ಮೆಸ್ಕಾಂ ಬಿಲ್‌ ಪಾವತಿ ಯಂತ್ರಗಳಿಗೆ ಕನ್ನ!

ಖದೀಮರ ಗಮನ ಎಟಿಪಿ ಕಡೆಗೆ

Team Udayavani, Jan 21, 2020, 7:04 AM IST

ಸಾಂದರ್ಭಿಕ ಚಿತ್ರ

ಮಂಗಳೂರು: ಬ್ಯಾಂಕ್‌ ಎಟಿಎಂಗಳಿಗೆ ಲಗ್ಗೆ ಇಡುತ್ತಿದ್ದ ಕಳ್ಳರು ಈಗ ಬಿಲ್‌ ಪಾವತಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಎಟಿಪಿ (ಎನಿ ಟೈಮ್‌ ಪೇಮೆಂಟ್‌) ಯಂತ್ರಗಳಿಗೆ ಕನ್ನ ಹಾಕಲಾರಂಭಿಸಿದ್ದಾರೆ. ಮೆಸ್ಕಾಂನ ಎಟಿಪಿ ಯಂತ್ರಗಳಿಂದ ಲಕ್ಷಾಂತರ ರೂ. ದೋಚಿರುವ ಪ್ರಕರಣಗಳು ಒಂದೆರಡು ವಾರಗಳಲ್ಲಿ ನಡೆದಿವೆ. ಕೆಲವು ಎಟಿಪಿ ಕೇಂದ್ರಗಳಲ್ಲಿ ಸಿ.ಸಿ. ಕೆಮರಾ, ಅಲಾರಂ ವ್ಯವಸ್ಥೆ, ಸೆಕ್ಯುರಿಟಿ ಗಾರ್ಡ್‌ ಮತ್ತಿತರ ಅಗತ್ಯ ಸುರಕ್ಷಾ ವ್ಯವಸ್ಥೆಗಳು ಇಲ್ಲ. ಕಳ್ಳರು ಇದರ ದುರ್ಲಾಭ ಪಡೆಯುತ್ತಿದ್ದಾರೆ. ಮೆಸ್ಕಾಂನ ಉಳ್ಳಾಲ ಮತ್ತು ಕೋಟೆಕಾರ್‌ನ ಎಟಿಪಿ ಕೌಂಟರ್‌ಗಳಿಗೆ ಜ. 10ರ ರಾತ್ರಿ ಕಳ್ಳರು ನುಗ್ಗಿ ನಗದು ದೋಚಿದ್ದಾರೆ.

ಲಕ್ಷಾಂತರ ರೂ. ಕಳ್ಳರ ಪಾಲು
ಉಳ್ಳಾಲದ ಚೆಂಬುಗುಡ್ಡೆಯಲ್ಲಿರುವ ಮೆಸ್ಕಾಂ ಉಪ ವಿಭಾಗ ಕಚೇರಿಯ ಎಪಿಟಿಯಿಂದ 77 ಸಾವಿರ ರೂ. ಮತ್ತು ಅಲ್ಲಿಂದ 4 ಕಿ.ಮೀ. ದೂರದಲ್ಲಿರುವ ಕೋಟೆಕಾರ್‌ ಮೆಸ್ಕಾಂ ಕಚೇರಿಯ ಎಟಿಪಿ ಕೇಂದ್ರದಿಂದ 60 ಸಾವಿರ ರೂ. ನಗದು ಕಳವಾಗಿದೆ. ಕೋಟೆಕಾರ್‌ ಎಟಿಪಿ ಯಂತ್ರದಿಂದ 9 ತಿಂಗಳ ಹಿಂದೆ, 2019ರ ಎ. 8ರ ರಾತ್ರಿ 1.93 ಲಕ್ಷ ರೂ. ಕಳವು ಮಾಡಲಾಗಿತ್ತು. ಈ ಮೂರೂ ಕೃತ್ಯಗಳನ್ನು ಒಂದೇ ತಂಡ ನಡೆಸಿರಬಹುದೆಂದು ಉಳ್ಳಾಲ ಪೊಲೀಸರು ಶಂಕಿಸಿದ್ದಾರೆ.

ಸುರಕ್ಷೆಯಿಲ್ಲ
ಈ ಎರಡೂ ಎಟಿಪಿ ಕೇಂದ್ರಗಳಲ್ಲಿ ಸಿಸಿ ಕೆಮರಾಗಳಿಲ್ಲ. ಯಂತ್ರ ಇರುವ ಕೊಠಡಿಯ ಶಟರ್‌ ಬೀಗ ಮುರಿದು ಒಳನುಗ್ಗಿ ನಗದು ಅಪಹರಿಸಿದ್ದಾರೆ. ಜ.10ರ ಸಂಜೆ ಈ ಎರಡೂ ಎಟಿಪಿಗಳಲ್ಲಿದ್ದ ನಗದನ್ನು ಸಿಬಂದಿ ತೆಗೆದಿದ್ದರು, ಆ ಬಳಿಕ ಜಮೆಯಾದ ಹಣ ಕಳ್ಳರ ಪಾಲಾಗಿದೆ.

