ಲಾೖಲ: ನೆರೆಯ ಅಬ್ಬರ ಹೊತ್ತೂಯ್ದಿತು ಬದುಕಿನ ಉಂಗುರ

ದೀಪಾವಳಿಗೆ ಮದುವೆಯಾಗಬೇಕಿತ್ತು; ಮದುಮಗಳು ಖುಷಿಯಲ್ಲಿ ಕುಣಿದಾಡಬೇಕಿತ್ತು

Team Udayavani, Aug 17, 2019, 5:00 AM IST

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್‌ ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ನೊಂದವರ ಬದುಕ ಕಟ್ಟಲು ಹೊರಟಿವೆ. ಬನ್ನಿ ಜತೆಗೂಡೋಣ.

ಬೆಳ್ತಂಗಡಿ: ಈ ದೀಪಾವಳಿಯಲ್ಲಿ ಇದೇ ಮನೆಯಲ್ಲಿ ಕಣ್ಣಿಗೆ ಹಬ್ಬವಾಗುವಷ್ಟು ಬೆಳಕಿರಬೇಕಿತ್ತು. ಯಾಕೆಂದರೆ, ದೀಪಾವಳಿ ಹಬ್ಬದ ಜತೆಗೆ ಮನೆಯ ಮಗಳ ಮದುವೆಯ ಸಡಗರವೂ ಸೇರುತ್ತಿತ್ತು. ಆದರೆ ಈಗ ಅವೆಲ್ಲವೂ ಕನಸೆನಿಸಿ ಬಿಟ್ಟಿದೆ!
ಇದು ಲಾೖಲ ಗ್ರಾಮದಲ್ಲಿ ಮನೆ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತು ಕುಳಿತಿರುವ ನೆರೆ ಸಂತ್ರಸ್ತ ಕುಟುಂಬವೊಂದರ ಕಥೆ.

ಮೀನಾಕ್ಷಿ ಸುಂದರ ಅವರ ದೊಡ್ಡ ಮಗಳಿಗೆ ಮದುವೆ ದಿನ ನಿಗದಿಯಾಗುವುದರಲ್ಲಿತ್ತು. ಇತ್ತೀಚೆಗಷ್ಟೇ ನಿಶ್ಚಿತಾರ್ಥವೂ ಮುಗಿದಿತ್ತು. ಆದರೆ ಕಳೆದ ಶುಕ್ರವಾರ ಬಂದ ನೆರೆ ನಿಶ್ಚಿತಾರ್ಥದ ಉಂಗುರವನ್ನೂ ನುಂಗಿಕೊಂಡು ಹೋಗಿದೆ. ಈಗ ಇಡೀ ಕುಟುಂಬಕ್ಕೆ ಏನು ಮಾಡಬೇಕೆಂದೇ ತೋಚುತ್ತಿಲ್ಲ.

ಲಾೖಲ ಗ್ರಾಮದ ಗುರಿಂಗಾನ, ಪುತ್ರಬೈಲು, ಗಾಂಧಿ ನಗರ, ಬೆರ್ಕೆ ಮೊದಲಾದ ಪ್ರದೇಶಗಳಿಗೆ ಹಾನಿಯಾಗಿದ್ದು, ಗ್ರಾಮದಲ್ಲಿ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ನೆರೆ ನೀರು ನುಗ್ಗಿ ಮತ್ತು ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿವೆ. ಇವರಲ್ಲಿ ಬಹುತೇಕ ಮಂದಿ ಕೂಲಿ ಮಾಡಿಕೊಂಡು ಬದುಕು ನಡೆಸುತ್ತಿದ್ದವರು. ಕೆಲಸಕ್ಕೆ ಹೋದವರು ಮನೆಗೆಂದು ವಾಪಸಾದಾಗ ಮನೆಗಳೇ ಇರಲಿಲ್ಲ !

ಗ್ರಾಮದಲ್ಲಿ ಸುಮಾರು 53 ಮಂದಿ ಸಂತ್ರಸ್ತರಾಗಿದ್ದು, ಈಗ ಮನೆ ಕಳೆದುಕೊಂಡ 4 ಕುಟುಂಬಗಳ ಸದಸ್ಯರು ಮಾತ್ರ ಕರ್ನೋಡಿ ಶಾಲೆಯಲ್ಲಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಇವರು ಬಾಡಿಗೆ ಮನೆ ಹುಡುಕುತ್ತಿದ್ದು, ದುಬಾರಿ ಬಾಡಿಗೆಯ ಜತೆಗೆ ಸಾಕಷ್ಟು ಮುಂಗಡ ಹಣ ನೀಡಬೇಕಿದೆ.

