ಅಸಹಕಾರ ಚಳವಳಿಯಿಂದ ಜನಪ್ರತಿನಿಧಿಗಳಿಗೆ ಮುಕ್ತಿ

ಶಾಸಕ ಅಂಗಾರಗೆ ಸಚಿವ ಸ್ಥಾನ: ಸೆ. 15ರಂದು ನಿಯೋಗದಿಂದ ಸಿಎಂ ಭೇಟಿಗೆ ಮುಹೂರ್ತ

Team Udayavani, Sep 9, 2019, 5:45 AM IST

ವಿಶೇಷ ವರದಿ-ಸುಳ್ಯ : ಶಾಸಕ ಎಸ್‌. ಅಂಗಾರ ಅವರಿಗೆ ಅಂತಿಮ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಘೋಷಿಸಿದ್ದ ಅಸಹಕಾರ ಚಳವಳಿಯಿಂದ ಜನಪ್ರತಿನಿಧಿಗಳಿಗೆ ಮುಕ್ತಿ ನೀಡಲು ಬಿಜೆಪಿ ಮಂಡಲ ಸಮಿತಿ ತೀರ್ಮಾನಿಸಿದೆ.

ಬಿಜೆಪಿ ಸರಕಾರದ ರಚನೆಗೊಂಡು ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ತಪ್ಪಿದ ಕಾರಣ ಆ. 21ರಂದು ಮಂಡಲ ಸಮಿತಿ ಸಭೆ ನಡೆಸಿ, ಅಸಹಕಾರ ಚಳವಳಿ ನಡೆಸಲು ನಿರ್ಧರಿಸಿತ್ತು. 200ಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳು ಹಾಗೂ ಪಕ್ಷದ ಪದಾಧಿಕಾರಿಗಳು ಮಂಡಲ ಸಮಿತಿಗೆ ರಾಜೀನಾಮೆ ಪತ್ರ ಸಲ್ಲಿಸಿ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಇಂದಿನಿಂದ ಮುಕ್ತಿ
ವಿಧಾನಸಭಾ ಕ್ಷೇತ್ರದ ಎಲ್ಲ ಸ್ತರದ ಆಡಳಿತ ವ್ಯವಸ್ಥೆಯಲ್ಲಿ ಬಿಜೆಪಿ ಬೆಂಬಲಿತ ಚುನಾಯಿತ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲಿದ್ದಾರೆ. ಸಚಿವ ಸ್ಥಾನ ದೊರೆಯದ ಕಾರಣ ಬೇಡಿಕೆ ಈಡೇರುವ ತನಕ ಪಕ್ಷದ ಮೂಲಕ ಗೆದ್ದ ಜನಪ್ರತಿನಿಧಿಗಳು ತಮ್ಮ ಕಚೇರಿಗೆ ಹೋಗದೆ, ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸದೆ ಪಕ್ಷದ ಹೈಕಮಾಂಡ್‌ಗೆ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿತ್ತು. 18 ದಿನಗಳ ಬಳಿಕ ನಿರ್ಧಾರ ಬದಲಿಸಲಾಗಿದೆ. ಜನಪ್ರತಿನಿಧಿಗಳ ಗೈರಿನಿಂದ ಜನರ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುವ ಕಾರಣಕ್ಕೆ ಸೆ. 9ರಿಂದ ಅಸಹಕಾರ ಚಳವಳಿಯಿಂದ ಜನಪ್ರತಿನಿಧಿಗಳಿಗೆ ಮುಕ್ತಿ ನೀಡಲಾಗಿದೆ.

ಸಿಎಂ ಭೇಟಿಗೆ ಸಮಯ ನಿಗದಿ
ಮಂಡಲ ಸಮಿತಿ ಬೇಡಿಕೆಯಂತೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಮಂಡಲ ಮತ್ತು ಜಿಲ್ಲೆಯ ಬಿಜೆಪಿ ನಿಯೋಗ ಸೆ. 15ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಅಂಗಾರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಲಿದೆ.

