ಕಿಂಡಿ ಅಣೆಕಟ್ಟಿನ ನಿರ್ವಹಣೆ: ಜಲ ಸಂರಕ್ಷಣೆಗೆ ಪೂರಕ
Team Udayavani, Jan 28, 2022, 3:20 AM IST
ಹಳೆಯಂಗಡಿ: ಕಿಂಡಿ ಅಣೆಕಟ್ಟುಗಳ ಸಮರ್ಪಕ ನಿರ್ವಹಣೆ ಯಿಂದಾಗಿ ಪಡು ಪಣಂಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ತೋಕೂರು ಗ್ರಾಮದಲ್ಲಿ ಜಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.
ಗ್ರಾಮದ ಕಿಂಡಿ ಅಣೆಕಟ್ಟುಗಳ ರಾಜ ಕಾಲುವೆಯಲ್ಲಿ ಹರಿಯುವ ನೀರು ಅಣೆಕಟ್ಟಿನ ಮೇಲ್ಭಾಗದಲ್ಲಿ ಉಕ್ಕಿ ಹರಿಯುತ್ತಿದ್ದು,
ಸುತ್ತಮುತ್ತ ಗದ್ದೆಗಳ ಸಹಿತ ಕುಡಿಯುವ ನೀರಿನ ಬಾವಿಗಳಿಗೆ ಶೇಖರಣೆಗೊಂಡಿವೆ. ಗ್ರಾಮದ ಚಿಕ್ಕಟ್ರಾಯನ ಬಳಿಯ, ಕಲ್ಲಾಪು, ಮಾಗಂದಡಿ, ಬೆಳ್ಳಾಯರು, ತೋಕೂರು, ಕಂಬಳಬೆಟ್ಟು ಕಿಂಡಿ ಅಣೆಕಟ್ಟುಗಳ ಉತ್ತಮ ನಿರ್ವಹಣೆಗೆ ಸೇವಾ ಸಂಸ್ಥೆಗಳು ಕೂಡ ಶ್ರಮ ವಹಿಸಿವೆ.
ಪಡುಪಣಂಬೂರು ಗ್ರಾ.ಪಂ.ನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ತೋಕೂರು ಗ್ರಾಮ ಮಾದರಿಯಾಗಿದ್ದು ಮುಂದಿನ ಬೇಸಗೆಯಲ್ಲಿ ನೀರಿನ ಬವಣೆಯನ್ನು ನಿಭಾಯಿಸಲು ಕಂಡುಕೊಂಡಿರುವ ಕಿಂಡಿಅಣೆಕಟ್ಟಿನ ನಿರ್ವಹಣೆಯು ಪಂಚಾಯತ್ ಹಾಗೂ ಸಂಘ-ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಮುಂದಾಗಿವೆ.
ಉದಯವಾಣಿ ಅಭಿಯಾನ ಪ್ರೇರಣೆ:
ಎರಡು ವರ್ಷದ ಹಿಂದೆ “ಉದಯ ವಾಣಿ’ಯಲ್ಲಿ ಜಲ ಸಂರಕ್ಷಣೆಯ ಲೇಖನಗಳೇ ನಮಗೆ ಪ್ರೇರಣೆಯಾಗಿವೆ. ಇದರಿಂದ ಪ್ರೇರಿತಗೊಂಡು ಗ್ರಾಮದ ಕಿಂಡಿ ಅಣೆಕಟ್ಟುಗಳನ್ನು ಸುರಕ್ಷಿತ ವಾಗಿಡಲು, ಶ್ರಮದಾನ ನಡೆಸಲು ಸದಸ್ಯರು ಸಹಕಾರ ನೀಡಿದ್ದಾರೆ. ಇದು ಮುಂದೆಯೂ ಮುಂದುವರಿಯಲಿದೆ, ಕ್ಲಬ್‌ನ ಸೇವಾ ಯೋಜನೆಯಲ್ಲಿ ಇದನ್ನು ಪ್ರಾಮುಖ್ಯವಾಗಿಟ್ಟುಕೊಂಡಿದ್ದೇವೆ ಎನ್ನುವುದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸಂತೋಷ್ ದೇವಾಡಿಗ ಅವರ ಅಭಿಪ್ರಾಯ.