ದಾಖಲೆ-ಪುಸ್ತಕವೂ ಇಲ್ಲ
ನದಿ ಬದಿಯಲ್ಲಿ ವಾಸವಿದ್ದರೂ ನೆರೆಯನ್ನೇ ನಿರೀಕ್ಷಿಸದ ಕುಟುಂಬಗಳು ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುತ್ತಿದ್ದ ಸ್ಥಳಕ್ಕೇ ದೂರವಾಣಿ ಕರೆ ಬಂದಿತು. ಮನೆ ಮುಳುಗಿದ ಸುದ್ದಿ ಕೇಳಿ ಓಡೋಡಿ ಬರುವಷ್ಟರಲ್ಲಿ ಎಲ್ಲವೂ ಮುಗಿ
ದಿತ್ತು ಎನ್ನುತ್ತಾರೆ ಸಂತ್ರಸ್ತ ಮೀನಾಕ್ಷಿ ರಾಮ. ನಮ್ಮ ಮನೆ ಮತ್ತು ಇತರ ದಾಖಲೆ ಏನಾದರೂ ಇದೆಯೇ ಎಂದು ನೋಡಿದರೆ ಅದೂ ಸಿಗಲಿಲ್ಲ. ನಮ್ಮದೆಂಬುದನ್ನು ಏನೂ ಉಳಿಸಿಕೊಳ್ಳಲಾಗಲಿಲ್ಲ ಎಂದು ದುಃಖದಿಂದ ಹೇಳುತ್ತಾರೆ ಸಂತ್ರಸ್ತರಲ್ಲೊಬ್ಬರಾದ ಚಿದಾನಂದ.

ಆಶ್ರಯಕ್ಕೆ ಶಹಭಾಷ್‌
ಕೂಲಿ ಮಾಡುತ್ತಿದ್ದ ಕುಟುಂಬಗಳು ಮನೆ ಕಳೆದುಕೊಂಡರೂ ಸರಕಾರ-ಸಂಘಸಂಸ್ಥೆಗಳು ನೀಡಿರುವ ಆಶ್ರಯಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ನಮಗೆ ಹಿಂದಿನ ಜೀವನ ಮತ್ತೆ ಸಿಗುತ್ತದೋ ಗೊತ್ತಿಲ್ಲ. ನಮ್ಮ ಬದುಕು ಮತ್ತೆ ಶೂನ್ಯದಿಂದ ಆರಂಭವಾಗಬೇಕು. ಆದರೆ ಇವರ ಸೇವೆಗಳು ಬದುಕುವ ಧೈರ್ಯವನ್ನು ಕಲ್ಪಿಸಿವೆ ಎಂದರು ಮತ್ತೂಬ್ಬ ಸಂತ್ರಸ್ತೆ ಮೀನಾಕ್ಷಿ ಸುಂದರ.

ಸಂತ್ರಸ್ತಗೆ ಹೃದಯಾಘಾತ
ಬೆಳ್ತಂಗಡಿ: ಇಲ್ಲಿನ ಮಲವಂತಿಗೆ ಗ್ರಾಮದಲ್ಲಿ ನಡೆದ ಪ್ರಕೃತಿ ವಿಕೋಪವನ್ನು ಕಣ್ಣಾರೆ ಕಂಡ ಓರ್ವರು ಹೃದಯಘಾತಗೊಳಗಾಗಿ ಆಸ್ಪತ್ರೆ ಸೇರಿದ ಬಗ್ಗೆ ವರದಿಯಾಗಿದೆ.
ಇಲ್ಲಿನ ಸಿಂಗನಾರು ನಿವಾಸಿ ರುಕ್ಮಯ್ಯ ಮಲೆಕುಡಿಯ (68) ಹೃದಯಾ ಘಾತಕ್ಕೀಡಾ ದವರು. ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಿಂಗನಾರು ಮಲೆಕುಡಿಯ ಪ್ರದೇಶದಲ್ಲಿ ಆ.9ರಂದು ಪ್ರಕೃತಿ ವಿಕೋಪದಿಂದಾಗಿ ರುಕ್ಮಯ ಅವರ ಮನೆಯ ಹಿಂಬದಿ, ಸಂಬಂಧಿ ಗುಲಾಬಿ ಅವರ ಮನೆಯಂಗಳ
ದಲ್ಲಿ ನದಿ ಸೃಷ್ಟಿಯಾಗಿತ್ತು. ಬೃಹತ್‌ ಗಾತ್ರದ ಬಂಡೆಗಳು, ಮರ ಗಳೊಂದಿಗೆ 6 ಅಡಿ ನೀರು ಬಂದದ್ದನ್ನು ರುಕ್ಮಯ್ಯ ಮಲೆಕುಡಿಯರು ಕಣ್ಣಾರೆ ಕಂಡು ಭೀತಿಗೊಳಗಾಗಿದ್ದರು. ಜತೆಗೆ ಅವರ 5 ಎಕರೆ ತೋಟ, ಗದ್ದೆ ಸಂಪೂರ್ಣ ನಾಶವಾಗಿತ್ತು. ಇದರಿಂದ ಆಘಾತಗೊಂಡ ಅವರು ಗಂಜಿಕೇಂದ್ರಕ್ಕೂ ತೆರಳದೆ ಮನೆಯಲ್ಲಿಯೇ ಇದ್ದರು.
ಆ.15ರಂದು ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅವರನ್ನು ಮಗ, 6 ಕಿ.ಮೀ. ಹೊತ್ತೂಯ್ದು ಬಳಿಕ ವಾಹನದ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶನಿವಾರ ಅವರಿಗೆ ಶಸ್ತ್ರಕ್ರಿಯೆ ನಡೆಯಲಿದೆ ಎಂದು ಮಗ ಶ್ರೀನಿವಾಸ್‌ ತಿಳಿಸಿದ್ದಾರೆ.

