ಬೆಳಗ್ಗೆಯೇ ಮಂದಗತಿ; ಮತದಾರರ ನಿರಾಸಕ್ತಿ !

ಬೆಳಗ್ಗಿನಿಂದ ಸಂಜೆವರೆಗಿನ ಮತದಾರರ ನಾಡಿಮಿಡಿತ; ಸುದಿನ ದಿನವಿಡಿ ಸುತ್ತಾಟ

Team Udayavani, Nov 13, 2019, 5:40 AM IST

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ 60 ವಾರ್ಡ್‌ಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆದಿದೆ. ಪಾಲಿಕೆ ಚುನಾವಣೆ ಬಗ್ಗೆ ಸಮಗ್ರ ವರದಿ ಪ್ರಕಟ ಮಾಡುತ್ತ ಬಂದಿರುವ “ಉದಯವಾಣಿ-ಸುದಿನ’ವು ಮತದಾನದ ದಿನವೂ ಬಹಳಷ್ಟು ವಾರ್ಡ್‌ ಗಳಲ್ಲಿ ಸುತ್ತಾಟ ನಡೆಸಿ ಇಡೀ ದಿನದ ಬೆಳವಣಿಗಳನ್ನು ಓದುಗರ ಮುಂದಿಡುವ ಪ್ರಯತ್ನವೇ “ಸುದಿನ ದಿನವಿಡಿ ಸುತ್ತಾಟ’. ಆ ಮೂಲಕ, ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಹಲವೆಡೆ ಸುತ್ತಾಡಿ ಪಾಲಿಕ ೆಯಂತಹ ನಗರಾಡಳಿತ ಚುನಾವಣೆಯಲ್ಲಿ ಮತದಾರರು ಎಷ್ಟೊಂದು ಸಕ್ರಿಯ-ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎನ್ನುವುದನ್ನು ತಿಳಿಯುವ ಜತೆಗೆ ಮತದಾರರ ಆ ಹೊತ್ತಿನ ನಾಡಿಮಿಡಿತ ಅರಿಯುವ ಪ್ರಯತ್ನವಿದು.

ಮತದಾನ: ಬೆಳಗ್ಗೆ 07.00 – 12.00

ಮಹಾನಗರ: ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾದ ವೇಳೆ ನಗರ ವ್ಯಾಪ್ತಿಯ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿಯೂ ಮತದಾರರ ಉತ್ಸಾಹ ಬಹಳ ಕಡಿಮೆಯಿತ್ತು. ಹೀಗಾಗಿ, ಯಾವುದೇ ಮತಗಟ್ಟೆಗಳಲ್ಲಿ ಬೆಳಗ್ಗೆ ಮತದಾರರು ತಮ್ಮ ಹಕ್ಕು ಚಲಾಯಿಸುವುದಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಾಣಿಸಿರಲಿಲ್ಲ.

ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ “ಸುದಿನ ತಂಡ’ ಮೊದಲು ಹೋಗಿದ್ದು ಲೇಡಿಹಿಲ್‌ ಸಂತ ಅಲೋಶಿಯಸ್‌ ಶಾಲೆಗೆ. ಸಾಂಗವಾಗಿ ಮತದಾನ ಆರಂಭವಾದರೂ ಮತದಾರರ ಸಂಖ್ಯೆ ಮಾತ್ರ ಈ ಮತಗಟ್ಟೆಯಲ್ಲಿಯೂ ವಿರಳವಾಗಿತ್ತು. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಇದೇ ಬೂತ್‌ಗೆ ಬೆಳಗ್ಗೆ 7.30ರ ಸುಮಾರಿಗೆ ಆಗಮಿಸಿ ಮತದಾನ ಮಾಡಿದರು. ಅವರೊಂದಿಗೆ ಕೆಲವು ಕಾರ್ಯಕರ್ತರು ಕೂಡ ಇದ್ದರು.

ಬಳಿಕ ಮಣ್ಣಗುಡ್ಡ ಗಾಂಧಿನಗರ ಶಾಲೆಯಲ್ಲಿನ ಮತಗಟ್ಟೆಯತ್ತ ಹೋದಾಗ ಅಲ್ಲಿಯೂ ಬೆಳಗ್ಗಿನ ವೇಳೆ ಮತದಾರರ ಸಂಖ್ಯೆ ಕಡಿಮೆ ಕಂಡುಬಂತು. ಲೋಕಸಭೆ-ವಿಧಾನಸಭಾ ಚುನಾವಣೆ ವೇಳೆ ಕಂಡುಬರುತ್ತಿದ್ದ ಮತದಾರರ ಸರತಿ ಸಾಲು ಇಲ್ಲಿ ಕಾಣಿಸಿರಲಿಲ್ಲ.

