಯು ಭಾರ ಕುಸಿತವು ಮುಂದಿನ 24 ತಾಸುಗಳಲ್ಲಿ ಬಲ ಗೊಳ್ಳುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ ಯಾದರೂ ಡಿ.3ರ ಬಳಿಕ ಭಾರತೀಯ ಉಪಖಂಡದಲ್ಲಿ ಮಳೆ ತರುವ ಮಾರುತಗಳ ಚಲನೆ ಕಡಿಮೆಯಾಗಿ ಮಳೆ ದೂರವಾಗಬಹುದು ಎಂದು ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