ಸುಕ್ರಿ ಅಜ್ಜಿಯ ಚಿಕಿತ್ಸಾ ವೆಚ್ಚ ಸರಕಾರ ಭರಿಸಲಿದೆ: ಕೋಟ
Team Udayavani, May 10, 2022, 11:16 PM IST
ಮಂಗಳೂರು: ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳವಾರ ಆಸ್ಪತ್ರೆಗೆ ತೆರಳಿ ಸುಕ್ರಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸುಕ್ರಿ ಅಜ್ಜಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದು ಚೇತರಿಸಿಕೊಂಡಿದ್ದಾರೆ. ನಗು ನಗುತ್ತಾ ಮಾತನಾಡಿದ್ದಾರೆ.
ಸದ್ಯದಲ್ಲೇ ಮನೆಗೆ ತೆರಳುವುದಾಗಿ ಹೇಳಿದ್ದಾರೆ. ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂಬ ಮುಖ್ಯಮಂತ್ರಿಯವರ ಸಂದೇಶವನ್ನು ಅವರಿಗೆ ತಿಳಿಸಿದ್ದೇನೆ.
ಈ ಬಗ್ಗೆ ಮುಖ್ಯಮಂತ್ರಿಯವರು ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ ಎಂದರು.