ಮೋಹಿತ್‌ಗೆ ಇನ್ನೂ ಸಿಕ್ಕಿಲ್ಲ ಸ್ವಂತ ಸೂರು,ಉದ್ಯೋಗ

ಜೋಡುಪಾಲ ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ

Team Udayavani, May 14, 2019, 6:00 AM IST

ಸುಳ್ಯ: ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ದುರಂತದಲ್ಲಿ ಮನೆ, ಹೆತ್ತವರು, ಸಹೋದರಿಯನ್ನು ಕಳೆದುಕೊಂಡಿರುವ ಜೋಡುಪಾಲದ ಮೋಹಿತ್‌ಗೆ ಸರಕಾರದ ಸ್ವಂತ ಸೂರು, ಉದ್ಯೋಗ ಇನ್ನೂ ಸಿಕ್ಕಿಲ್ಲ. ಹಲವು ತಿಂಗಳುಗಳಿಂದ ಅವರು ಎರಡೂ ಆಸರೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ಮಳೆಗಾಲಕ್ಕೆ ಮೊದಲು ಸಿಗುವುದು ಅನುಮಾನ.

ಚಿಕ್ಕಪ್ಪನ ಬಾಡಿಗೆ ಮನೆಯೇ ಆಧಾರ
ಜಲ ಪ್ರವಾಹದಲ್ಲಿ ಮೋಹಿತ್‌ನ ಜೋಡುಪಾಲದ ಮನೆ ಸಂಪೂರ್ಣ ನೆಲಸಮವಾದ ಕಾರಣ ಅಲ್ಲಿ ಮತ್ತೆ ವಾಸ್ತವ್ಯ ಅಸಾಧ್ಯವಾಗಿತ್ತು. ಹೀಗಾಗಿ ಸುಳ್ಯದಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಚಿಕ್ಕಪ್ಪ ಉಮೇಶ್‌ ಅವರ ಬಾಡಿಗೆ ಕೊಠಡಿಯಲ್ಲಿ ದಿನ ದೂಡುತ್ತಿದ್ದಾರೆ. ಮನೆ ಬಾಡಿಗೆಯಾಗಿ ಸರಕಾರದಿಂದ ಸಿಗುತ್ತಿರುವ 10 ಸಾವಿರ ರೂ. ಅವನ ಜೀವನಕ್ಕೆ ಏಕೈಕ ಆಧಾರ.

ಪುನರ್ವಸತಿ ಮನೆ ಸಿಕ್ಕಿಲ್ಲ
ಸಂತ್ರಸ್ತ ಕುಟುಂಬಗಳಿಗೆ ಮನೆ ಒದಗಿಸಲು ಸರಕಾರ ನಿವೇಶನ ಗುರುತಿಸಿದೆ. ಮೋಹಿತ್‌ಗೆ ಮದೆ ಬಳಿ ಮನೆ, ನಿವೇಶನ ಒದಗಿಸುವುದಾಗಿ ತಿಳಿಸಲಾಗಿದ್ದು, ಒಪ್ಪಿಗೆ ಆಗಿದೆ. ಐದು ತಿಂಗಳ ಹಿಂದೆ ಸ್ಥಳಕ್ಕೆ ಭೇಟಿ ಕೊಟ್ಟಾಗ ಎರಡು ತಿಂಗಳಲ್ಲಿ ಮನೆ ಪೂರ್ಣವಾಗುವ ಭರವಸೆ ಕೊಟ್ಟಿದ್ದರು. ಆದರೆ ಇದುವರೆಗೂ ಆಗಿಲ್ಲ. ಸ್ಥಿತಿಗತಿಯ ಬಗ್ಗೆಯೂ ಮಾಹಿತಿ ಇಲ್ಲ. ಒಂದು ತಿಂಗಳಲ್ಲಿ ಮಳೆ ಮತ್ತೆ ಬರಲಿದೆ. ಮನೆ ಬೇಗ ಕೊಟ್ಟಿದ್ದರೆ ಉಳಿದುಕೊಳ್ಳಬಹುದಿತ್ತು ಅನ್ನುತ್ತಾರೆ ಮೋಹಿತ್‌.

ತಂದೆಯ ಉದ್ಯೋಗವೂ ಸಿಕ್ಕಿಲ್ಲ
ತಿಪಟೂರಿನಲ್ಲಿ ಸೆಲ್ಕೊ ಸೋಲಾರ್‌ ಕಂಪೆನಿಯ ಉದ್ಯೋಗಿಯಾಗಿದ್ದ ಮೋಹಿತ್‌ ದುರಂತದ ಬಳಿಕ ಆ ಕೆಲಸ ತ್ಯಜಿಸಿದ್ದಾರೆ. ತಂದೆ ಬಸಪ್ಪ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ “ಡಿ’ ಗ್ರೂಪ್‌ ನೌಕರರಾಗಿದ್ದರು. ಮೋಹಿತ್‌ಗೆ ಅನುಕಂಪ ಆಧಾರದಲ್ಲಿ ಆ ಉದ್ಯೋಗ ಕೊಡಿಸುವ ಆಶ್ವಾಸನೆ ನೀಡಲಾಗಿತ್ತು. ಬೇಕಾದ ದಾಖಲೆ ಪತ್ರಗಳನ್ನು ಸಲ್ಲಿಸಲಾಗಿದ್ದರೂ ಅದಿನ್ನೂ ಪ್ರಕ್ರಿಯೆ ಹಂತದಲ್ಲಿದೆ.

