ದಕ್ಷಿಣ ಕನ್ನಡದಲ್ಲಿ ಶೇ.36ರಷ್ಟು ಹೆರಿಗೆ ಸಿಸೇರಿಯನ್‌

ಕಳೆದ ವರ್ಷದಲ್ಲಿ ಒಟ್ಟು 12,960 ಪ್ರಕರಣ

Team Udayavani, Oct 3, 2019, 4:20 AM IST

ಮಹಾನಗರ: ಅಪಾಯದ ಆತಂಕ, ಫ್ಯಾನ್ಸಿ ನಂಬರ್‌ ಮೋಹ, ನೋವಿನ ಭಯ ಮುಂತಾದ ಕಾರಣ ಗಳಿಂದಾಗಿ ಸಿಸೇರಿಯನ್‌ ಹೆರಿಗೆ ಪ್ರಮಾಣ ಹೆಚ್ಚುತ್ತಿದ್ದು, ದ.ಕ.ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಒಟ್ಟು ಹೆರಿಗೆಯಲ್ಲಿ ಸಿಸೇರಿಯನ್‌ ಪ್ರಮಾಣ ಜಾಸ್ತಿಯಾಗುತ್ತಿದೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದ.ಕ. ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಆದ ಒಟ್ಟು 35,972 ಹೆರಿಗೆಗಳ ಪೈಕಿ 12,960 ಸಿಸೇರಿಯನ್‌ ಆಗಿದೆ. ಬಹುತೇಕ ಹೆತ್ತವರು ಸಹಜ ಹೆರಿಗೆಯನ್ನೇ ಇಷ್ಟಪಡುತ್ತಾರೆ. ಆದರೆ ಅಧಿಕ ಅಪಾಯ, ಅಧಿಕ ರಕ್ತದೊತ್ತಡ, ಹೆರಿಗೆ ಸಂದರ್ಭ, ಇತರ ಅನಾರೋಗ್ಯದ ಕಾರಣಗಳಿಂದಾಗಿ ತಾಯಿ, ಮಗುವಿನ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸಿಸೇರಿಯನ್‌ ಮಾಡಬೇಕು ಎನ್ನುವುದು ವೈದ್ಯರ ಮಾತು.

ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮಿಷ್ಟದ ದಿನಗಳಂದು ಮಕ್ಕಳು ಜನ್ಮ ಪಡೆಯಬೇಕು ಎಂಬ ಕಾರಣ ಕ್ಕಾಗಿಯೋ ಅಥವಾ ನೋವುರಹಿತ ಹೆರಿಗೆಯಾಗಬೇಕೆಂಬ ಕಾರಣಕ್ಕಾಗಿಯೋ ಹಲವಾರು ಮಂದಿ ಸಿಸೇರಿಯನ್‌ ಹೆರಿಗೆಯ ಮೊರೆ ಹೋಗು ತ್ತಾರೆ. ಇದರಿಂದಾಗಿಯೂ ಸಿಸೇರಿಯನ್‌ ಪ್ರಮಾಣ ಹೆಚ್ಚುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

