ಮೂಲ್ಕಿ, ಉಳ್ಳಾಲ; ಹೊಸ ತಾಲೂಕು ಕಚೇರಿಗೆ ಸಿಬಂದಿ ತೊಡಕು!
Team Udayavani, Sep 8, 2021, 3:20 AM IST
ಮಹಾನಗರ: ಮಂಗಳೂರಿನಿಂದ ಪ್ರತ್ಯೇಕಗೊಂಡು ಹೊಸದಾಗಿ ಉಳ್ಳಾಲ ಹಾಗೂ ಮೂಲ್ಕಿ ತಾಲೂಕು ರಚನೆ ಪ್ರಕ್ರಿಯೆಗೆ ವೇಗ ದೊರಕು ತ್ತಿದ್ದಂತೆ ಸಿಬಂದಿ ಕೊರತೆ ಸಮಸ್ಯೆ ಉಲ್ಬಣಿಸಲಿದ್ದು, ಇಲಾಖೆಗಳ ನಿರ್ವಹಣೆಯ ಸವಾಲು ಎದುರಾಗಿದೆ.
ಹಲವು ಸಮಯದ ಹಿಂದೆಯೇ ಮಂಗಳೂರಿ ನಿಂದ ಬೇರ್ಪಟ್ಟಿರುವ ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ 32 ಇಲಾಖೆಗಳಿಗೆ ಹೊಸ ನೇಮ ಕಾತಿಯೇ ನಡೆದಿಲ್ಲ. ಸದ್ಯ ಮಂಗಳೂರು ತಾಲೂಕು ವ್ಯಾಪ್ತಿಯ ಅಧಿಕಾರಿಗಳೇ ಇಲ್ಲಿ ಹೆಚ್ಚುವರಿಯಾಗಿ ನಿರ್ವಹಣೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ, ಇದೀಗ ಹೊಸದಾಗಿ ಅಸ್ತಿತ್ವದ ಹಂತದಲ್ಲಿರುವ ಉಳ್ಳಾಲ, ಮೂಲ್ಕಿ ತಾಲೂಕಿಗೂ 32 ಇಲಾಖೆಗಳು ಬರಲಿರುವುದರಿಂದ ಮತ್ತಷ್ಟು ಸಿಬಂದಿ ಕೊರತೆ ಕಾಡುವ ಆತಂಕ ಎದುರಾಗಿದೆ.
ಸದ್ಯ ಮಂಗಳೂರು ತಾ.ಪಂ., ತಾಲೂಕು ಕಚೇರಿಯಲ್ಲಿ ಶೇ. 50ರಷ್ಟು ಸಿಬಂದಿ ಕೊರತೆಯಿದೆ. ಗ್ರಾಮಕರಣಿಕರು ಸಹಿತ ಇತರರನ್ನು ನೇಮಿಸಿ ಇಲ್ಲಿ ಕೆಲಸ ನಡೆಯುತ್ತಿದೆ. ಉಳಿದಂತೆ ಶಿಕ್ಷಣ ಇಲಾಖೆ, ಕೃಷಿ, ತೋಟಗಾರಿಕೆ ಸಹಿತ 32 ಇಲಾಖೆಗಳಲ್ಲಿಯೂ ಸಿಬಂದಿ ಕೊರತೆಯಿದೆ. ಇದರ ಮಧ್ಯೆ ಮಂಗಳೂರು ತಾಲೂಕು ವ್ಯಾಪ್ತಿಯ ಅಧಿಕಾರಿಗಳೇ ಇತರ ಮೂರು ತಾಲೂಕಿನ ಹೊರೆಯನ್ನು ಕೂಡ ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದಾರೆ. ಇದರಿಂದ ಇಲಾಖೆ ಕಾರ್ಯಕ್ರಮದ ಅನುಷ್ಠಾನಕ್ಕೆ ತೊಡಕಾಗುವ/ ಸಾರ್ವಜನಿಕ ಸೇವೆಗೆ ಸಮಸ್ಯೆ ಆಗುವ ಸಾಧ್ಯತೆಯಿದೆ.
