ಹೆದ್ದಾರಿಗಳ ದುರಸ್ತಿಗೆ ಸೂಚನೆ: ನಳಿನ್‌ ಕುಮಾರ್‌

ಉದಯವಾಣಿಯ ಹೈವೇ ಅಭಿಯಾನಕ್ಕೆ ಹೆದ್ದಾರಿ ಪ್ರಾಧಿಕಾರ ಸ್ಪಂದನೆ

Team Udayavani, Oct 4, 2019, 6:15 AM IST

ದ. ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ದ್ವಿಪಥದಿಂದ ಚತುಷ್ಪಥಗಳಾಗಿವೆ. ಆದರೂ ಅಪಘಾತಗಳಿಗೆ ರಹದಾರಿಯಾಗುತ್ತಿವೆ. ಈ ಅವ್ಯವಸ್ಥೆಗಳ ಬಗ್ಗೆ ವಾಸ್ತವ ವರದಿಯನ್ನು ಉದಯವಾಣಿ ಪ್ರಕಟಿಸಿದೆ. ಈ ಸಂಬಂಧ ಪತ್ರಿಕೆಯು ಕೇಳಿದ ಪ್ರಶ್ನೆಗಳಿಗೆ ದ. ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಉತ್ತರಿಸಿದ್ದಾರೆ.

ಜಿಲ್ಲೆಯಲ್ಲಿ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿಗೆ ಯಾವ ಕ್ರಮಗಳಾಗಿವೆ?
ಜಿಲ್ಲೆಯಲ್ಲಿ ಸುರಿದ ವಿಪರೀತ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಹೊಂಡಗಳು ಬಿದ್ದಿವೆ. ಮಳೆ ಇನ್ನೂ ಮುಂದುವರಿದಿದ್ದು ದುರಸ್ತಿ ಕಾರ್ಯಕ್ಕೆ ಅಡಚಣೆಯಾಗಿದೆ. ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿ ಚಾಲನೆಯಲ್ಲಿದ್ದು ಸಂಚಾರಕ್ಕೆ ಸಮಸ್ಯೆಯಾಗ ದಂತೆ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳು ವುದಾಗಿ ಗುತ್ತಿಗೆದಾರರಾದ ಎಲ್‌ಆ್ಯಂಡ್‌ಟಿ ಸಂಸ್ಥೆಯವರು ಹೇಳಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲ ಹೆದ್ದಾರಿಗಳು, ಲೋಕೋಪಯೋಗಿ ರಸ್ತೆಗಳ ದುರಸ್ತಿಯನ್ನು ಅಕ್ಟೋಬರ್‌ ಒಳಗೆ ಸಂಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

  ದುರಸ್ತಿಯ ಹೊಣೆ ಯಾರದ್ದು ?
ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುತ್ತಿರುವ ನವಯುಗ ಸಂಸ್ಥೆಯವರೇ ಅವರ ಗುತ್ತಿಗೆ ಅವಧಿ 30 ವರ್ಷಗಳ ವರೆಗೆ ನಿರ್ವಹಿಸಬೇಕು. ಇರ್ಕಾನ್‌
ಸಂಸ್ಥೆ ನಿರ್ಮಿಸಿದ ಹೆದ್ದಾರಿಗಳ ನಿರ್ವಹಣೆ ಗುತ್ತಿಗೆಯನ್ನು 3 ವರ್ಷಗಳವರೆಗೆ ಟೆಂಡರ್‌ ನೀಡಲಾಗಿದೆ.

  ಹೆದ್ದಾರಿಗಳು ಅಪಘಾತಗಳ ತಾಣವಾಗುತ್ತಿದ್ದು, ನೀವು ಯಾವ ಕ್ರಮ ವಹಿಸುತ್ತೀರಿ ?
ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅಪಘಾತ ತಾಣಗಳನ್ನು ಗುರುತಿಸಿ ಪರಿಹಾರ ಕಲ್ಪಿಸಲು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಂಡಿದೆ. ಕಡಿದಾದ ತಿರುವುಗಳನ್ನು ನೇರಗೊಳಿಸು ವುದು ಮತ್ತು ಸವಾರರಿಗೆ ಮಾಹಿತಿ ನೀಡಲು ಸೈನ್‌ಬೋರ್ಡ್‌ ಅಳವಡಿಸುತ್ತಿದೆ.