6 ವರ್ಷ 55 ಸಾವಿರ ಸಿಸೇರಿಯನ್‌ ಹೆರಿಗೆ
ಆರು ವರ್ಷಗಳ ಅವಧಿಯಲ್ಲಿ ಆಗಿರುವ ಒಟ್ಟು 1,78,909 ಹೆರಿಗೆಗಳ ಪೈಕಿ 55,443 ಸಿಸೇರಿಯನ್‌ ಹೆರಿಗೆಗಳಾಗಿವೆ. ಇದರಲ್ಲೂ 2018-19ನೇ ಸಾಲಿನಲ್ಲಿ ಈ ವರ್ಷಗಳಲ್ಲೇ ಅತ್ಯಧಿಕ ಸಿಸೇರಿಯನ್‌ ಹೆರಿಗೆ ಆಗಿದೆ. 2013-14ರಲ್ಲಿ ಒಟ್ಟು 27,860 ಹೆರಿಗೆಗಳ ಪೈಕಿ 7,459 ಸಿಸೇರಿಯನ್‌, 2014-15ರಲ್ಲಿ 27,398 ಹೆರಿಗೆ ಪೈಕಿ 7,393 ಸಿಸೇರಿಯನ್‌, 2015-16ರಲ್ಲಿ 27,120ರಲ್ಲಿ 7,207 ಸಿಸೇರಿಯನ್‌, 2,017-18ರಲ್ಲಿ 33,167ರಲ್ಲಿ 11,588 ಸಿಸೇರಿಯನ್‌ ಹೆರಿಗೆ ಉಂಟಾಗಿದೆ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ರಾಜೇಶ್‌ ಮಾಹಿತಿ ನೀಡಿದ್ದಾರೆ. ಸಂಖ್ಯೆಗಳು ಸಹಜ ಹೆರಿಗೆಗಿಂತ ಕಡಿಮೆ ಇದ್ದರೂ ತಾಯಿಯ ಆರೋಗ್ಯದ ದೃಷ್ಟಿಯಿಂದ ಅನಗತ್ಯವಾಗಿ ಸಿಸೇರಿಯನ್‌ ಹೆರಿಗೆ ಮಾಡಿಸಿಕೊಳ್ಳುವುದು ಉತ್ತಮವಲ್ಲ ಎಂಬುದು ಸಾರ್ವಜನಿಕವಾಗಿ ಕೇಳಿ ಬರುವ ಮಾತು.

ಲೇಡಿಗೋಶನ್‌ನಲ್ಲಿ ಶೇ.46ರಷ್ಟು ಸಿಸೇರಿಯನ್‌
ಜಿಲ್ಲೆಯಲ್ಲಿ 2013-14ರಲ್ಲಿ ಶೇ.26.77ರಷ್ಟಿದ್ದ ಸಿಸೇರಿಯನ್‌ ಹೆರಿಗೆ ಪ್ರಮಾಣ 2018-19ರಲ್ಲಿ ಶೇ.36ಕ್ಕೇರಿದೆ. ನಗರದ ಸರಕಾರಿ ಲೇಡಿಗೋಶನ್‌ನಲ್ಲಿ ವಾರ್ಷಿಕ ಅಂದಾಜು 6 ಸಾವಿರ ಹೆರಿಗೆಗಳಾಗುತ್ತಿದ್ದು, ಈ ಪೈಕಿ ಶೇ. 46ರಷ್ಟು ಸಿಸೇರಿಯನ್‌ ಹೆರಿಗೆಯಾಗುತ್ತಿವೆ. ದ.ಕ. ಮಾತ್ರವಲ್ಲದೆ, ಉಡುಪಿ, ಹೊನ್ನಾವರ, ಉತ್ತರ ಕನ್ನಡ, ಚಿತ್ರದುರ್ಗ, ಮಡಿಕೇರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಭಾಗಗಳಿಂದಲೂ ಹೈ ರಿಸ್ಕ್ ಪ್ರಕರಣಗಳು ಲೇಡಿಗೋಶನ್‌ ಆಸ್ಪತ್ರೆಗೆ ಬರುತ್ತಿರುವುದರಿಂದ ಸಿಸೇರಿಯನ್‌ ಹೆರಿಗೆಯನ್ನೇ ಮಾಡಿಸಬೇಕಾದ ಅನಿವಾರ್ಯವಿದೆ. ಅಧಿಕ ರಕ್ತದೊತ್ತಡ, ಕನ್ವರ್ಷನ್‌ (ಫಿಟ್ಸ್‌ ಮಾದರಿಯಲ್ಲಿ) ಮತ್ತು ಇತರ ಅಧಿಕ ಅಪಾಯದ ಸಂಭವಗಳಿದ್ದಾಗ ಸಹಜ ಹೆರಿಗೆಗೆ ಕಾಯಲಾಗುವುದಿಲ್ಲ. ಸಿಸೇರಿಯನ್‌ ಮೂಲಕ ಮಗುವನ್ನು ಹೊರ ತೆಗೆಯುವುದೇ ಅದಕ್ಕಿರುವ ಪರಿಹಾರ ಎನ್ನುತ್ತಾರೆ ಲೇಡಿಗೋಶನ್‌ ಆಸ್ಪತ್ರೆಯ ಅಧೀಕ್ಷರು.

