ಕಾರ್ಗಿಲ್ ವಿಜಯ ದಿನಾಚರಣೆ: “ದೇಶಕ್ಕಾಗಿ ಪ್ರತಿಯೊಬ್ಬರೂ ದುಡಿಯೋಣ’
Team Udayavani, Aug 3, 2017, 5:45 AM IST
ಬೆಳ್ತಂಗಡಿ: ಹುತಾತ್ಮ ಯೋಧರನ್ನು ವರ್ಷಕೊಮ್ಮೆ ನೆನೆದರೆ ಸಾಲದು, ಪ್ರತಿ ನಾಗರಿಕನು ದೇಶಕ್ಕಾಗಿ ದುಡಿಯಲೇಬೇಕು ಎಂದು ವಾಯುಪಡೆಯ ನಿವೃತ್ತ ಆಫೀಸರ್ ಸುನಿಲ್ ಶೆಣೆ„ ಹೇಳಿದರು.
ಅವರು ಉಜಿರೆ ಶ್ರೀ ಧ. ಮಂ. ಪದವಿ ಕಾಲೇಜಿನಲ್ಲಿ ಕಾರ್ಗಿಲ್ ದಿನಾಚರಣೆಯಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಯುದ್ಧ ಭೂಮಿಯಲ್ಲಿ ಹೋರಾಡಲಾಗದಿದ್ದರೂ ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವದೇಶಿ ವಸ್ತುಗಳನ್ನು ಉಪಯೋಗಿಸುವುದರ ಮೂಲಕ ದೇಶಸೇವೆ ಮಾಡಬಹುದು.ಇದು ಸರಕಾರದಿಂದ ಮಾಡಲಾಗದ ಕೆಲಸ. ಏಕೆಂದರೆ ವಿದೇಶದೊಂದಿಗೆ ಹಲವು ಒಪ್ಪಂದಗಳಾಗಿರುತ್ತವೆ. ಆದರೆ ಈ ಕೆಲಸ ನಮ್ಮಿಂದ ಸಾಧ್ಯ. ಚೀನಾ ಮೇಡ್ ವಸ್ತುಗಳಿಗೆ ನೋ ಎನ್ನೋಣ ಎಂದರು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ದಿನದ ಪ್ರಯುಕ್ತ ವಿಶೇಷವಾದ ಭಿತ್ತಿಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಎಸ್. ಮೋಹನ್ ನಾರಾಯಣ್, ಎನ್ನೆಸ್ಸೆಸ್ ಯೋಜನಾಧಿಕಾರಿಗಳಾದ ಗಣೇಶ್ ಶೆಂಡೆ„, ಶಕುಂತಲಾ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಜ್ಞಾ ಸ್ವಾಗತಿಸಿ, ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.