ಮೂಡುಬಿದಿರೆ ಹೊಸ ತಾಲೂಕು ಘೋಷಣೆ ಯಾದ ಬಳಿಕ ತಾಲೂಕು ಪಂಚಾಯತ್ ಇಒ, ತಾಲೂಕು ಕಚೇರಿಗೆ ಗ್ರೇಡ್ 1, 2 ತಹಶೀಲ್ದಾರ್, ಸಿಬಂದಿ ಮಂಜೂರಾತಿ ಆಗಿದೆ. ಉಳಿದಂತೆ ಹೊಸ ತಾಲೂಕಿಗೆ ಸಂಬಂಧಿಸಿದ 32 ಇಲಾಖೆಗಳಿಗೂ ಪ್ರತ್ಯೇಕವಾಗಿ ಅಧಿಕಾರಿಗಳ ನೇಮಕ ಆಗಿಲ್ಲ. ಹೊಸ ನೇಮಕಾತಿಯೂ ಇಲ್ಲ.
ಶಿಕ್ಷಣಾಧಿಕಾರಿ ಕಚೇರಿ; ಹೆಚ್ಚುವರಿ ಹೊರೆ! :
ಹೊಸ ತಾಲೂಕುಗಳು ರಚನೆಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸರಕಾರ ಸೂಚಿಸಿದೆ. ಆದರೆ ಹೊಸ ಹುದ್ದೆಯ ನೇಮಕ ಮಾಡಿಲ್ಲ. ಬದಲಾಗಿ ಹೊಸದಾಗಿ ಪ್ರಾರಂಭಿಸಬೇಕಾದ ಕಚೇರಿಗೆ, ಬೇರ್ಪಡಿಸಬೇಕಾದ ಕಚೇರಿಯಿಂದ ಅಧಿಕಾರಿ/ಸಿಬಂದಿಯನ್ನು ಸಮ ಪ್ರಮಾಣದಲ್ಲಿ ವಿಂಗಡಿಸಿ ಹುದ್ದೆ ಸಮೇತ ಸ್ಥಳಾಂತರಿಸಲು ಶಿಕ್ಷಣ ಇಲಾಖೆಯಿಂದ ಸೂಚನೆಯಿದೆ. ಹೀಗಾಗಿ ಉಳ್ಳಾಲ/ಮೂಲ್ಕಿ ತಾಲೂಕಿಗೆ ಮಂಗಳೂರು ದಕ್ಷಿಣ/ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬಂದಿಯನ್ನೇ ನೇಮಕ ಮಾಡಬೇಕಿದೆ. ಈಗಾಗಲೇ 2 ಕಚೇರಿಯಲ್ಲಿ ಶೇ. 40ರಷ್ಟು ಹುದ್ದೆ ಖಾಲಿಯಿದ್ದು, ಹಾಲಿ ಇರುವವರಲ್ಲಿಯೇ ಕೆಲವರನ್ನು ಹೊಸ ತಾಲೂಕಿಗೆ ನೇಮಕ ಮಾಡಬೇಕಾದ ಪರಿಸ್ಥಿತಿಯಿದೆ.
