ಲಾವತ್ತಡ್ಕ: ಗ್ಯಾಸ್ ಟ್ಯಾಂಕರ್ ಪಲ್ಟಿ
Team Udayavani, Mar 4, 2019, 1:00 AM IST
ನೆಲ್ಯಾಡಿ: ಮಂಗಳೂರಿ ನಿಂದ ಬೆಂಗಳೂರಿಗೆ ಗ್ಯಾಸ್ ತುಂಬಿಸಿಕೊಂಡು ತೆರಳುತ್ತಿದ್ದ ಬುಲೆಟ್ ಟ್ಯಾಂಕರೊಂದು ರಾಷ್ಟ್ರೀಯ ಹೆದ್ದಾರಿ 75ರ ಲಾವತ್ತಡ್ಕ ಎಂಬಲ್ಲಿ ಉರುಳಿಬಿದ್ದ ಘಟನೆ ರವಿವಾರ ಸಂಜೆ ವೇಳೆಗೆ ನಡೆದಿದೆ.
ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಪೆರಿಯಶಾಂತಿ ಸಮೀಪದ ಲಾವತ್ತಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದು, ಅಲ್ಪ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆ ಪ್ರಾರಂಭವಾಗಿತ್ತು. ತತ್ಕ್ಷಣ ನೆಲ್ಯಾಡಿ ಹೊರ ಠಾಣಾಧಿಕಾರಿ ತಮ್ಮ ಸಿಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ವಾಹನಗಳನ್ನು ಬದಲಿ ಮಾರ್ಗದಲ್ಲಿ ಕಳುಹಿಸುವ ಮೂಲಕ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡರು.
ಪುತ್ತೂರು ಸಂಚಾರಿ ಪೊಲೀಸ್ ಹಾಗೂ ಉಪ್ಪಿನಂಗಡಿ ಠಾಣಾ ಸಿಬಂದಿ ಗುಂಡ್ಯ ಹಾಗೂ ಪೆರಿಯಶಾಂತಿಯಲ್ಲಿ ವಾಹನಗಳಿಗೆ ಬದಲಿ ಮಾರ್ಗವನ್ನು ಸೂಚಿಸುವ ಮೂಲಕ ಹೆಚ್ಚಿನ ಅವಘಡ ಸಂಭವಿಸದಂತೆ ಕಾರ್ಯನಿರ್ವ ಹಿಸಿದರು. ಪುತ್ತೂರು ಅಗ್ನಿ ಶಾಮಕ ದಳದ ಸಿಬಂದಿಯೂ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.