ಜಿಲ್ಲೆಯ ಶಾಸಕರು ಈ ನಿಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಚಿವ ಸ್ಥಾನ ಹೊರತುಪಡಿಸಿ ಬೇರೆ ಯಾವುದೇ ಸ್ಥಾನಕ್ಕೆ ಸಮ್ಮತಿ ಸೂಚಿಸುವುದಿಲ್ಲ ಎಂದು ಮಂಡಲ ಸಮಿತಿ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಂಸದೀಯ ಕಾರ್ಯದರ್ಶಿಸ್ಥಾನ ನಿರಾಕರಣೆ ಈ ಮಧ್ಯೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡುವ ಪ್ರಸ್ತಾವ ಎರಡು ದಿನಗಳ ಹಿಂದೆ ವ್ಯಕ್ತವಾಗಿತ್ತು. ಅದನ್ನು ಶಾಸಕ ಅಂಗಾರ ನಿರಾಕರಿಸಿದ್ದಾರೆ. ಹಿರಿತನ ಆಧರಿಸಿ ಸುಳ್ಯ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಪಕ್ಷದ ಜಿಲ್ಲಾ ಮತ್ತು ರಾಜ್ಯ ಘಟಕದ ಜತೆಗೆ ಅಸಹಕಾರ ಮುಂದುವರಿಯಲಿದೆ ಎಂದು ಮಂಡಲ ಸಮಿತಿ ಪದಾಧಿಕಾರಿಗಳು ರಾಜ್ಯ ಘಟಕಕ್ಕೆ ಸಂದೇಶ ರವಾನಿಸಿದ್ದಾರೆ.

ಕಾರ್ಯಕರ್ತರ ಅಸಮಾಧಾನ!
ಅಸಹಕಾರ ಚಳವಳಿ ಘೋಷಣೆ ಬಳಿಕ ಮಂಡಲ ಸಮಿತಿ ಮುಖಂಡರು, ಪದಾಧಿಕಾರಿಗಳು ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದಕ್ಕೆ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನಳಿನ್‌ ಹುಟ್ಟೂರಿಗೆ ಭೇಟಿ ನೀಡಿದಾಗಲೂ ಸ್ವಾಗತಿಸಲು ಮುಖಂಡರು ಆಗಮಿಸಿದ್ದರು. ಅಸಹಕಾರ ಚಳವಳಿ ಹೆಸರಿಗೆ ಮಾತ್ರ ಎಂದು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದರು.

ನಿರ್ಧಾರದಿಂದ ಹಿಂದೆ ಸರಿಯೆವು
ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸೆ. 9ರಿಂದ ಜನಪ್ರತಿನಿಧಿಗಳಿಗೆ ಅಸಹಕಾರ ಚಳವಳಿಯಿಂದ ಮುಕ್ತಿ ನೀಡಲು ನಿರ್ಧರಿಸಲಾಗಿದೆ. ಅವರು ಕಚೇರಿ, ಸಭೆ ಸಮಾರಂಭಗಳಿಗೆ ತೆರಳಲಿದ್ದಾರೆ. ಆದರೆ ಪಕ್ಷದ ಜಿಲ್ಲಾ ಮತ್ತು ರಾಜ್ಯ ಘಟಕದೊಂದಿಗೆ ನಮ್ಮ ಅಸಹಕಾರ ಚಳವಳಿ ಮುಂದುವರಿಯಲಿದೆ. ಬೇಡಿಕೆ ಈಡೇರುವ ತನಕ ಸೂಚನೆ, ಆದೇಶವನ್ನು ಕಾರ್ಯಗೊತಗೊಳಿಸದೆ ಅಸಹಕಾರ ಧೋರಣೆ ತಳೆಯಲಿದ್ದೇವೆ. ಸೆ. 15ರಂದು ಬಿಜೆಪಿ ಜಿಲ್ಲಾ ನಿಯೋಗದಿಂದ ಮುಖ್ಯಮಂತ್ರಿ ಭೇಟಿಗೆ ಸಮಯ ನಿಗದಿ ಆಗಿದ್ದು, ಅಂಗಾರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರುತ್ತೇವೆ.
– ವೆಂಕಟ ವಳಲಂಬೆ, ಅಧ್ಯಕ್ಷ, ಬಿಜೆಪಿ ಮಂಡಲ ಸಮಿತಿ, ಸುಳ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