ಕಳೆದ ಕೆಲವು ಮತದಾನದ ಸಂದರ್ಭಕ್ಕೆ ಹೋಲಿಸಿದರೆ, ಈ ದಿನ ತಾಂತ್ರಿಕ ದೋಷ ಅಥವಾ ಮತಯಂತ್ರದ ಲೋಪದಿಂದಾಗಿ ಎಲ್ಲಿಯೂ ಮತದಾನ ಪ್ರಕ್ರಿಯೆ ವಿಳಂಬವಾಗಿ ಶುರುವಾದ ಘಟನೆ ಗಮನಕ್ಕೆ ಬರಲಿಲ್ಲ. ಅದರಂತೆ, ಮಣ್ಣಗುಡ್ಡ ಶಾಲೆಯ ಬೂತ್‌ನಲ್ಲಿಯೂ ಅಂಥ ಯಾವುದೇ ಸಮಸ್ಯೆ ಬೆಳಗ್ಗೆ ಆಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದರು. ಶಾಸಕ ವೇದವ್ಯಾಸ ಕಾಮತ್‌ ಅವರು ಇದೇ ಬೂತ್‌ನಲ್ಲಿ ಬೆಳಗ್ಗೆ ಸುಮಾರು 8.30ರ ವೇಳೆಗೆ ಬಂದು ಇದೇ ಬೂತ್‌ನಲ್ಲಿ ಮತದಾನ ಮಾಡಿದರು.

ಬಂದರ್‌ನ ಉರ್ದು ಶಾಲೆಯ ಮತಗಟ್ಟೆಗೆ ಹೋದಾಗ ಅಲ್ಲಿ ಮತದಾರರ ಸರತಿ ಸಾಲು ಕಂಡುಬಂತು. ಆದರೆ ಲೋಕಸಭೆ-ವಿ.ಸಭಾ ಚುನಾವಣೆ ಸಂದರ್ಭ ಇದ್ದ ಮತದಾರರ ಉತ್ಸಾಹ ಕಂಡುಬರಲಿಲ್ಲ. ಈ ಬಗ್ಗೆ ಮತದಾನ ಮಾಡಿ ವಾಪಾಸಾಗುತ್ತಿದ್ದ ಹಿರಿಯ ರೊಬ್ಬರನ್ನು ಮಾತನಾಡಿಸಿದಾಗ “ಮತದಾನ ಎಲ್ಲರೂ ಮಾಡಬೇಕು. ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಮತದಾನವೇ ಮಾಡದೆ ಬಾಕಿ ಉಳಿದರೆ ಗೆದ್ದ ಅಭ್ಯರ್ಥಿಗಳನ್ನು ಪ್ರಶ್ನಿಸುವ ನೈತಿಕತೆ ನಮಗೆ ಉಳಿಯುವುದಿಲ್ಲ’ ಎಂದರು.

ಮತದಾರರ ಸಂಖ್ಯೆ ವಿರಳ
ಬೆಳಗ್ಗೆ 9ರ ಸುಮಾರಿಗೆ ಬೆಸೆಂಟ್‌ ಮತಗಟ್ಟೆಗೆ ಭೇಟಿ ನೀಡಿದಾಗಲೂ, ಮತದಾರರ ಸಂಖ್ಯೆ ಅಲ್ಲಿಯೂ ತುಂಬ ವಿರಳವಾಗಿತ್ತು. ಹಾಗಾಗಿ ಮತಗಟ್ಟೆಯ ಅಧಿಕಾರಿಗಳು ಕೊಂಚ ನಿರಾಳವಾಗಿದ್ದ ಹಾಗೆ ಕಾಣಿಸಿತು. ಈ ಬಗ್ಗೆ ಪೊಲೀಸ್‌ ಅಧಿಕಾರಿ ಯವರಲ್ಲಿ ವಿಚಾರಿ ಸಿದಾಗ “ಇಲ್ಲಿ 4 ಬೂತ್‌ಗಳು ಮಾತ್ರ ಇದೆ. ವಿಧಾನಸಭಾ ಚುನಾವಣೆ ವೇಳೆ 8 ಬೂತ್‌ಗಳಿತ್ತು. ಹಾಗಾಗಿ, ಆಗ ಮತದಾರರ ಸಂಖ್ಯೆ ಸ್ವಲ್ಪ ಜಾಸ್ತಿ ಕಾಣಿಸಿರಬಹುದು’ ಎಂದರು.

