ಮಂಗಳೂರು ನವರಾತ್ರಿ ಸಂಭ್ರಮ

Team Udayavani, Sep 28, 2019, 7:59 PM IST

ಚಿತ್ರ : ಸತೀಶ್‌ ಇರಾ

ಮಹಾನಗರ: ನಗರ, ಗ್ರಾಮಾಂತರ ಪ್ರದೇಶದಲ್ಲಿ ಇಂದಿನಿಂದ ನವರಾತ್ರಿ ಸಂಭ್ರಮ. ಮಂಗಳೂರು ದಸರಾ ಎಂದು ಖ್ಯಾತಿಗೆ ಪಾತ್ರವಾಗಿರುವ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ, ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ, ಬೋಳಾರ ಶ್ರೀ ಮಾರಿಯಮ್ಮ ಮಹಿಷಮರ್ಧಿನಿ ದೇವಸ್ಥಾನ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ, ಕುದ್ರೋಳಿ ಶ್ರೀ ಭಗವತಿ ದೇವಸ್ಥಾನ, ಗ್ರಾಮಾಂತ ರದ ಕಟೀಲು ದುರ್ಗಾಪರಮೇಶ್ವರೀ, ಬಪ್ಪನಾಡು ದುರ್ಗಾಪರಮೇಶ್ವರೀ, ಪೊಳಲಿ ರಾಜರಾಜೇಶ್ವರೀ, ಸಹಿತ ಪ್ರಸಿದ್ಧ ಕ್ಷೇತ್ರಗಳು ಹಾಗೂ ಪ್ರಮುಖ ದೇವಿ ಕ್ಷೇತ್ರಗಳಲ್ಲಿ ಸೆ. 29ರಿಂದ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ, ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮಂಗಳೂರಿನ ವೈಭವಪೂರಿತ ದಸರಾ ಸಡಗರಕ್ಕೆ ನಗರ ಶೃಂಗಾರಗೊಂಡಿದೆ. ಪ್ರಮುಖ ಬೀದಿಗಳು ವರ್ಣಮಯ ವಿದ್ಯುತ್‌ ದೀಪಗಳಿಂದ ಅಲಂಕೃತ ಗೊಂಡು ಝಗಮಗಿಸುತ್ತಿವೆ.

ನವರಾತ್ರಿಯ ಸಂದರ್ಭ ಶ್ರೀದೇವಿಯ ಒಂದೊಂದು ಅವತಾರಗಳಂತೆ 9 ದಿನಗಳ ಕಾಲ ನವದುರ್ಗೆಯರನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸಲಾಗುತ್ತದೆ. ಒಂದೊಂದು ದಿನವೂ ದೇವಿಗೆ ಒಂದೊಂದು ಬಣ್ಣದ ಸೀರೆ ತೊಡಿಸಿ, ವಿಶೇಷವಾಗಿ ಶೃಂಗರಿಸಿ ಪೂಜಿಸಿ, ಭಜಿಸಿ ಭಕ್ತಜನರು ಸಂಭ್ರವಿಸುತ್ತಾರೆ. ದೇವಿ ಕ್ಷೇತ್ರಗಳಲ್ಲಿ ರಂಗಪೂಜೆ, ಸೇವಾ ಪೂಜೆ, ಅಲಂಕಾರ ಪೂಜೆ, ವಿಶೇಷ ಕುಂಕು ಮಾರ್ಚನೆ ಸಹಿತ ವಿಶೇಷ ಪೂಜೆಗಳು ಭಕ್ತರು ಶ್ರೀದೇವಿಗೆ ಸೇವಾ ರೂಪದಲ್ಲಿ ಅರ್ಪಿಸುತ್ತಾರೆ. ಹೆಚ್ಚಿನ ಕ್ಷೇತ್ರಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯುತ್ತದೆ.

