ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು
"ಮತ್ಸ್ಯ ಸಂಪದ' ಶಿಲಾನ್ಯಾಸದಲ್ಲಿ ಪೇಜಾವರ ಸ್ವಾಮೀಜಿ
Team Udayavani, May 21, 2022, 12:55 AM IST
ಮಂಗಳೂರು: ಸಮುದ್ರದಲ್ಲಿ ಮೀನು ಹಿಡಿಯುವು ದರಿಂದ ತೊಡಗಿ ಮನೆಯಲ್ಲಿ ಆಹಾರ ವಾಗುವವರೆಗೆ ಅದು ಹಲವು ಕೈಗಳನ್ನು ದಾಟಿ ಬರುವುದರಿಂದ ಅವರೆಲ್ಲರ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿಯಾಗುತ್ತದೆ, ಕರಾವಳಿಯ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮ ನೆರವಾಗುತ್ತ ಬಂದಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ “ಮತ್ಸ್ಯಸಂಪದ’ ನೂತನ ಪ್ರಧಾನ ಕಚೇರಿ ಸಂಕೀರ್ಣದ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಮೊಗವೀರ ಸಮಾಜದ ಒಗ್ಗಟ್ಟಿ ನಿಂದಾಗಿಯೇ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ನಿರ್ಮಾಣ ಯಶಸ್ವಿಯಾಗಿದೆ. ಅದೇ ರೀತಿ ಮೀನು ಮಾರಾಟ ಫೆಡರೇಶನ್ ಹೊಸ ಕಟ್ಟಡದ ನಿರ್ಮಾಣವೂ ಯಶಸ್ವಿಯಾಗಲಿದೆ ಎಂದರು.
ಮೂರು ಜೆಟ್ಟಿ ಅಭಿವೃದ್ಧಿ
ಮೀನುಗಾರಿಕೆಗೆ ಸೌಕರ್ಯ ಹೆಚ್ಚಿಸುವ ಉದ್ದೇಶದಿಂದ ನನ್ನ ವ್ಯಾಪ್ತಿಯಲ್ಲಿ 3 ಮೀನುಗಾರಿಕೆ ಜೆಟ್ಟಿಗಳನ್ನು ತಲಾ 75 ಕೋಟಿ ರೂ. ವೆಚ್ಚದಲ್ಲಿ ಅಭಿ ವೃದ್ಧಿ ಪಡಿಸಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಕೃಷಿ ಸಚಿವಾಲಯದ ಅಧೀನದಲ್ಲಿದ್ದ ಮೀನುಗಾರಿಕೆ ಇಲಾಖೆಯನ್ನು ಪ್ರತ್ಯೇಕ ವಾಗಿಸಿದ ಬಳಿಕ ಕೇಂದ್ರ ಸರಕಾರದಿಂದ ಸಾಕಷ್ಟು ಅನುದಾನ ಬರುತ್ತಿದೆ ಎಂದು ಶಾಸಕ ಲಾಲಾಜಿ ಹೇಳಿದರು.
3 ಕೋಟಿ ರೂ. ವೆಚ್ಚದ ಮತ್ಸé ಸಂಪದ ಕಟ್ಟಡ ನಿರ್ಮಾಣಕ್ಕೆ ಸರಕಾರ, ಶಾಸಕರು ಕೈ ಜೋಡಿಸಬೇಕೆಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಮನವಿ ಮಾಡಿದರು.
ಯಶ್‌ಪಾಲ್ ಸುವರ್ಣ ಈಗ ಹೊಸ ಕಟ್ಟಡ ನಿರ್ಮಾಣ ಮೂಲಕ ಮತ್ತೂಂದು ಸುಧಾರಣೆಗೆ ಕೇಂದ್ರವಾಗಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಉರ್ವಾಸ್ಟೋರಿನಲ್ಲಿ ಮತ್ಸ್ಯಸಂಪದ
ಮುಳಿಹಿತ್ಲಿನ ಕೇಂದ್ರ ಕಚೇರಿಗೆ ಬಂದು ಹೋಗುವುದು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಅಲ್ಲಿಂದ ಕಚೇರಿ ಯನ್ನು ಸ್ಥಳಾಂತರಿಸಲು ಉದ್ದೇಶಿಸ ಲಾಗಿದೆ. ಅದರಂತೆ ಉರ್ವಾಸ್ಟೋರಿನ ನಿವೇಶನದಲ್ಲಿ ಮತ್ಸ್ಯಸಂಪದ ನಿರ್ಮಾಣ ಗೊಳ್ಳುತ್ತದೆ. ಮುಳಿಹಿತ್ಲಿನ 3 ಎಕ್ರೆ ಪ್ರದೇಶದಲ್ಲಿ ಫಿಶ್‌ಮೀಲ್ ಸಹಿತ ಹಲವು ಸೌಲಭ್ಯಗಳನ್ನು ಸೃಷ್ಟಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದರು.
ಶಾಸಕರಾದ ಡಾ| ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಮಂಗಳೂರು ಮೇಯರ್ ಪ್ರೇಮಾ ನಂದ ಶೆಟ್ಟಿ, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕೋಟ ಗೀತಾನಂದ ಫೌಂಡೇಶನ್ ಆನಂದ ಕುಂದರ್, ಕಾಂಚನ್ ಹ್ಯುಂಡೈಯ ಆಡಳಿತ ನಿರ್ದೇಶಕ ಪ್ರಸಾದ್‌ರಾಜ್ ಕಾಂಚನ್, ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ದೇವಾನಂದ ಗುರಿಕಾರ, ಮತ್ಸ್ಯೋದ್ಯಮಿಗಳಾದ ಮೋಹನ್ ಬೆಂಗ್ರೆ, ಆನಂದ ಸುವರ್ಣ, ಶಶಿಧರ ಮೆಂಡನ್ ಉಪಸ್ಥಿತರಿದ್ದರು.
ಫೆಡರೇಶನ್ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್ ವಂದಿಸಿದರು.