ಕೋಮು ವೈಷಮ್ಯ ತ್ಯಜಿಸಿ ಮನುಷ್ಯರಾಗಿ ಬದುಕೋಣ

Team Udayavani, Jan 7, 2018, 2:49 PM IST

ಮಂಗಳೂರು: ಕೋಮುಗಲಭೆಯ ವೇಳೆ “ಹಿಂದೂ ವಾಗಲೀ, ಮುಸಲ್ಮಾನನಾಗಲೀ ಸತ್ತರೆ ಅವರ ಕುಟುಂಬಕ್ಕೆ ಮಾತ್ರ ನಷ್ಟ. ಹಾಗಾಗಿ ದಯವಿಟ್ಟು ಕೋಮು ವೈಷಮ್ಯ ಬಿಟ್ಟು ಮನುಷ್ಯರಾಗಿ ಬದುಕೋಣ…’ ಎಂದು ಮಂಗಳೂರಿನ ಮುಸ್ಲಿಂ ಯುವಕನೋರ್ವ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಮನವಿ ಮಾಡಿರುವ ವೀಡಿಯೋ ಇದೀಗ ವೈರಲ್‌ ಆಗಿದೆ. ಕೇವಲ 7 ಗಂಟೆಯಲ್ಲಿ 43,777 ಮಂದಿ ಇದನ್ನು ವೀಕ್ಷಿಸಿದ್ದರೆ, 900ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ.

ಕೋಮು ಸೌಹಾರ್ದ ಬೆಸೆಯುವುದರೊಂದಿಗೆ ಹಿಂದೂ -ಮುಸ್ಲಿಂ-ಕ್ರೆ çಸ್ತ ಎಂದು ಭೇದಭಾವ ತೋರದೆ ಅನ್ಯೋನ್ಯತೆಯಿಂದಿರೋಣ ಎಂದು ಆತ ಮಾಡಿದ ಮನವಿಗೆ ಅನೇಕರು ಸ್ಪಂದಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 
“ಕಳೆದ ನಾಲ್ಕು ತಿಂಗಳ ಹಿಂದಷ್ಟೇ ನಾನು ಸಹೋದರ ನನ್ನು ಕಳೆದು ಕೊಂಡಿದ್ದೇನೆ. ಆದರೆ ಆತನದ್ದು ಕೊಲೆಯೇ ಅಥವಾ ಆತನೇ ನೀರಿಗೆ ಬಿದ್ದು ತೀರಿಕೊಂಡನೇ ಎಂಬುದು ಇದುವರೆಗೂ ಗೊತ್ತಿಲ್ಲ. ಮರ ಣೋ ತ್ತರ ಪರೀಕ್ಷಾ ವರದಿಯೂ ನಮ್ಮ ಕೈ ಸೇರಿಲ್ಲ. ಆದರೆ ಸಹೋದರನ ಸಾವಿನ ಆಘಾತದಿಂದ ನಮ್ಮ ಕುಟುಂಬ ಇನ್ನೂ ಹೊರಬಂದಿಲ್ಲ. ಆತನ ಫೋಟೋ ನೋಡಿಕೊಂಡು ತಾಯಿ ಅಳುವ ದೃಶ್ಯ ಮನ ಕಲಕುವಂತಿದೆ’ ಎಂದು ಹೇಳುವ ಯುವಕ, ಮೊನ್ನೆ ತಾನೇ ಕೊಲೆಯಾದ ಅಮಾಯಕ ದೀಪಕ್‌ ರಾವ್‌ ಅವರ ತಾಯಿಯ ವೇದನೆಯನ್ನು ನೋಡುವಾಗ ತನ್ನ ತಾಯಿಯ ನೆನಪಾಯಿತು. ಇನ್ನು ಮುಂದೆ ನಮ್ಮ ಮಂಗಳೂರಿನಲ್ಲಿ ಇಂತಹ ಘಟನೆ ಮರುಕಳಿಸದಿರಲಿ’ ಎನ್ನುತ್ತಾರೆ. ಸುಮಾರು 30 ನಿಮಿಷಗಳ ಈ ವಿಡಿಯೋದಲ್ಲಿ ಈ ಯುವಕ ತುಳುವಿನಲ್ಲೇ ಮಾತನಾಡಿದ್ದಾರೆ.