  ಈಗಿನ ರಾಷ್ಟ್ರೀಯ ಹೆದ್ದಾರಿ ಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ?
ಹೆದ್ದಾರಿ ನಿರ್ಮಾಣಕ್ಕೆ ನಿರ್ದಿಷ್ಟ ಮಾನದಂಡಗಳಿವೆ. ಅವುಗಳನ್ನು ಪಾಲಿಸಬೇಕು. ಈ ಹಿಂದೆ ನಿರ್ಮಿತ ಹೆದ್ದಾರಿಗಳು ಈ ರೀತಿ ಇರಬಹುದು. ಆದರೆ ಹೊಸದಾಗಿ ನಿರ್ಮಾಣಗೊಂಡ ಹೆದ್ದಾರಿಗಳ ವಿನ್ಯಾಸದಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದ್ದು ಪ್ರಸ್ತುತ ಗಂಟೆಗೆ 170 ಕಿ.ಮೀ. ವೇಗವನ್ನು ದೃಷ್ಟಿಯಲ್ಲಿಟ್ಟು ಕೊಂಡು ಕಾಮಗಾರಿ ವಿನ್ಯಾಸ ರೂಪಿಸಲಾಗುತ್ತದೆ. ಎಲ್ಲಾದರೂ ಸಮಸ್ಯೆಗಳಿದ್ದರೆ ಇಲಾಖೆಯ ಗಮನಕ್ಕೆ ತಂದು ಸರಿಪಡಿಸಲಾಗುವುದು.

  ಹೆದ್ದಾರಿಗಳಲ್ಲಿ ಬ್ಯಾರಿಕೇಡ್‌ಗಳೇ ಹೆಚ್ಚಿವೆಯಲ್ಲ!
ಲೆಕ್ಕ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬ್ಯಾರಿ ಕೇಡ್‌ ಅಳವಡಿಸುವಂತಿಲ್ಲ. ಆದರೆ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅಪಘಾತಗಳು ಹೆಚ್ಚು ಸಂಭವಿಸುವ‌ಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸುತ್ತಾರೆ. ಇನ್ನು ತೀರಾ ಅವಶ್ಯವಿರುವಲ್ಲಿ ಮಾತ್ರ ಅಳವಡಿಸಲು ಸೂಚಿಸುವೆ.

ಬಿ.ಸಿ.ರೋಡು-ಅಡ್ಡಹೊಳೆ ರಸ್ತೆ ಕಾಮಗಾರಿ ಸ್ಥಿತಿ ಪ್ರಸ್ತುತ ಯಾವ ಹಂತದಲ್ಲಿದೆ ?
ಕೆಲವು ತಾಂತ್ರಿಕ ಕಾರಣಗಳಿಂದ ಈ ರಸ್ತೆ ಕಾಮಗಾರಿ ಕುಂಠಿತಗೊಂಡಿದೆ. ಇದು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರುತ್ತಿದ್ದು ಪ್ರಸ್ತುತ ಇರುವ ಎರಡೂ ಬದಿಗಳಲ್ಲಿ ತಲಾ 5 ಮೀಟರ್‌ ವಿಸ್ತಾರವಾಗು ತ್ತಿದೆ. ಇದಕ್ಕೆ ಬೇಕಾದ ಹೆಚ್ಚುವರಿ ಭೂಸ್ವಾಧೀನ ಕಾರ್ಯ ಅಂತಿಮ ಹಂತದಲ್ಲಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಪುನರಾರಂಭಗೊಳ್ಳಲಿದೆ.

ಅಭಿಯಾನಕ್ಕೆ ಹೆದ್ದಾರಿ ಪ್ರಾಧಿಕಾರ ಸ್ಪಂದನೆ
ಉದಯವಾಣಿಯ “ಎನ್‌ಎಚ್‌ ಎಷ್ಟು ಸುರಕ್ಷಿತ’ ಅಭಿಯಾನದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಾಸ್ತವಿಕ ಸ್ಥಿತಿಗತಿ ಹಾಗೂ ಇದರಿಂದ ಉಂಟಾಗಿರುವ ಸಂಚಾರ ಸಂಕಷ್ಟದ ಬಗ್ಗೆ ಗಮನ ಸೆಳೆದಿದೆ. ಅಭಿಯಾನಕ್ಕೆ ಸ್ಪಂದಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮಸ್ಯೆ ನಿವಾರಣೆಗೆ ಮುಂದಾಗಿದೆ. ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಯೋಜನಾ ನಿರ್ದೇಶಕ ಶಶಿ ಮೋಹನ್‌, “ಮಂಗಳೂರು ವಿಭಾಗ ವ್ಯಾಪ್ತಿಗೆ ಬರುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ವಹಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗುಂಡಿಗಳನ್ನು ಮುಚ್ಚುವ ಕಾರ್ಯ ಶೀಘ್ರವೇ ಪೂರ್ತಿ ಗೊಳ್ಳಲಿದೆ. ಸರ್ವಿಸ್‌ ರಸ್ತೆಗಳನ್ನು ಸುಸ್ಥಿತಿ ಯಲ್ಲಿಡಲಾಗುತ್ತಿದೆ. ಅಪಘಾತ ತಾಣ ಗಳನ್ನು ಈಗಾಗಲೇ ಗುರುತಿಸಲಾಗಿದ್ದು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