ಜಲ ಸುರಕ್ಷೆಯ ಭದ್ರತೆ :
ಕಿಂಡಿ ಅಣೆಕಟ್ಟಿನಲ್ಲಿ ಜಲಮೌಲ್ಯ ಹೆಚ್ಚಾಗಿದ್ದರಿಂದ ತೋಕೂರು ಗ್ರಾಮದಲ್ಲಿನ ಸುಮಾರು 65 ಕೃಷಿ ಕುಟುಂಬಗಳು ತಮ್ಮ 300ಕ್ಕೂ ಹೆಚ್ಚು ಕೃಷಿ ಭೂಮಿಯಲ್ಲಿ ಎರಡು ಬಾರಿ ಭತ್ತವನ್ನು ಬೆಳೆಯುತ್ತಿದ್ದಾರೆ. ತೋಟಗಾರಿಕೆಗೆ ವಿಶೇಷ ಆಸಕ್ತಿ ವಹಿಸಿ ಅಡಿಕೆ, ತೆಂಗು ಬೆಳೆಯನ್ನು 12 ಕುಟುಂಬಗಳು ಹೊಸದಾಗಿ ನರೇಗಾ ಯೋಜನೆಯ ಮೂಲಕ ಪ್ರಸ್ತುತ ವರ್ಷದಲ್ಲಿ ಖಾಲೀ ಜಮೀನಿನಲ್ಲಿ ತೊಡಗಿಸಿಕೊಂಡಿದ್ದಾರೆ. ಎರಡು ಕುಟುಂಬಗಳು ಮೀನು ಕೃಷಿಯನ್ನು ಆರಂಭಿಸಿದ್ದಾರೆ. ಅಣೆಕಟ್ಟಿನ ಸುತ್ತಮುತ್ತ ಇರುವ ಸುಮಾರು 270ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಬಾವಿಗಳಲ್ಲಿ ಬೇಸಗೆ ಸಮಯದಲ್ಲಿಯೂ ನೀರು ಪಡೆಯುವಂತಾಗಲಿದೆ. ಉಪ್ಪು ನೀರಿನ ಪ್ರದೇಶದಲ್ಲಿಯೂ ಬದಲಾವಣೆ ಕಂಡು ಬಂದಿದೆ. ಗ್ರಾಮ ಪಂಚಾಯತ್‌ನ ವಿದ್ಯುತ್ ಪಂಪ್‌ಗ್ಳು ಹಾಗೂ ವಿಶ್ವಬ್ಯಾಂಕ್‌ನ ಪಂಪ್‌ಗ್ಳಲ್ಲಿ ನೀರಿನ ಅಭಾವ ಕಾಡದು ಎಂದು ಪಂಚಾಯತ್ ಹೇಳಿಕೊಂಡಿದೆ.
ಇತರ ಗ್ರಾ.ಪಂ. ಅನುಸರಿಸಲಿ:
ಅನೇಕ ಗ್ರಾ.ಪಂ.ಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದರೂ ಸಹ ಅದರ ನಿರ್ವಹಣೆಗೆ ಹೆಚ್ಚಾಗಿ ಯಾರೂ ಸ್ಪಂದಿಸುವುದಿಲ್ಲ, ಪಂಚಾಯತ್‌ನ ಸದಸ್ಯರು ತೋಕೂರಿನ ಸೇವಾ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾರ್ಗದರ್ಶನ ನೀಡಿದ್ದರಿಂದ ಅಣೆಕಟ್ಟುಗಳನ್ನು ಸುರಕ್ಷಿತವಾಗಿಟ್ಟಲ್ಲಿ ಗ್ರಾಮಕ್ಕೇ ಫಲ ಸಿಗುತ್ತದೆ ಎಂಬ ಮಾದರಿ ಕಾರ್ಯ ಇತರ ಗ್ರಾಮ ಪಂಚಾಯತ್‌ಗಳು ಅನುಸರಿಸಲು ಇದೊಂದು ಪ್ರೇರಣೆಯಾಗಿದೆ. – ಲೋಕನಾಥ ಭಂಡಾರಿ, ಕಾರ್ಯದರ್ಶಿ, ಪಡುಪಣಂಬೂರು ಗ್ರಾ.ಪಂ.
-ನರೇಂದ್ರ ಕೆರೆಕಾಡು