ದಾಖಲೆ ಪತ್ರ ಕಳೆದುಹೋಗಿತ್ತು
ಮನೆಯೇ ಕೊಚ್ಚಿ ಹೋಗಿ ದಾಖಲೆಗಳು ಕಳೆದು ಹೋಗಿದ್ದವು. ಕಚೇರಿ ಸುತ್ತಾಡಿ ಎಲ್ಲ ದಾಖಲೆ ಪತ್ರ ಮಾಡಿಸಿ ಉದ್ಯೋಗಕ್ಕಾಗಿ ಸಲ್ಲಿಸಲಾಗಿದೆ. ಮಳೆಗಾಲಕ್ಕೆ ಮುನ್ನ ಮನೆ, ಉದ್ಯೋಗದ ಶಾಶ್ವತ ವ್ಯವಸ್ಥೆ ಆಗಬೇಕು ಎನ್ನುತ್ತಾರೆ ಮೋಹಿತ್‌.

ಬಾಡಿಗೆ ಮನೆಯತ್ತ ಜನರ ಚಿತ್ತ
ಕೊಡಗಿನಲ್ಲಿ ಈ ಬಾರಿಯೂ ಭಾರೀ ಮಳೆ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ಭೌಗೋಳಿಕ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷದ ಜಲ ಪ್ರಳಯದಿಂದ ತತ್ತರಿಸಿರುವ ಸಂತ್ರಸ್ತರಿಗೆ ಮನೆ ನಿರ್ಮಾಣ, ಪುನರ್ವಸತಿ ಕಾಮಗಾರಿ ಪೂರ್ಣಗೊಳ್ಳದಿರುವ ಕಾರಣ ಸಂತ್ರಸ್ತ ಪ್ರದೇಶದ ನಿವಾಸಿಗಳು ಹಾಗೂ ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳು ಸುರಕ್ಷಿತ ಸ್ಥಳದತ್ತ ಪಯಣಿಸುತ್ತಿದ್ದಾರೆ.

ಕೊಡಗಿನ 48 ಗ್ರಾಮಗಳು ಸಂಕಷ್ಟಕ್ಕೆ ಈಡಾಗಿದ್ದವು. 850 ಕುಟುಂಬಗಳು ಮನೆ ಕಳೆದುಕೊಂಡಿದ್ದವು. 20 ಜನರು ಬಲಿಯಾಗಿ 3,500ಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದರು. 52 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. 10 ಸಾವಿರ ಕೋ.ರೂ. ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು.

ಓರ್ವನನ್ನು ಬಿಟ್ಟು ಉಳಿದವರೆಲ್ಲ ಬಲಿ
2018 ಆ. 17ರಂದು ಜೋಡುಪಾಲದಲ್ಲಿ ಸಂಭವಿಸಿದ ಭೀಕರ ಜಲಸ್ಫೋಟದಲ್ಲಿ ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾಗಿದ್ದರು. ಮೋಹಿತ್‌ ತಿಪಟೂರಿನಲ್ಲಿದ್ದ ಕಾರಣ ಪಾರಾಗಿದ್ದರು. ಮೋಹಿತ್‌ ತಂದೆ ಬಸಪ್ಪ, ತಾಯಿ ಗೌರಮ್ಮ, ಸಹೋದರಿ ಮೋನಿಶಾ ಮತ್ತು ಸಂಬಂಧಿ ಮಂಜುಳಾ ಬಲಿಯಾಗಿದ್ದು, ಬಸಪ್ಪ ಮತ್ತು ಮೋನಿಶಾ ಶವ ಆ. 18 ಮತ್ತು 19ರಂದು ತೋಡಿನಲ್ಲಿ ಪತ್ತೆಯಾಗಿತ್ತು. ತಾಯಿ ಗೌರಮ್ಮ ಮೃತದೇಹ ವಾರದ ಬಳಿಕ ಸಿಕ್ಕಿತ್ತು. ಮಂಜುಳಾ ಮೃತದೇಹ ಸಿಗದ ಕಾರಣ ಪ್ರತಿರೂಪಕ್ಕೆ ಅಂತ್ಯಸಂಸ್ಕಾರ ಮಾಡಲಾಗಿತ್ತು.

ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಮನೆ ನಿರ್ಮಾಣ ಪ್ರಗತಿಯಲ್ಲಿದೆ. ಮೋಹಿತ್‌ಗೆ ಮನೆ ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಪೂರ್ಣಗೊಂಡ ತತ್‌ಕ್ಷಣವೇ ಹಸ್ತಾಂತರಿಸಲಾಗುವುದು.
– ನಟೇಶ, ತಹಶೀಲ್ದಾರ್‌, ಮಡಿಕೇರಿ

ಮನೆ ಬೇಗ ಸಿಗಲಿ
ಅಪ್ಪನ ಸರಕಾರಿ ಕೆಲಸ ಸಿಗಲು ಬೇಕಾದ ಅಗತ್ಯ ದಾಖಲೆಪತ್ರ ಸಲ್ಲಿಸಿದ್ದೇನೆ. ಮನೆ ನೀಡುವುದಾಗಿ ಜಿಲ್ಲಾಡಳಿತ ಸ್ಥಳ ತೋರಿಸಿದೆ. ಇವೆರಡೂ ಸಿಗಬೇಕಷ್ಟೆ. ಈ ಮಳೆಗಾಲದ ಮೊದಲು ಸಿಗಬೇಕು ಅನ್ನುವುದು ನನ್ನ ಮನವಿ.
-ಮೋಹಿತ್‌ ಜೋಡುಪಾಲ

– ಕಿರಣ್‌ ಪ್ರಸಾದ್‌ ಕುಂಡಡ್ಕ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