ದಕ್ಷಿಣ ಕನ್ನಡದಲ್ಲಿ ಎಚ್‌ಐವಿ ಪೀಡಿತರ ಪ್ರಮಾಣ ಇಳಿಕೆ

Team Udayavani, Sep 5, 2018, 10:02 AM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್‌ಐವಿ/ಏಡ್ಸ್‌ ಸೋಂಕು ಪೀಡಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹತ್ತು ವರ್ಷಗಳ ಹಿಂದೆ ಶೇ.15.6ರಷ್ಟು ಇದ್ದದ್ದು ಈಗ ಶೇ.1ಕ್ಕೆ ಇಳಿದಿದೆ. ಎಚ್‌ಐವಿ ಬಾಧಿತರ ಪಟ್ಟಿಯಲ್ಲಿ ಈಗ ಜಿಲ್ಲೆ 8ನೇ ಸ್ಥಾನದಲ್ಲಿದೆ.

ಆರೋಗ್ಯ ಇಲಾಖೆ ವತಿಯಿಂದ ತಿಳಿವಳಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳು ಕೆಲವಾರು ವರ್ಷಗಳಿಂದ ನಡೆಯುತ್ತಿದ್ದು, ಪರಿಣಾಮವಾಗಿ ಎಚ್‌ಐವಿ ಪೀಡಿತರ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ. ಇಲಾಖೆಯ ಅಂಕಿಅಂಶ ಪ್ರಕಾರ ಜಿಲ್ಲೆಯಲ್ಲಿ ಹತ್ತು ವರ್ಷಗಳ ಹಿಂದೆ ಶೇ.15.6ರಷ್ಟು ಮಂದಿ ಎಚ್‌ಐವಿ ಬಾಧಿತ ರಿದ್ದರು. ಇದು 2018ರ ಆಗಸ್ಟ್‌ ವೇಳೆಗೆ ಶೇ.1ಕ್ಕೆ ಇಳಿದಿದೆ. 2007ರಲ್ಲಿ ಒಟ್ಟು ಜನಸಂಖ್ಯೆಯ ಶೇ.0.6ರಷ್ಟು ಗರ್ಭಿಣಿಯರು ಎಚ್‌ಐವಿಗೆ ತುತ್ತಾಗಿ ದ್ದರು. ಆದರೆ 2018ರ ಆಗಸ್ಟ್‌ ವೇಳೆಗೆ ಇದು ಶೇ.0.01ಕ್ಕೆ ಇಳಿದಿದೆ. 

ಶಾಲಾ-ಕಾಲೇಜುಗಳಲ್ಲಿ ರೆಡ್‌ ರಿಬ್ಬನ್‌ ಕ್ಲಬ್‌
ಜಿಲ್ಲಾ ಏಡ್ಸ್‌ ನಿಯಂತ್ರಣ ಮಂಡಳಿಯಿಂದ ಜಿಲ್ಲೆಯ 92 ಶಾಲಾ- ಕಾಲೇಜುಗಳಲ್ಲಿ ರೆಡ್‌ ರಿಬ್ಬನ್‌ ಕ್ಲಬ್‌ ಸ್ಥಾಪಿಸಲಾಗಿದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ಎಚ್‌ಐವಿ/ಏಡ್ಸ್‌ ಜಾಗೃತಿ ಮೂಡಿಸಲಾಗುತ್ತಿದೆ. ಪ್ರೌಢಶಾಲೆ ಗಳಲ್ಲಿ ಹದಿಹರೆಯದ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಯಕ್ಷಗಾನದ ಮೂಲಕ ಅರಿವು ಮೂಡಿಸಲಾಗುತ್ತಿದೆ. 

25-40 ವಯಸ್ಸಿನವರೇ ಹೆಚ್ಚು
ಜಿಲ್ಲೆಯ ಎಚ್‌ಐವಿ ಸೋಂಕುಪೀಡಿತರ ಪೈಕಿ 25-40 ವರ್ಷದ ಒಳಗಿನವರೇ ಹೆಚ್ಚಾಗಿದ್ದಾರೆ. 2018ರ ಎಪ್ರಿಲ್‌ನಿಂದ ಜೂನ್‌ ಅವಧಿಯ ಅಂಕಿಅಂಶದಂತೆ 0-14 ವರ್ಷದ ಒಳಗಿನ ಓರ್ವ, 15-24 ವರ್ಷದೊಳಗಿನ 9 ಮಂದಿ, 25-49 ವರ್ಷದೊಳಗಿನ 90 ಮಂದಿ ಮತ್ತು 50 ವರ್ಷದ ಮೇಲ್ಪಟ್ಟ 24 ಮಂದಿ ಸೋಂಕಿತರಿದ್ದಾರೆ.

ಮೊದಲನೇ ಸ್ಥಾನ ಬಾಗಲಕೋಟೆಗೆ
ಎಚ್‌ಐವಿ/ಏಡ್ಸ್‌ ಸೋಂಕು ಪೀಡಿತರ ಸಂಖ್ಯೆಯಲ್ಲಿ ಬಾಗಲಕೋಟೆ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮೀಣ, ಯಾದಗಿರಿ ಅನಂತರದ ಸ್ಥಾನಗಳಲ್ಲಿವೆ.

ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮದಿಂದ ಜಿಲ್ಲೆಯಲ್ಲಿ  ಎಚ್‌ಐವಿ ಪೀಡಿತರ ಪ್ರಮಾಣ ಇಳಿಕೆಯಾಗಿದೆ. ಎನ್‌ಜಿಒ ಮೂಲಕವೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ.
ರೀಟಾ, ಕಾರ್ಯಕರ್ತೆ, ಹೊಂಗಿರಣ ಎನ್‌ಜಿಒ, ಫ‌ಳ್ನೀರ್‌

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಎಚ್‌ಐವಿ ಪೀಡಿತರ ಪ್ರಮಾಣ ಇಳಿಮುಖವಾಗಿದೆ. ಜಿಲ್ಲೆಯ ಮಂದಿ ಆರೋಗ್ಯದ ಬಗ್ಗೆ ಸುಶಿಕ್ಷಿತರಾಗುತ್ತಿದ್ದಾರೆ. ಆರೋಗ್ಯ ಇಲಾಖೆ ಜಾಗೃತಿ ಹಮ್ಮಿಕೊಂಡಿದೆ.
-ಡಾ| ಬದ್ರುದ್ದೀನ್‌, ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ 

*ನವೀನ್‌ ಭಟ್‌ ಇಳಂತಿಲ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