ಸಾಮಾನ್ಯ ಹೆರಿಗೆ ಹಿತಕರ
ಮಗು ಅಧಿಕ ತೂಕ ಹೊಂದಿದ್ದರೆ ಸಾಮಾನ್ಯ ಹೆರಿಗೆ ಕಷ್ಟವಾಗುತ್ತದೆ. ಗರ್ಭದಲ್ಲಿ ಮಗು ತಲೆ ಕೆಳಗಾಗಿದ್ದರೆ ಅಥವಾ ಇನ್ನಿತರ ಸ್ಥಿತಿಯಲ್ಲಿದ್ದರೆ ಶಸ್ತ್ರಚಿಕಿತ್ಸೆ ಅನಿವಾರ್ಯ. ಗರ್ಭಿಣಿ ತೂಕದಲ್ಲಿ ಕಡಿಮೆಯಾದರೆ, 7-8ನೇ ತಿಂಗಳಲ್ಲಿ ಗರ್ಭದಲ್ಲಿ ಸಮಸ್ಯೆ ಉಂಟಾದರೆ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರ ತೆಗೆಯಬೇಕಾಗುತ್ತದೆ. ಆದರೆ ಇಂತಹ ಅನಿವಾರ್ಯಗಳನ್ನು ಹೊರತುಪಡಿಸಿ ಫ್ಯಾನ್ಸಿ ಜನ್ಮ ದಿನಾಂಕದ ಮೋಹಕ್ಕೊಳಗಾಗಿಯೋ, ನೋವು ಇಲ್ಲ ಎಂಬ ಕಾರಣಕ್ಕಾಗಿಯೋ ಶಸ್ತ್ರಚಿಕಿತ್ಸೆಯ ಮೊರೆ ಹೋಗುವುದು ಹಿತವಲ್ಲ ಎನ್ನುತ್ತದೆ ವೈದ್ಯಲೋಕ. ಗಾಯ ಬೇಗ ವಾಸಿಯಾಗದೇ ಇರುವುದು, ತಿಂಗಳುಗಟ್ಟಲೆ ವಿಶ್ರಾಂತಿ, ಸೊಂಟ ನೋವು ಮುಂತಾದವು ಸಿಸೇರಿಯನ್‌ ಹೆರಿಗೆಯ ಅನಂತರದಲ್ಲಿ ಕಾಣಿಸಿಕೊಳ್ಳುವ ಸಂಭವ ಜಾಸ್ತಿಯಿದೆ ಎನ್ನುವುದು ವೈದ್ಯರ ಮಾತು.

ಅನಿವಾರ್ಯCesarean
ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲ ಹೈ ರಿಸ್ಕ್ ಪ್ರಕರಣಗಳೇ ಬರುವುದರಿಂದ ಪ್ರತಿ ವರ್ಷ ಅಂದಾಜು ಶೇ. 46ರಷ್ಟು ಸಿಸೇರಿಯನ್‌ ಹೆರಿಗೆಯಾಗುತ್ತದೆ. ಅಧಿಕ ರಕ್ತದೊತ್ತಡ, ಕನ್ವರ್ಷನ್‌, ಅವಧಿಪೂರ್ವ ಶಿಶು ಜನನ ಮುಂತಾದವು ಸಹಜ ಹೆರಿಗೆಗೆ ಅಡ್ಡಿಯಾಗುತ್ತದೆ. ಅಂತಹ ಪ್ರಕರಣಗಳನ್ನು ಮಗು ಮತ್ತು ತಾಯಿಯ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಸಿಸೇರಿಯನ್‌ ಮೂಲಕ ಮಗುವನ್ನು ಹೊರ ತೆಗೆಯಲಾಗುತ್ತದೆ.
– ಡಾ| ಸವಿತಾ, ಅಧೀಕ್ಷಕಿ, ಸರಕಾರಿ ಲೇಡಿಗೋಶನ್‌ ಆಸ್ಪತ್ರೆ

– ಧನ್ಯಾ ಬಾಳೆಕಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