ಸಮಾಜ ಹಿತದ ಕೆಲಸಕ್ಕೆ ಸದಾ ದೇವರ ಕೃಪ
Team Udayavani, Dec 3, 2017, 10:51 AM IST
ಮೂಲ್ಕಿ : ಸಮಾಜದ ಹಿತಕ್ಕಾಗಿ ಮಾಡುವ ಸೇವಾ ಕಾರ್ಯಕ್ರಮಗಳನ್ನು ದೇವರು ಇಷ್ಟ ಪಡುವುದಲ್ಲದೆ ಇಂತಹ ಕೆಲಸಗಳಿಗೆ ದೇವರ ಕೃಪೆಯೂ ಪೂರ್ಣವಾಗಿರುತ್ತದೆ ಎಂದು ಶ್ರೀ ಕಾಶೀಮಠಾಧೀಶ ಶ್ರೀ ಸಂಯಮೀಂದ್ರ ಸ್ವಾಮೀಜಿ ಅವರು ಹೇಳಿದರು. ಅವರು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಯಾತ್ರಿಗಳ ವಸತಿ ಕೇಂದ್ರ ಮಾಧವ ನಿವಾಸವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾಶೀಮಠದ ಯತಿ ಪರಂಪರೆಗೆ ಬಹಳಷ್ಟು ಕಾಲದಿಂದ ಮೂಲ್ಕಿಯೊಂದಿಗೆ ನಿಕಟವಾದ ಸಂಪರ್ಕವಿದೆ. ಇಲ್ಲಿನ ಪ್ರತಿಯೊಬ್ಬರಿಗೂ ಒಳಿತಾಗಲಿ, ಸಮಗ್ರ ಅಭಿವೃದ್ಧಿ ಹೊಂದುವಂತಾಗಲಿ. ಮೂಲ್ಕಿಯ ಜನರಿಂದ ಮತ್ತಷ್ಟು ಸಮಾಜ ಹಿತ ಕೆಲಸಗಳು ನಡೆಯಲಿ ಎಂದು ಶ್ರೀಗಳು ಹರಸಿದರು.
ಇದೇ ಸಂದರ್ಭ ಯೋಜನೆಯ ದಾನಿಗಳಿಗೆ ಶ್ರೀಗಳು ಫಲ ಮಂತ್ರಾಕ್ಷತೆಯಿತ್ತು ಹರಸಿದರು. ಅರ್ಚಕ ವೃಂದ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರನ್ನೂ ಶ್ರೀಗಳು ಆಶೀರ್ವದಿಸಿದರು.