ನೀರಕಟ್ಟೆಯಲ್ಲಿ ಲಾರಿ ಪಲ್ಟಿ: 5 ತಾಸು ಸಂಚಾರ ವ್ಯತ್ಯಯ

ಗುಡ್ಡಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸಲೆತ್ನಿಸಿ ಪಲ್ಟಿ

Team Udayavani, Jun 16, 2019, 9:46 AM IST

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಲಾರಿ ರಸ್ತೆಗಡ್ಡವಾಗಿ ಮಗುಚಿ ಬಿದ್ದಿದ್ದು, ಸುಮಾರು 5 ತಾಸು ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವಾಯಿತು.

ಚೆನ್ನೈಯಿಂದ ಮಂಗಳೂರಿಗೆ ಕೋಳಿ ಗೊಬ್ಬರ ಹೇರಿಕೊಂಡು ಬರುತ್ತಿದ್ದ ಲಾರಿಯು ನೀರಕಟ್ಟೆ ತಿರುವಿನಲ್ಲಿ ರಸ್ತೆ ಬದಿಯ ಗುಡ್ಡಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಪಲ್ಟಿಯಾಯಿತು. ಚಾಲಕ ರಾಜ್‌ಕುಮಾರ್‌ ಮತ್ತು ಕ್ಲೀನರ್‌ ಗಜೇಂದ್ರ ಅವರು ಅಪಾಯದಿಂದ ಪಾರಾಗಿದ್ದಾರೆ.

ಲಾರಿಯು ಇಡೀ ರಸ್ತೆಯನ್ನು ಆವರಿಸಿಕೊಂಡ ಕಾರಣ ಸಂಚಾರ ವ್ಯತ್ಯಯವಾಯಿತು. ರಸ್ತೆಯ ಒಂದು ಬದಿಯಲ್ಲಿ ದ್ವಿಚಕ್ರ ವಾಹನ ಹೋಗುವಷ್ಟು ಜಾಗ ಮಾತ್ರ ಇತ್ತು. ಅಲ್ಲೂ ತೋಡು ಇದ್ದ ಕಾರಣ ಭಾರೀ ಕಷ್ಟದಿಂದ ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸುತ್ತಿದ್ದವು.

ಬೆಳಗ್ಗೆ 10 ಗಂಟೆ ಸುಮಾರಿಗೆ ಲಾರಿ ಪಲ್ಟಿಯಾಗಿತ್ತು. ಗೊಬ್ಬರದ ಚೀಲಗಳನ್ನು ಬೇರೆ ಲಾರಿಗೆ ಸ್ಥಳಾಂತರಿಸಿ ಕ್ರೇನ್‌ ಮೂಲಕ ಲಾರಿಯನ್ನು ಮೇಲೆತ್ತಿ ಬದಿಗೆ ಸರಿಸಿದ ಬಳಿಕ ಸಂಚಾರ ಪುನರಾರಂಭವಾಯಿತು.

ಮಂಗೂರು-ಬೆಂಗಳೂರು ಮಧ್ಯೆ ಸಂಚರಿಸುವ ವಾಹನಗಳು ಕಡಬ ರಸ್ತೆಯಾಗಿ ಸಾಗಿ ಪೆರಿಯಡ್ಕ ಮತ್ತು ಗೋಳಿತೊಟ್ಟು ಮೂಲಕ ಸಾಗಿದವು. ಆದರೆ ಲಾರಿ, ಟ್ಯಾಂಕರ್‌ ಮೊದಲಾದ ಘನ ವಾಹನಗಳು ನೀರಕಟ್ಟೆಯಿಂದ ಉಪ್ಪಿನಂಗಡಿ ತನಕ ಹಾಗೂ ಅತ್ತ ನೀರಕಟ್ಟೆಯಿಂದ ಗೋಳಿತೊಟ್ಟು ತನಕವೂ ಸಾಲುಗಟ್ಟಿ ನಿಂತಿದ್ದವು. ಲಾರಿಯನ್ನು ತೆರವುಗೊಳಿಸಿದ ಬಳಿಕವಷ್ಟೆ ಅವು ಸಂಚಾರ ಮುಂದುವರಿಸಿದವು. ಸ್ಥಳದಲ್ಲಿ ಉಪ್ಪಿನಂಗಡಿ ಎಸ್‌ಐ ನಂದ ಕುಮಾರ್‌, ಟ್ರಾಫಿ ಕ್‌ ಎಎಸ್‌ಐ ರುಕ್ಮಯ ಮತ್ತು ಸಿಬಂದಿ ಬಂದೋಬಸ್ತ್ನಲ್ಲಿ ನಿರತರಾಗಿದ್ದರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