ಮಂಗಳೂರು ದಸರಾ
ಬ್ರಹ್ಮಶ್ರೀ ನಾರಾಯಣಗುರುಗಳು ಸ್ಥಾಪಿಸಿದ, ಒಂದು ಶತಮಾನಕ್ಕೂ ಮೀರಿದ ಇತಿಹಾಸವನ್ನು ಒಳಗೊಂಡಿರುವ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಉತ್ಸವ ಮಂಗಳೂರು ದಸರಾ ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ಸೆ. 29ರಂದು ನವದುರ್ಗೆಯರು, ಶ್ರೀ ಶಾರದಾ ಮಾತೆಯ ಹಾಗೂ ಶ್ರೀ ಗಣೇಶನ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಂಡು ಅ. 9ರ ವರೆಗೆ 10 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಲಿದೆ. ಮಂಗಳೂರು ದಸರಾದ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟದಲೂ ವ್ಯಾಪಿಸಿದೆ.

ಮನಮೋಹಕ ಮಂಟಪಗಳು
ಶ್ರೀಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಅತ್ಯಂತ ಕಲಾತ್ಮಕ ಹಾಗೂ ಮನಮೋಹಕ ಸ್ವರ್ಣಮಯ ವರ್ಣದ ಶೈಲಿಯಲ್ಲಿ ವಿನ್ಯಾಸಗೊಳಿಸಿದ ವಿಶೇಷ ಮಂಟಪಗಳಲ್ಲಿ ಕಾತ್ಯಾಯಿನಿ, ಸ್ಕಂದಮಾತಾ, ಆಧಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ಧಿದಾತ್ರಿ, ಮಹಾಗೌರಿ, ಮಹಾಕಾಳಿ ಸಹಿತ ನವದುರ್ಗೆಯರು, ಶಾರದಾ ಮಾತೆ ಸಹಿತ ಮಹಾಗಣಪತಿಯನ್ನು ಸೆ. 29ರಂದು ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿಯ ಮಂಗಳೂರು ದಸರಾಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸಿದ್ಧಗೊಳ್ಳುತ್ತಿದ್ದು, ಸ್ವರ್ಣ (ಗೋಲ್ಡ್‌) ಬಣ್ಣದಲ್ಲಿ ದೇಗುಲ ಕಂಗೊಳಿಸಲಿದೆ.

ದಸರಾ ಅಂಗವಾಗಿ ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಸೆ. 29 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6ರಿಂದ ನಡೆಯಲಿದೆ. ರಾಜ್ಯದ ಪ್ರಸಿದ್ದ ಕಲಾವಿದರುಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗ ಲಿದ್ದು ದಸರಾ ಸಡಗರಕ್ಕೆ ವಿಶೇಷ ಮೆರುಗು ನೀಡಲಿದೆ.

ಶ್ರೀ ಮಾರಿಯಮ್ಮ ದೇವಸ್ಥಾನ
ನಗರದ ಪ್ರಸಿದ್ಧ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವ ರಾತ್ರಿ ಉತ್ಸವವನ್ನು ಸೆ. 29ರಿಂದ ಅ. 7ರ ವರೆಗೆ ಭಕ್ತಿ, ಸಂಭ್ರಮಗಳಿಂದ ಆಚರಿಸಲಾಗುತ್ತಿದೆ.

ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ
ಕೊಡಿಯಾಲಬೈಲ್‌ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ 9 ದಿನಗಳ ಕಾಲ ನವರಾತ್ರಿ ಉತ್ಸವ ಭಕ್ತಿ, ಸಂಭ್ರಮ ಜರಗಲಿದೆ. ಪ್ರತಿದಿನ ವಿಶೇಷ ಪೂಜೆ, ಅ.5ರಂದು ಶ್ರೀಮಾತೆಯ ಬಲಿಉತ್ಸವ, ಪಲ್ಲಕ್ಕಿ ಉತ್ಸವ, ಬಿಂಬ ದರ್ಶನ, ಸಪ್ತಮ ದಿನವಾದ ಅ.6 ರಂದು ಮಧ್ಯಾಹ್ನ ವಿಶೇಷ ಕುಂಕುಮಾರ್ಚನೆ ಜರಗಲಿದೆ. ಬೋಳಾರ ಶ್ರೀ ಮಾರಿಯಮ್ಮ ಮಹಿಷಾಮರ್ಧಿನಿ

ಬೋಳಾರ ಶ್ರೀ ಮಾರಿಯಮ್ಮ ಮಹಿಷಾಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ಸೆ. 29ರಿಂದ ಅ. 7ರ ವರೆಗೆ ಜರಗಲಿದೆ. ಅ. 3ರಂದು ತ್ರಿಕಾಲ ಪೂಜೆ, ಅ. 4ರಂದು ಚಂಡಿಕಾಯಾಗ ನಡೆಯಲಿದ್ದು ಅ. 7ರಂದು ರಾತ್ರಿ ರಥೋತ್ಸವ ಜರಗಲಿದೆ.