ಪ್ರಗತಿಯಲ್ಲಿದೆ ತಾಲೂಕು ರಚನೆ :
ಉಳ್ಳಾಲ ತಾಲೂಕು ರಚನೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತದಲ್ಲಿದ್ದು, ತಾಂತ್ರಿಕವಾಗಿ ಆರಂಭವಾಗುವುದಷ್ಟೇ ಬಾಕಿ ಇದೆ. ನಾಟೆಕಲ್ ಸರಕಾರಿ ಆಸ್ಪತ್ರೆಯಲ್ಲಿ ಉಳ್ಳಾಲ ತಾಲೂಕು ಕಚೇರಿ ಆರಂಭವಾಗಲಿದೆ. ಉಪತಹಶೀಲ್ದಾರ್ ನೇಮಕವಾಗಿದೆ. ತಹಶೀಲ್ದಾರ್ ನೇಮಕ ಇನ್ನಷ್ಟೇ ಆಗಬೇಕಿದೆ. ಈಗಾಗಲೇ 32 ಇಲಾಖೆಗಳಿಂದ ಉಳ್ಳಾಲ ತಾಲೂಕಿನಲ್ಲಿ ಇಲಾಖೆ ಕೇಂದ್ರ ಆರಂಭದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಮೂಲ್ಕಿ ತಾಲೂಕು ರಚನೆಗೆ ಸಂಬಂಧಿಸಿದ ಎಲ್ಲ ಪ್ರಸ್ತಾವನೆಯು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದ್ದು ಗಜೆಟ್ ನೋಟಿಫಿಕೇಶನ್ ಮಾತ್ರ ಬಾಕಿ ಇದೆ.
ಪ್ರಗತಿಯಲ್ಲಿದೆ ತಾಲೂಕು ರಚನೆ :
ಉಳ್ಳಾಲ ತಾಲೂಕು ರಚನೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತದಲ್ಲಿದ್ದು, ತಾಂತ್ರಿಕವಾಗಿ ಆರಂಭವಾಗುವುದಷ್ಟೇ ಬಾಕಿ ಇದೆ. ನಾಟೆಕಲ್ ಸರಕಾರಿ ಆಸ್ಪತ್ರೆಯಲ್ಲಿ ಉಳ್ಳಾಲ ತಾಲೂಕು ಕಚೇರಿ ಆರಂಭವಾಗಲಿದೆ. ಉಪತಹಶೀಲ್ದಾರ್ ನೇಮಕವಾಗಿದೆ. ತಹಶೀಲ್ದಾರ್ ನೇಮಕ ಇನ್ನಷ್ಟೇ ಆಗಬೇಕಿದೆ. ಈಗಾಗಲೇ 32 ಇಲಾಖೆಗಳಿಂದ ಉಳ್ಳಾಲ ತಾಲೂಕಿನಲ್ಲಿ ಇಲಾಖೆ ಕೇಂದ್ರ ಆರಂಭದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಮೂಲ್ಕಿ ತಾಲೂಕು ರಚನೆಗೆ ಸಂಬಂಧಿಸಿದ ಎಲ್ಲ ಪ್ರಸ್ತಾವನೆಯು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದ್ದು ಗಜೆಟ್ ನೋಟಿಫಿಕೇಶನ್ ಮಾತ್ರ ಬಾಕಿ ಇದೆ.
ಉಳ್ಳಾಲ, ಮೂಲ್ಕಿ ಹೊಸ ತಾಲೂಕು ರಚನೆ ಪ್ರಗತಿ ಯಲ್ಲಿದೆ. ಹೊಸ ತಾಲೂಕು ರಚನೆಯಾಗುವ ಸಂದರ್ಭ ತಾ.ಪಂ., ಅದಕ್ಕೆ ಸಂಬಂಧಿಸಿದ 32 ಇಲಾಖೆಗಳು ಪ್ರತ್ಯೇಕವಾಗಿ ನಿರ್ಮಾಣವಾಗಲಿದೆ. ಎಲ್ಲ ಇಲಾಖೆಯಿಂದ ಈ ಕುರಿತ ಮಾಹಿತಿ ಪಡೆಯ ಲಾಗುತ್ತದೆ. ಸಿಬಂದಿ ಕೊರತೆ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು. ಅಲ್ಲಿಯವರೆಗೆ ಈಗ ಇರುವ ಸಿಬಂದಿಯವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗುತ್ತದೆ. –ಗುರುಪ್ರಸಾದ್, ತಹಶೀಲ್ದಾರ್, ಮಂಗಳೂರು ತಾಲೂಕು.
-ದಿನೇಶ್ ಇರಾ