ಉತ್ಸಾಹದಿಂದ ಪಾಲ್ಗೊಂಡ ಮತದಾರರು
ಕಂಕನಾಡಿಯ ಕಪಿತಾನಿಯೋ ಶಾಲೆಗೆ ಭೇಟಿ ನೀಡಿದಾಗ ಮತದಾನದ ಸ್ಪಷ್ಟ ಚಿತ್ರಣ ಇಲ್ಲಿ ಕಂಡುಬಂತು. ಮತದಾರರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡ ದೃಶ್ಯ ಇಲ್ಲಿಯೂ ಗಮನಸೆಳೆಯಿತು. ಇಲ್ಲಿ ಹಿರಿಯ ಮಹಿಳೆಯೊಬ್ಬರ ಜತೆಗೆ ಮಾತನಾಡಿದಾಗ “ಪ್ರತೀ ವರ್ಷ ಮತ ಹಾಕಲು ನಾನು ತಪ್ಪಿಸುವುದಿಲ್ಲ. ಇದು ನನ್ನ ದೊಡ್ಡ ಜವಾಬ್ದಾರಿ ಎಂದು ಅರಿತು ಕರ್ತವ್ಯ ನಿರ್ವಹಿಸುತ್ತೇನೆ’ ಎಂದರು.

ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದಾಗ ಸುಮಾರು 11 ಗಂಟೆಯಾಗಿತ್ತು. ಆದರೆ, ಆ ವೇಳೆಗೂ ಆ ಮತಗಟ್ಟೆಯಲ್ಲಿ ಮತದಾನ ಮಂದಗತಿಯಲ್ಲಿ ನಡೆಯುತ್ತಿತ್ತು. ಮತಗಟ್ಟೆಯ ಹೊರ ಭಾಗದಲ್ಲಿದ್ದ ಪಕ್ಷಗಳ ಬೂತ್‌ನಲ್ಲಿ ಮಾತ್ರ ನೂರಾರು ಜನರು ಸೇರಿದ್ದರು. ಅಂದರೆ, ಮತದಾರರಿಗಿಂತ ಜಾಸ್ತಿ ಪಕ್ಷದ ಕಾರ್ಯಕರ್ತರೇ ಇದ್ದರು ಎನ್ನುವುದು ವಿಶೇಷ. ಆ ಮೂಲಕ, ಕಾದು ಕುಳಿತಿದ್ದ ಬೂತ್‌ ಕಾರ್ಯಕರ್ತರು ಮತದಾರರನ್ನು ಸೆಳೆಯಲು ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದರು.

ಎದುರೆದುರು ನಿಂತು ಮತ ಕೇಳಿದ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳು!
ಕಂಕನಾಡಿಯ ಕಪಿತಾನಿಯೋ ಶಾಲೆಯಲ್ಲಿ ಮತದಾರರ ಸಂಖ್ಯೆ ಅಧಿಕವಾಗಿತ್ತು. ಬೆಳಗ್ಗೆ 7ರಿಂದಲೂ ಮತದಾರರ ಸಂಖ್ಯೆ ಇಲ್ಲಿ ಗರಿಷ್ಠ ಪ್ರಮಾಣದಲ್ಲಿತ್ತು. ಇದೇ ಕಾರಣದಿಂದ ಇಲ್ಲಿ ಸ್ಪರ್ಧಾ ಕಣದಲ್ಲಿದ್ದ ಕಾಂಗ್ರೆಸ್‌ನ ನಿಕಟಪೂರ್ವ ಕಾರ್ಪೊರೇಟರ್‌ ಪ್ರವೀಣ್‌ಚಂದ್ರ ಆಳ್ವ, ಬಿಜೆಪಿಯ ನಿಕಟಪೂರ್ವ ಕಾರ್ಪೊರೇಟರ್‌ ವಿಜಯ್‌ ಕುಮಾರ್‌ ಶೆಟ್ಟಿ ಅವರು ಮತಗಟ್ಟೆಯ ಹೊರಭಾಗದ ರಸ್ತೆ ಬದಿಯಲ್ಲಿ ಎದುರೆದುರು ನಿಂತು ಮತದಾರರ ಸೆಳೆಯಲು ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದ ದೃಶ್ಯ ಗಮನಸೆಳೆಯಿತು. ಕಾಂಗ್ರೆಸ್‌-ಬಿಜೆಪಿಯ ಕಾರ್ಯಕರ್ತರು ಕೂಡ ಇದೇ ವೇಳೆ ನೆರೆದಿದ್ದರು. ಎರಡೂ ಅಭ್ಯರ್ಥಿಗಳು ಶಾಲೆಯ ಅಂಗಣ ಪ್ರವೇಶಕ್ಕೂ ಮುನ್ನ ಮತದಾರರಿಗೆ ಕೈ ನೀಡಿ ಮತ ನೀಡಿ ಆಶೀರ್ವದಿಸುವಂತೆ ಯಾಚಿಸಿದರು. ಇದರಿಂದ ಬಿಗುವಿನ ಪರಿಸ್ಥಿತಿಯೂ ನಿರ್ಮಾಣಗೊಂಡಿತ್ತು. ಹೀಗಾಗಿ ಪೊಲೀಸ್‌ ಭದ್ರತೆ ಇಲ್ಲಿ ಬಿಗಿ ಯಾಗಿತ್ತು. ಕಾರ್ಯಕರ್ತರನ್ನು ದೂರಕ್ಕೆ ಹೋಗುವಂತೆ ಪೊಲೀಸರು ವಿನಂತಿಸಿದರೂ ಪ್ರಯೋಜನ ವಾಗಲಿಲ್ಲ. ಪರಿಣಾ ಮವಾಗಿ ರಸ್ತೆ ಸಂಚಾರಕ್ಕೂ ಇಲ್ಲಿ ಕೊಂಚ ಅಡೆತಡೆಯಾಯಿತು. ಯಾವುದೇ ಅಹಿತಕರ ಘಟನೆ ಇಲ್ಲಿ ನಡೆಯಲಿಲ್ಲ.

ವಿವಿ ಪ್ಯಾಟ್‌ ಯಾಕಿಲ್ಲ?
ಈ ಬಾರಿಯ ಮತದಾನ ಕೇಂದ್ರದಲ್ಲಿ ಎಲೆಕ್ಟ್ರಾನಿಕ್‌ ಮತ ಯಂತ್ರ (ಇವಿಯಂ) ಮಾತ್ರ ಬಳಕೆ ಮಾಡಲಾಗಿದೆ. ವಿವಿ ಪ್ಯಾಟ್‌ ಇರಲಿಲ್ಲ. ಈ ಬಗ್ಗೆ ಚುನಾವಣ ಆಯೋಗ ಮಾಹಿತಿ ನೀಡಿದ್ದರೂ ಎಲ್ಲ ಮತದಾರರರಿಗೆ ಇದು ಗಮನಕ್ಕೆ ಬಂದಿಲ್ಲ. ಹೀಗಾಗಿ ಕೆಲವು ವಾರ್ಡ್‌ಗಳಲ್ಲಿ ಮತದಾರರು ವಿವಿ ಪ್ಯಾಟ್‌ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದರು. ಪಡೀಲ್‌ನಲ್ಲಿದ್ದ ಶಾಲೆಯಲ್ಲಿ ಮತದಾನ ಮಾಡಿದ ಕೇಶವ ಅವರು ಈ ಬಗ್ಗೆ ಅಧಿಕಾರಿಗಳು, ಪೊಲೀಸರಲ್ಲಿ ಹಲವು ಬಾರಿ ವಿಚಾರಿಸಿದ್ದಾರೆ. ಸುದಿನದ ಜತೆಗೂ ಮಾತನಾಡಿದ ಅವರು “ಈ ಬಾರಿ ವಿವಿ ಪ್ಯಾಟ್‌ ಯಾಕಿಲ್ಲ’ ಎಂದು ಮತ್ತೆ ಪ್ರಶ್ನಿಸಿದರು. ಈ ಬಗ್ಗೆ ಸುದಿನ ತಂಡದಿಂದ ಅವರಿಗೆ ಮಾಹಿತಿ ನೀಡಲಾಯಿತು.

- ದಿನೇಶ್‌ ಇರಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ನಗರದಲ್ಲಿ ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ಶೇ.2ರಷ್ಟು ಭೂ ಸಾರಿಗೆ ಉಪ ಕರ (ಸೆಸ್‌) ವಸೂಲಿ ಮಾಡುವ ಬಿಬಿಎಂಪಿ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದ...

  • ಬೆಂಗಳೂರು: ನೆರೆ ಸಂತ್ರಸ್ತರು ತ್ವರಿತವಾಗಿ ಎರಡನೇ ಕಂತಿನ ಹಣವನ್ನು ಪಡೆದು ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌...

  • ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾದ ಚರ್ಚೆ ಗರಿಗೆದರುತ್ತಿದ್ದು, ಸಚಿವಾಕಾಂಕ್ಷಿಗಳಲ್ಲಿ...

  • ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಶೇ.49 ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು...

  • ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮುಂಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. 2006ಕ್ಕಿಂತ...