ಎಳನೀರು ಬಂಗಾರಪಲ್ಕೆ: ಭೂಮಿ ಬಿರುಕು
ಬೆಳ್ತಂಗಡಿ: ಇಲ್ಲಿನ ಮಲವಂತಿಗೆ ಗ್ರಾಮದ ಎಳನೀರು ಬಂಗಾರ ಪಲ್ಕೆಯಲ್ಲಿ ಶುಕ್ರವಾರ ಎಲ್ಯಣ್ಣ ಮಲೆ ಕುಡಿಯ ಎಂಬುವರ ಜಾಗದಲ್ಲಿ ಭೂಮಿ ಬಿರುಕು ಬಿಟ್ಟಿದೆ. ಬಂಗಾರಪಲ್ಕೆ ಸಮೀಪವಿರುವ ಏಲ್ಯಣ್ಣ ಮಲೆಕುಡಿಯ ಅವರ ಜಾಗದ ಸುತ್ತಮುತ್ತ ಬಿರುಕು ಬಿಟ್ಟಿರುವುದನ್ನು ಶುಕ್ರವಾರ ಗಮನಿಸಿದ್ದರು. ಮನೆಯೂ ಜಗ್ಗಿದ್ದರಿಂದ ಪತ್ನಿ ಮತ್ತು ಮಕ್ಕಳು ಸ್ಥಳೀಯರ ಸಹಾಯ ದಿಂದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ನೇತ್ರಾವತಿ ಮತ್ತೆ ಉಕ್ಕುವ ಭೀತಿ
ಎಲ್ಯಣ್ಣ ಅವರ ಮನೆ ಸಮೀಪವೇ ನೇತ್ರಾವತಿ ನದಿ ಹರಿಯುತ್ತಿದ್ದು, ಮಣ್ಣು ಕುಸಿತಗೊಂಡಲ್ಲಿ ನದಿಗೆ ಹೂಳು ತುಂಬಿ ಮತ್ತೆ ಪ್ರವಾಹ ಸಂಭವಿಸುವ ಸಾಧ್ಯತೆ ಉಂಟಾ
ಗಿದೆ. ಬಿರುಕು ಉಂಟಾಗಿರುವ 2 ಎಕ್ರೆ ಪ್ರದೇಶದಲ್ಲಿ ಕಾಫಿ, ಏಲಕ್ಕಿ, ಅಡಿಕೆ ತೋಟ ನಾಶವಾಗುವ ಭೀತಿಯಿದೆ. ಮುಂಚಿತ ಕ್ರಮವಾಗಿ ಕುಟುಂಬ ಸುರಕ್ಷಿತ ಸ್ಥಳಕ್ಕೆ ತೆರಳಿದೆ. ಕಳೆದ ವಾರವಷ್ಟೇ ನಾವೂರು ಗ್ರಾಮದ ಮಂಜೆಟ್ಟಿ ಎರ್ಮೆಲೆ ರಸ್ತೆ ಮಧ್ಯವಿರುವ ಪಾಂಚಾರು ಗುಡ್ಡೆ ಬಿರುಕು ಬಿಟ್ಟು 1 ಅಡಿ ಭೂ ಪ್ರದೇಶವೇ ಜಗ್ಗಿರುವ ನಡುವೆ ಮತ್ತೂಂದು ಆತಂಕ ಎದುರಾಗಿದೆ.