9 ತಿಂಗಳ ಹಿಂದೆ ಕೋಟೆಕಾರ್‌ ಕೇಂದ್ರದಲ್ಲಿ ಕಳವು ನಡೆದ ಬಳಿಕ ತನ್ನ ಎಲ್ಲ ಎಟಿಪಿ ಕೌಂಟರ್‌ಗಳಿಗೆ ಸಿಸಿ ಕೆಮರಾ ಅಳವಡಿಸುವಂತೆ ಮೆಸ್ಕಾಂ ನೋಟಿಸ್‌ ನೀಡಿತ್ತು. ಉಳ್ಳಾಲ ಮೆಸ್ಕಾಂ ಕಚೇರಿಯ ಎಟಿಪಿ ಕೌಂಟರ್‌ಗೆ ಸಿಸಿ ಕೆಮರಾ ಜೋಡಿಸುವ ಕಾರ್ಯ ಅಂತಿಮ ಹಂತದಲ್ಲಿತ್ತು. ಅದಾಗುವ ಮುನ್ನವೇ ಕಳ್ಳರು ಕೈಚಳಕ ಪ್ರದರ್ಶಿಸಿದ್ದಾರೆ. ಕೋಟೆಕಾರ್‌ ಮೆಸ್ಕಾಂ ಕಚೇರಿ ಮತ್ತು ಎಟಿಪಿ ಕೌಂಟರ್‌ ಬಾಡಿಗೆ ಕಟ್ಟಡದಲ್ಲಿದ್ದು, ಸಿಸಿ ಕೆಮರಾ ಅಳವಡಿಸಿಲ್ಲ. ಅಲ್ಲಿ ಅಲರಾಂ, ಸೆಕ್ಯುರಿಟಿ ಗಾರ್ಡ್‌ ಇಲ್ಲ.

60 ಎಟಿಪಿ ಕೇಂದ್ರ
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮೆಸ್ಕಾಂ ವಿದ್ಯುತ್‌ ಬಿಲ್‌ ಮೊತ್ತ ಸಂಗ್ರಹಿಸಲು ಒಟ್ಟು 60 ಎಟಿಪಿ ಕೌಂಟರ್‌ಗಳನ್ನು ಹೊಂದಿದೆ. ಎಟಿಪಿ ಯಂತ್ರ ಅಳವಡಿಸಿ ಬಿಲ್‌ ಮೊತ್ತ ಸಂಗ್ರಹಿಸಿ ಮೆಸ್ಕಾಂಗೆ ತಲುಪಿಸುವ ಟೆಂಡರನ್ನು ಐಡಿಯಾ ಇನ್‌ಫಿನಿಟಿ ಐಟಿ ಸೊಲ್ಯೂಶನ್ಸ್‌ ವಹಿಸಿಕೊಂಡಿದೆ.

ಎಟಿಪಿ ಕೇಂದ್ರದ ನಿರ್ವಹಣೆಯ ಜವಾಬ್ದಾರಿ ಈ ಖಾಸಗಿ ಸಂಸ್ಥೆಯದ್ದು. ಭದ್ರತೆಯನ್ನು ಕೂಡ ಅದೇ ನಿರ್ವಹಿಸಬೇಕು. ಪ್ರತಿ ದಿನ ಸಂಗ್ರಹವಾಗುವ ಮೊತ್ತವನ್ನು ಸಂಜೆ ಮೆಸ್ಕಾಂ ಕಚೇರಿಗೆ ತಲುಪಿಸಬೇಕಾಗುತ್ತದೆ. ಕಳವು ನಡೆದರೆ ಅದರ ಹೊಣೆಯೂ ಗುತ್ತಿಗೆದಾರ ಸಂಸ್ಥೆಯದೇ.

ಸಿಸಿ ಕೆಮರಾ ಮತ್ತು ಅಲರಾಂ ಸಿಸ್ಟಮ್‌ ನಿರ್ಮಾಣ ಹಂತದಲ್ಲಿಯೇ ಜೋಡಿಸಿದ (ಇನ್‌ಬಿಲ್ಟ್) ಆಧುನಿಕ ಎಟಿಪಿ ಯಂತ್ರಗಳು ಇತ್ತೀಚೆಗೆ ಮಾರುಕಟ್ಟೆಗೆ ಬಂದಿದ್ದು, ಅವನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಎಲ್ಲೆಲ್ಲಿ ಅಳವಡಿಸಲಾಗಿದೆ ಎನ್ನುವ ಮಾಹಿತಿ ಇಲ್ಲ ಎಂದು ಮೆಸ್ಕಾಂ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಮೆಸ್ಕಾಂ ಎಟಿಪಿಗಳಿಂದ ಹಣ ಕಳವು ಆಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಸಿಸಿ ಕೆಮರಾ ಮತ್ತು ಅಲಾರಂ ಸಿಸ್ಟಂ ಅಳವಡಿಸುವಂತೆ ಈಗಾಗಲೇ ಗುತ್ತಿಗೆದಾರ ಸಂಸ್ಥೆಗೆ ಸೂಚಿಸಲಾಗಿದೆ. ಈಗ ಮತ್ತೆ ಈ ಬಗ್ಗೆ ನೋಟಿಸ್‌ ನೀಡಲಾಗುವುದು.
– ಮಂಜಪ್ಪ, ಸೂಪರಿಂಟೆಂಡೆಂಟ್‌ ಎಂಜಿನಿಯರ್‌, ಮೆಸ್ಕಾಂ

– ಹಿಲರಿ ಕ್ರಾಸ್ತಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