ವೈಭವದ ಶೋಭಾಯಾತ್ರೆ
ಮಂಗಳೂರು ದಸರಾ ಮಹೋತ್ಸವ ಭವ್ಯ ಶೋಭಾಯಾತ್ರೆ ಅ. 8ರಂದು ಸಂಜೆ 4ರಿಂದ ನಡೆಯಲಿದೆ. ಈ ಬಾರಿಯ ದಸರಾ ಶೋಭಾ ಯಾತ್ರೆಯಲ್ಲಿ ಶಾರದಾ ಮಾತೆಯ ವಿಗ್ರಹ ಮುಂಚೂಣಿಯಲ್ಲಿರಲಿದೆ. ಬಳಿಕ ಇತರ ಟ್ಯಾಬ್ಲೋಗಳು ಸಂಚರಿಸಲಿವೆ.

ನಗರ ಶೃಂಗಾರ
ನವರಾತ್ರಿ ಮಹೋತ್ಸವ, ಮಂಗಳೂರು ದಸರಾದ 10 ದಿನಗಳ ಅವಧಿಯಲ್ಲಿ ಮಂಗಳೂರು ನಗರದ ಪ್ರಮುಖ ಬೀದಿಗಳು ಬಣ್ಣದ ಬೆಳಕಿನೊಂದಿಗೆ ವರ್ಣಮಯವಾಗಿ ಶೃಂಗಾರಗೊಂಡಿವೆ. ಈ ಬಾರಿಯೂ ನಗರದಲ್ಲಿ ಪ್ರಮುಖವಾಗಿ ಮಂಗಳೂರು ದಸರಾ ಮೆರವಣಿಗೆ ಸಾಗುವ 9 ಕಿ.ಮೀ. ಪ್ರಮುಖ ರಸ್ತೆಗಳು, ಕ್ಷೇತ್ರದ ಸಂಪೂರ್ಣ ಭಾಗ ಬಣ್ಣ ಬಣ್ಣದ ವಿದ್ಯುತ್‌ದೀಪಗಳೊಂದಿಗೆ ಅಲಂಕೃತಗೊಂಡು ಝಗಮಗಿಸುತ್ತಿವೆ. ಸುಮಾರು 20 ಲಕ್ಷಕ್ಕೂ ಅಧಿಕ ವಿದ್ಯುತ್‌ ಬಲ್ಬ್ಗಳನ್ನು ಬಳಸಲಾಗಿದೆ. ಇದಲ್ಲದೆ ನಗರದ ಹಲವಾರು ಕಟ್ಟಡಗಳು ಕೂಡ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿವೆ. ಪ್ರಮುಖ ವೃತ್ತಗಳನ್ನು ವಿದ್ಯುತ್‌ ದೀಪಗಳಿಂದ ಶೃಂಗಾರಗೊಂಡು ಸ್ವಾಗತಕೋರುತ್ತಿವೆ. ದಸರಾ, ನವರಾತ್ರಿ ಉತ್ಸವಕ್ಕೆ ಸ್ವಾಗತ ಕೋರುವ, ಶುಭ ಹಾರೈಸುವ ಫ್ಲೆಕ್ಸ್‌ಗಳು ನಗರದೆಲ್ಲೆಡೆ ರಾರಾಜಿಸುತ್ತಿವೆ.

ಮಂಗಳೂರು ದಸರಾದ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಇಕ್ಕೆಲಗಳು ಹಾಗೂ ನಗರದ ಮುಖ್ಯ ರಸ್ತೆಗಳು ವಿದ್ಯುತ್‌ದೀಪಗಳಿಂದ ಅಲಂಕಾರಗೊಂಡಿವೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