6 ಮನೆಗಳು ನಾಶ
ಪ್ರಸ್ತುತ 4 ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಒಟ್ಟು 15 ಮನೆಗಳಿಗೆ ಹಾನಿಯಾಗಿದ್ದು, 6 ಮನೆಗಳು ಸಂಪೂರ್ಣ ಹೋಗಿದೆ. ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ.
-ಮೇಘನಾ,
ಗ್ರಾಮಕರಣಿಕೆ, ಲಾೖಲ

ದಾಖಲೆಯೂ ಉಳಿದಿಲ್ಲ
ತಂಗಿಯ ಮನೆಗೆ ಕಾರ್ಯಕ್ರಮಕ್ಕೆ ಹೋಗಿದ್ದೆವು. ಬಂದು ನೋಡುವಾಗ ಯಾವುದೂ ಉಳಿದಿರಲಿಲ್ಲ. ಮನೆಯಲ್ಲಿದ್ದ ಎಲ್ಲಾ ಸೊತ್ತುಗಳು ನಾಶವಾಗಿವೆ. ನಮಗೆ 25 ಸೆಂಟ್ಸ್‌ ಜಾಗವಿದ್ದು, ಅದರ ದಾಖಲೆಯೂ ನಾಶವಾಗಿದೆ. ಮುಂದೇನು ಎಂಬುದು ಗೊತ್ತಿಲ್ಲ.
 -ಚಿದಾನಂದ ಬೆರ್ಕೆ, ಸಂತ್ತಸ್ತ

4 ಕುಟುಂಬಗಳಿಗೆ ಆಶ್ರಯ
ಪ್ರಸ್ತುತ ನಮ್ಮ ಶಾಲೆಯಲ್ಲಿ 4 ಕುಟುಂಬಗಳು ಆಶ್ರಯ ಪಡೆದಿದ್ದು, ಬಾಡಿಗೆ ಮನೆ ಹುಡುಕುತ್ತಿದ್ದಾರೆ. ನಮ್ಮ ಅಡುಗೆಯ ಸಿಬಂದಿಯೇ ಅಡುಗೆ ಮಾಡಿ ಕೊಡುತ್ತಿದ್ದು, ಅದರ ಪೂರ್ಣ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲಾಗುತ್ತಿದೆ.
-ಜಗನ್ನಾಥ, ಮುಖ್ಯಶಿಕ್ಷಕರು,
ಕರ್ನೋಡಿ ಶಾಲೆ.

ಬಾಡಿಗೆಯೂ ದುಬಾರಿ
ನಾವು ಗುರಿಂಗಾನದಲ್ಲಿ ಬಾಡಿಗೆ ಮನೆಯಲ್ಲಿದ್ದೆವೆ. ಆ ಮನೆಯೇ ನಾಶವಾಗಿದ್ದು, ಈಗ ಸಂತ್ರಸ್ತರ ಕೇಂದ್ರದಲ್ಲಿದ್ದೇವೆ. ಬೇರೆ ಬಾಡಿಗೆ ಮನೆ ಹುಡುವುದಕ್ಕೂ ಬಾಡಿಗೆ ಸಿಕ್ಕಾಪಟ್ಟೆ ಹೇಳುತ್ತಾರೆ. ಏನು ಮಾಡಬೇಕೆಂದೇ ತೋಚುತ್ತಿಲ್ಲ.
-ಮೀನಾಕ್ಷಿ ರಾಮ ಗುರಿಂಗಾನ,
ಸಂತ್ರಸ್ತೆ

ಬೆಂಡೋಲೆ ಕೊಚ್ಚಿ ಹೋಯಿತು
ತನಗೆ ಮೂರು ಹೆಣ್ಣು ಮಕ್ಕಳಿದ್ದು, ದೊಡ್ಡವಳಿಗೆ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಅವಳ ನಿಶ್ಚಿತಾರ್ಥದ ಉಂಗುರ, ಕಿವಿಯೋಲೆ ಸಹಿತ ಎಲ್ಲವೂ ನೆರೆಗೆ ಕೊಚ್ಚಿ ಹೋಗಿದೆ. ದೀಪಾ ವಳಿ ಸಂದರ್ಭ ಮದುವೆ ಮಾಡಲು ತೀರ್ಮಾನಿ ಸಿದ್ದೆವು. ಆದರೆ ಈಗ ಎಲ್ಲವನ್ನೂ ಕಳೆದುಕೊಂಡಿದ್ದೇವೆ.
 -ಮೀನಾಕ್ಷಿ ಸುಂದರ ಪುತ್ರಬೈಲು, ಸಂತ್ರಸ್ತೆ

- ಕಿರಣ್‌ ಸರಪಾಡಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