ಒಳ್ಳೆಯ ಹಿಂದೂ-ಮುಸ್ಲಿಂ ಹಿಂಸೆಗಿಳಿಯಲಾರ
“ಕೋಮು ಗಲಭೆಗೆ ಪ್ರಚೋದನೆ ನೀಡುವ ಯಾರ ಜೀವಕ್ಕೂ ಇದುವರೆಗೂ ಯಾವುದೇ ಹಾನಿಯಾಗಿಲ್ಲ. ಆದರೆ ಜೀವ ಕಳೆದು ಕೊಂಡವರೆಲ್ಲ ಮನೆಗೆ ಆಧಾರಸ್ತಂಭವಾಗಿರಬೇಕಾದ ಬಡ ಮಕ್ಕಳು. ಬೆಳಗ್ಗಿನಿಂದ ಸಂಜೆ ತನಕ ದುಡಿದು ಮನೆ ನಿರ್ವಹಣೆ ನೋಡಿಕೊಳ್ಳುವ ಇಂತಹವರನ್ನು ಸಾವು ಆಕ್ರಮಿಸಿದರೆ ಮನೆಯವರ ಪರಿಸ್ಥಿತಿಯನ್ನು ಯೋಚಿಸಿ ಎನ್ನುವ ಈ ಯುವಕ, ಒಳ್ಳೆಯ ಹಿಂದೂ ಮತ್ತು ಮುಸ್ಲಿಂ ಯಾವತ್ತೂ ಹಿಂಸೆಗೆ ಇಳಿಯಲಾರ. ಪರಸ್ಪರ ಧರ್ಮಕ್ಕಾಗಿ ಹೊಡೆದಾ ಡಿಕೊಂಡು ಸಾಯುವುದರಿಂದ ನಷ್ಟವಾಗುವುದು ಮನೆಯವರಿಗೆ ಮಾತ್ರ. ಇತರೆಲ್ಲರೂ ಒಂದೆರಡು ದಿನ ಸಾಂತ್ವನ ಹೇಳಿ ಮರೆಯಾಗುತ್ತಾರೆ. ಇನ್ನು ಮುಂದಾದರೂ ಎಲ್ಲ ಧರ್ಮದವರು ಪರಸ್ಪರ ಅನ್ಯೋನ್ಯತೆಯಿಂದ ಬಾಳುವ ಪ್ರತಿಜ್ಞೆ ಮಾಡಬೇಕಿದೆ’ ಎನ್ನುತ್ತಾರೆ. 

ನಷ್ಟ ಮನೆಯವರಿಗೇ ಹೊರತು ಧರ್ಮಕ್ಕಲ್ಲ
“ಧರ್ಮದ ಕಾರಣಕ್ಕಾಗಿ ಸತ್ತರೆ ಮನೆಯವರಿಗೆ ಪರಿಹಾರ ಧನವಾಗಿ ಲಕ್ಷ ಲಕ್ಷ ರೂ. ಸಿಗಬಹುದು. ಆದರೆ ಹೆತ್ತಮ್ಮನಿಗೆ ಕಳೆದುಕೊಂಡ ಮಗ ಮತ್ತೆ ಸಿಗುತ್ತಾನೆಯೇ? ಮುಸ್ಲಿಂ ಯುವಕನೊಬ್ಬ ಸತ್ತರೆ ಆ ಧರ್ಮಕ್ಕೆ ಏನೂ ನಷ್ಟ ಇಲ್ಲ. ಹಾಗೆಯೇ ಹಿಂದೂ ಯುವಕ ಸತ್ತರೆ ಅವನ ಧರ್ಮಕ್ಕೂ ನಷ್ಟ ಇಲ್ಲ. ಆದರೆ ನಷ್ಟ ನಿಮ್ಮನ್ನೇ ನಂಬಿಕೊಂಡಿರುವ ಮನೆಯವರಿಗಲ್ಲವೇ? ಗಾಂಜಾ, ಕುಡಿತ, ಧರ್ಮಕ್ಕಾಗಿನ ಹೊಡೆದಾಟ -ಇವನ್ನೆಲ್ಲ ಬಿಟ್ಟು ಬಿಡಿ. ನೆಮ್ಮದಿಯಿಂದ ಬದುಕೋಣ. ನಮ್ಮದು ಬುದ್ಧಿವಂತರ ಜಿಲ್ಲೆ’ ಎಂದು ಮನವಿ ಮಾಡುವ ದೃಶ್ಯ ವೀಡಿಯೋದಲ್ಲಿದೆ. ಈ ಯುವಕನ ಮಾತುಗಳಿಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 

  ಧನ್ಯಾ ಬಾಳೆಕಜೆ
 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