ಕಾರವಾರ ಯುವಕನಲ್ಲಿ ನಿಫಾ ಲಕ್ಷಣ ಇಲ್ಲ : 2 ದಿನದೊಳಗೆ ವರದಿ ನಿರೀಕ್ಷೆ: ಜಿಲ್ಲಾಧಿಕಾರಿ
Team Udayavani, Sep 15, 2021, 12:52 AM IST
ಮಂಗಳೂರು: ನಿಫಾ ವೈರಸ್ ತಗಲಿದೆ ಎಂದು ಆತಂಕದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಐಸೊಲೇಶನ್‌ನಲ್ಲಿರುವ ಕಾರವಾರ ಮೂಲದ ಯುವಕನಲ್ಲಿ ನಿಫಾ ವೈರಸ್‌ನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ಮುಂಜಾಗ್ರತಾ ದೃಷ್ಟಿಯಿಂದ ರಕ್ತ, ಮೂಗಿನ ದ್ರವ ಮಾದರಿಯನ್ನು ಪುಣೆಯ ಪ್ರಯೋಗಾಲಕ್ಕೆ ಈಗಾಗಲೇ ಕಳುಹಿಸಲಾಗಿದ್ದು, ಒಂದೆರಡು ದಿನದೊಳಗೆ ವರದಿ ಲಭಿಸಲಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಯುವಕ ಆರೋಗ್ಯದಿಂದ ಇದ್ದು, ಈಗ ಜ್ವರ, ತಲೆನೋವಿನಂತಹ ಯಾವುದೇ ಲಕ್ಷಣಗಳಿಲ್ಲ. ಸ್ಥಳೀಯ ವಾಗಿ ನಡೆಸಲಾದ ಎಲ್ಲ ತಪಾ ಸಣೆಗಳಲ್ಲಿ “ನಾರ್ಮಲ್’ ಎಂದು ವರದಿ ಬಂದಿದೆ. ಆದರೂ ಪುಣೆಯ ವರದಿ ಕೈ ಸೇರುವವರೆಗೆ ಪ್ರತ್ಯೇಕವಾಗಿ ಇರಿಸಲಾಗಿದೆ. ಜತೆಗೆ ಬಂದಿದ್ದವರನ್ನೂ ಐಸೊ ಲೇಶನ್‌ನಲ್ಲಿ ಇರಿಸಲಾಗಿದೆ ಎಂದರು.
ಗೂಗಲ್‌ನಲ್ಲಿ ಜ್ವರದ ಲಕ್ಷಣ ನೋಡಿ ಭಯಪಟ್ಟ ಯುವಕ! :
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ಮಾತನಾಡಿ, “25ರ ಹರೆಯದ ಕಾರವಾರ ಮೂಲದ ಯುವಕ ಸೆ. 8ರಂದು ಗೋವಾದಿಂದ ಬೈಕ್‌ನಲ್ಲಿ ಕಾರವಾರಕ್ಕೆ ಬಂದಿದ್ದು, ಮಳೆಯಲ್ಲಿ ಒದ್ದೆಯಾಗಿದ್ದ. ರಾತ್ರಿ ಸ್ವಲ್ಪ ಜ್ವರ, ತಲೆನೋವು ಇದ್ದು, ಆತಂಕಗೊಂಡು “ಗೂಗಲ್ ಸರ್ಚ್’ ಮಾಡಿದಾಗ, ನಿಫಾ ವೈರಸ್‌ನ ಲಕ್ಷಣಗಳೇ ತನ್ನಲ್ಲಿ ಇದೆ ಎಂದು ಆತಂಕಕ್ಕೆ ಒಳಗಾಗಿದ್ದಾನೆ. ವಿವಿಧ ಆಸ್ಪತ್ರೆಗಳಿಗೆ ತೆರಳಿ ಬಳಿಕ ವೆನ್ಲಾಕ್‌ನಲ್ಲಿ ದಾಖಲಾಗಿದ್ದಾನೆ. ಆತನ ಕೋರಿಕೆಯ ಮೇರೆಗೆ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದರು.