
ಪೊಲೀಸರಿಗೆ ಸವಾಲಾದ ನಗದು ಪತ್ತೆ ಪ್ರಕರಣಗಳು: ಕರಾವಳಿಯ ಹವಾಲಾ ಜಾಲಕ್ಕೆ ಮಂಗಳೂರೇ ಕೇಂದ್ರ?
Team Udayavani, Jan 26, 2023, 7:45 AM IST

ಮಂಗಳೂರು: ಮಂಗಳೂರು ನಗರವನ್ನು ಕೇಂದ್ರೀಕರಿಸಿ ಹವಾಲಾ ಹಣ ಸಾಗಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ.
ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್‌ಗಳ ಮೂಲಕ ವರ್ಗಾಯಿಸುವ ಬದಲು ಸಂಬಂಧಿಸಿದವರಿಗೆ ನೇರವಾಗಿ ತಲುಪಿಸುವುದನ್ನು “ಹವಾಲಾ’ ಎಂದು ಕರೆಯಲಾಗುತ್ತದೆ. ಈ ರೀತಿ ಕೋಟ್ಯಂತರ ರೂಪಾಯಿ ಹಣ ನಗರದಲ್ಲಿ ಕೈ ಬದಲಾಗುತ್ತಿರುವ ಶಂಕೆ ಪೊಲೀಸರಲ್ಲಿ ಬಲವಾಗಿದೆ. ಇಂತಹ ಹಣ ದೇಶದ್ರೋಹಿ ಕೃತ್ಯ ಅಥವಾ ಇತರ ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಹೈ ಅಲರ್ಟ್‌ಗೆ ಪೊಲೀಸರು ಮುಂದಾಗಿದ್ದಾರೆ.
ವ್ಯವಸ್ಥಿತ ಏಜೆಂಟ್‌ಗಳ ತಂಡ
ಏಜೆಂಟ್‌ಗಳ ವ್ಯವಸ್ಥಿತ ಜಾಲವೊಂದು ಹವಾಲಾ ಹಣ ಸಾಗಾಟ, ವ್ಯವಹಾರ ನಡೆಸಿರುವ ಮಾಹಿತಿ ಎರಡು ವರ್ಷಗಳ ಹಿಂದೆಯೇ ಪೊಲೀಸರಿಗೆ ಲಭಿಸಿತ್ತು. ಮಾತ್ರವಲ್ಲದೆ ಮಧ್ಯಪ್ರಾಚ್ಯ ರಾಷ್ಟ್ರದಿಂದಲೂ ಮಂಗಳೂರಿಗೆ ಹಣ ರವಾನೆಯಾಗಿ ಅದನ್ನು ವಿವಿಧೆಡೆ ಸಾಗಾಟ ಮಾಡಲು ವ್ಯವಸ್ಥಿತ ಜಾಲ ರಚಿಸಿದ್ದು ಬೆಳಕಿಗೆ ಬಂದಿತ್ತು. ಕಳೆದ ನವೆಂಬರ್‌ನಲ್ಲಿ ಮಂಗಳೂರಿನ ಪಂಪ್‌ವೆಲ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳ ಕಂತೆ ದಾರಿಹೋಕರಿಗೆ ಸಿಕ್ಕಿತ್ತು. ಅದರ ವಾರಸುದಾರರು ಯಾರೆಂಬುದು ಇನ್ನೂ ಬೆಳಕಿಗೆ ಬಂದಿಲ್ಲ. ಕಳೆದ ರವಿವಾರ ನಗರದ ನೆಲ್ಲಿಕಾಯಿ ರಸ್ತೆ ಬಳಿ ಹಳೆಯ ಕಟ್ಟಡವೊಂದರ ಸಮೀಪ ಕಳ್ಳನೊಬ್ಬ ನೆಲದಲ್ಲಿ ಸುಮಾರು 8.50 ಲ.ರೂ. ನಗದು ಹುದುಗಿಸಿಟ್ಟದ್ದು ಬೆಳಕಿಗೆ ಬಂದಿತ್ತು. ಈ ಹಣ ಓರ್ವರು ಹೂವಿನ ವ್ಯಾಪಾರಿಗೆ ಸೇರಿದ್ದು ಅವರು ಹೂವಿನ ರೈತರಿಗೆ ನೀಡುವುದಕ್ಕಾಗಿ ತಮ್ಮ ಅಂಗಡಿಯಲ್ಲಿ ಇಟ್ಟಕೊಂಡಿದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಎಲ್ಲ ಪ್ರಕರಣಗಳು ಕೂಡ ತಾರ್ಕಿಕ ಅಂತ್ಯ ಕಂಡಿಲ್ಲ.
ನಡೆದಿತ್ತು ದರೋಡೆ ನಾಟಕ !
ನಗದು ಹಣ ಪತ್ತೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೊಲೀಸರು ಈ ಹಿಂದೆ ನಗರದಲ್ಲಿ ಹವಾಲಾ ಏಜೆಂಟರ್‌ಗಳು ನಡೆಸಿದ್ದ “ದರೋಡೆ ಪ್ರಕರಣ’ದ ಬಗ್ಗೆಯೂ ಗಮನ ಹರಿಸಿದ್ದರು . 2021ರ ಮಾರ್ಚ್‌ನಲ್ಲಿ ಪೊಲೀಸರು ಹವಾಲಾ ಹಣ ಸಾಗಾಟ ಪ್ರಕರಣವನ್ನು ಭೇದಿಸಿ 5 ಮಂದಿಯನ್ನು ಬಂಧಿಸಿದ್ದರು. ಅದು ಬಹುಕೋಟಿ ಹವಾಲಾ ಜಾಲವಾಗಿತ್ತು. ಮಾತ್ರವಲ್ಲದೆ ಆರೋಪಿಗಳು ಹವಾಲಾ ಏಜೆಂಟರಾಗಿದ್ದು ಅವರು ಹವಾಲಾ ಹಣವನ್ನು ತಲುಪಿಸಬೇಕಾದವರಿಗೆ ತಲುಪಿಸದೆ ದರೋಡೆ ನಾಟಕ ಮಾಡಿದ್ದು ಕೂಡ ಬೆಳಕಿಗೆ ಬಂದಿತ್ತು. ಇದೀಗ ಮತ್ತೆ ಹವಾಲಾ ಜಾಲ ಸಕ್ರಿಯವಾಗಿರುವ ಸಾಧ್ಯತೆ ಬಗ್ಗೆ ಪೊಲೀಸರು ನಿಗಾ ವಹಿಸಿದ್ದಾರೆ.
ಪಂಪ್‌ವೆಲ್ ಬಳಿ ನವೆಂಬರ್‌ನಲ್ಲಿ ಹಣದ ಕಂತೆ ಪತ್ತೆಯಾಗಿತ್ತು. ಅದರಲ್ಲಿ 10 ಲ.ರೂ. ಇತ್ತು ಎನ್ನಲಾಗಿತ್ತು. ಅದರಲ್ಲಿ ಪೊಲೀಸ್ ಸುಪರ್ದಿಗೆ 3.49 ಲ.ರೂ. ಸಿಕ್ಕಿತ್ತು. ಮಂಗಳೂರು ಉತ್ತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳನೋರ್ವ ನೆಲದಡಿ ಹುದುಗಿಸಿಟ್ಟಿದ್ದ ಎನ್ನಲಾದ 8.50 ಲ.ರೂ. ನಗದು ಹಣದ ಪೈಕಿ 5.80 ಲ.ರೂ. ಪೊಲೀಸ್ ಸುಪರ್ದಿಗೆ ಬಂದಿದೆ.
ದೂರು ನೀಡುವುದೇ ವಿರಳ
ಈ ರೀತಿ ದಾಖಲೆ ಇಲ್ಲದೆ, ತೆರಿಗೆ ಪಾವತಿಸದೆ ದೊಡ್ಡ ಮೊತ್ತದ ಹಣ ಸಾಗಿಸುವಾಗ ಒಂದು ವೇಳೆ ಹಣ ಕಳೆದುಕೊಂಡರೆ ಅದರ ಬಗ್ಗೆ ಪೊಲೀಸರಿಗೆ ದೂರು ನೀಡುವುದು ಕಡಿಮೆ. ಸಾಧ್ಯವಾದಷ್ಟು ಅವರ ನೆಟ್‌ವರ್ಕ್‌ನಲ್ಲಿಯೇ ಹುಡುಕಲು ಯತ್ನಿಸುತ್ತಾರೆ. ಹಾಗಾಗಿ ಪ್ರಕರಣ ಬೆಳಕಿಗೆ ಬರುವುದು ಕೂಡ ವಿರಳ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.
ವಿಶೇಷ ನಿಗಾ
ನಗದು ಹಣ ಪತ್ತೆ ಪ್ರಕರಣಗಳನ್ನು ಕೂಡ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ವಿಶೇಷ ನಿಗಾ ಇಡಲಾಗುತ್ತಿದೆ. ವಾರಸುದಾರರು ಇಲ್ಲದ ಹಣ ಪತ್ತೆಯಾದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಇಂತಹ ಹಣ ಅಕ್ರಮ ಸಾಗಾಟವಾಗಿರುತ್ತದೆ. ಯಾವುದೋ ಅಪರಾಧ ಕೃತ್ಯಗಳಿಗೆ ಬಳಕೆಯಾಗು ಸಾಧ್ಯತೆ ಹೆಚಾÌಗಿರುತ್ತದೆ. ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು.
– ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು
ಬಸ್‌ನಲ್ಲಿ ಬರಲಿದ್ದ 1.14 ಕೋ.ರೂ. !
ಮಂಗಳೂರು ನಗರಕ್ಕೆ ಹುಬ್ಬಳ್ಳಿಯಿಂದ ಬಸ್‌ನಲ್ಲಿ ಸಾಗಿಸುವುದಕ್ಕಾಗಿ ತರಲಾಗುತ್ತಿದ್ದ 1.14 ಕೋ.ರೂ. ನಗದನ್ನು ಹುಬ್ಬಳ್ಳಿ ಉಪನಗರ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ. ರಿತಿಕ್ ಎಂಬಾತ ಸೂಕ್ತ ದಾಖಲೆ ಇಲ್ಲದೆ ಈ ಹಣ ಸಾಗಿಸುತ್ತಿದ್ದ. ಚಿನ್ನದ ವ್ಯವಹಾರಕ್ಕಾಗಿ ಇದನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು ಪೊಲೀಸರು ಮತ್ತು ಐಟಿ ವಿಭಾಗದವರು ತನಿಖೆ ಮುಂದುವರೆಸಿದ್ದಾರೆ. ಈತ ನಗದಿನೊಂದಿಗೆ ಬಸ್ ಹತ್ತುವ ಮೊದಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
