ಮಂಗಳೂರು – ದುಬಾೖ ವಿಮಾನಯಾನ ಆರಂಭ
Team Udayavani, Aug 18, 2021, 1:34 AM IST
ಮಂಗಳೂರು: ಬಹುದಿನಗಳ ಬಳಿಕ ಮಂಗಳೂರಿನಿಂದ ದುಬಾೖಗೆ ವಿಮಾನಯಾನ ಆ. 18ರಿಂದ ಆರಂಭವಾಗಲಿದೆ.
ಬುಧವಾರ ಏರ್‌ಇಂಡಿಯಾ ಎಕ್ಸ್ ಪ್ರಸ್ ವಿಮಾನವು ಮಂಗಳೂರಿನಿಂದ ಕೇರಳದ ತಿರುವನಂತಪುರ ಮೂಲಕ ದುಬಾೖ ತಲುಪಲಿದೆ. ಆ. 20ರಂದು ಮಂಗಳೂರಿನಿಂದ ದುಬಾೖಗೆ ನೇರ ವಿಮಾನ ಆರಂಭಗೊಳ್ಳಲಿದೆ. ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿರುವುದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.
ಭಾರತದ ವಿಮಾನಗಳಿಗೆ ಯುಎಇ ವಿಧಿಸಿದ್ದ ನಿರ್ಬಂಧವನ್ನು ಆ. 5ರಂದು ವಾಪಸ್ ಪಡೆದಿತ್ತು. ಆದರೆ ಭಾರತದಿಂದ ಹೊರಡುವ 48 ಗಂಟೆ ಮೊದಲು ನಡೆಸಿದ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಮತ್ತು 4 ಗಂಟೆ ಮೊದಲು ನಡೆಸಿದ ರ್ಯಾಪಿಡ್ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿದವರು ಮಾತ್ರ ಯುಎಇಗೆ ಬರಬಹುದು ಎಂದು ಷರತ್ತು ವಿಧಿಸಿತ್ತು.
ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆರ್‌ಟಿಪಿಸಿಆರ್ ಪರೀಕ್ಷೆ ವ್ಯವಸ್ಥೆ ಇಲ್ಲದ ಕಾರಣ ಯುಎಇಗೆ ವಿಮಾನ ಯಾನ ಆರಂಭವಾಗಿರಲಿಲ್ಲ. ಇದೀಗ ಅತ್ಯಾಧುನಿಕ ರ್ಯಾಪಿಡ್ ಆರ್‌ಟಿಪಿಸಿಆರ್ ಪರೀಕ್ಷೆ ವ್ಯವಸ್ಥೆಯನ್ನು ವಿಮಾನ ನಿಲ್ದಾಣದಲ್ಲಿ ಆರಂಭಿಸಲಾಗಿದೆ.