
2019ರಂತೆ ಈ ಬಾರಿಯೂ ಮುಂಗಾರು ವಿಳಂಬ
Team Udayavani, Jun 5, 2023, 9:58 AM IST

ಮಂಗಳೂರು: ಸಮುದ್ರದಲ್ಲಿ ಪೂರಕ ವಾತಾವರಣ ನಿರ್ಮಾಣವಾಗದೆ ಈ ಬಾರಿ ಮುಂಗಾರು ಆಗಮನ ವಿಳಂಬವಾಗಿದೆ. ಇನ್ನೊಂದೆಡೆ ಬೇಸಗೆ ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಬಿಸಿಲ ಝಳವೂ ಹೆಚ್ಚಾಗಿ ತತ್ತರಿಸುವಂತಾಗಿದೆ. 2019ರಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು.
ಭಾರತೀಯ ಹವಾಮಾನ ಇಲಾಖೆ ಈ ಬಾರಿ ಜೂ. 4ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ತಿಳಿಸಿತ್ತು. ಆದರೆ ಸದ್ಯದ ಪರಿಸ್ಥಿತಿ ಪ್ರಕಾರ ಮತ್ತೂ 4-5 ದಿನ ತಡವಾಗುವ ಸಾಧ್ಯತೆ ಇದೆ. ಬಹುತೇಕ ನಾಲ್ಕು ವರ್ಷದ ಬಳಿಕ ಮುಂಗಾರು ಆಗಮನ ಮತ್ತೆ ವಿಳಂಬವಾಗುತ್ತಿದೆ.
2019ರಲ್ಲಿ ಒಂದು ವಾರ ತಡವಾಗಿ ಅಂದರೆ ಜೂ. 8ರಂದು ಮುಂಗಾರು ಮಾರುತ ಕೇರಳ ಕರಾವಳಿ ಪ್ರವೇಶಿಸಿತ್ತು. ಇದರಿಂದಾಗಿ ದೇಶದ ವಿವಿಧೆಡೆ ಮಳೆ ತಲುಪುವಲ್ಲಿಯೂ ವಿಳಂಬವಾಗಿತ್ತು. ಕೇರಳ ಪ್ರವೇಶಿಸುವ ಮುಂಗಾರು ಸಾಮಾನ್ಯವಾಗಿ ಒಂದು ಆಥವಾ ಎರಡು ದಿನದಲ್ಲಿ ರಾಜ್ಯ ಕರಾವಳಿಗೆ ತಲುಪುವುದು ವಾಡಿಕೆ. ಆದರೆ ಕೇರಳಕ್ಕೆ ಪ್ರವೇಶಿಸುತ್ತಿದ್ದಂತೆ ಅರಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿ ಕರಾವಳಿ ಕರ್ನಾಟಕಕ್ಕೆ ಪ್ರವೇಶಿಸಬೇಕಿದ್ದ ಮುಂಗಾರಿಗೆ ತಡೆಯಾಯಿತು. ಇದರಿಂದ ಆರು ದಿನ ವಿಳಂಬವಾಗಿ ಅಂದರೆ ಜೂ. 14ರಂದು ಕರಾವಳಿಗೆ ಪ್ರವೇಶ ಮಾಡಿತ್ತು.
ಪಶ್ಚಿಮದಿಂದ ಪ್ರತೀ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವಿಕೆ, ಗಾಳಿಯ ಚಲನೆ, ಕಡಲಿನಲ್ಲಿ ಅಬ್ಬರ ಹೆಚ್ಚಾಗುವುದು ಮತ್ತು 48 ಗಂಟೆಗಳ ನಿರಂತರ ಮಳೆ ಸುರಿಯುವಿಕೆ ಮೊದಲಾದ ಲಕ್ಷಣಗಳನ್ನು ಅವಲೋಕಿಸಿ ಹವಾಮಾನ ಇಲಾಖೆ ಮುಂಗಾರಿನ ಆಗಮನವನ್ನು ಘೋಷಿಸುತ್ತದೆ.
ಪ್ರತೀ ವರ್ಷದಂತೆ ಈ ಬಾರಿಯೂ ನಿಗದಿಯಂತೆ ಮೇ 19ರಂದೇ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ನಾನ್‌ಕ್ವಾರಿ ದ್ವೀಪ ಸಮೂಹದ ದಕ್ಷಿಣ ಭಾಗದಿಂದ ಮುಂಗಾರು ಮಾರುತಗಳ ಚಲನೆ ಆರಂಭವಾಗಿತ್ತು. ಬಳಿಕ 10 ದಿನ ಮುಂಗಾರು ಅದೇ ಪ್ರದೇಶದಲ್ಲಿ ಸ್ಥಗಿತಗೊಂಡಿತ್ತು.
ಜೂ. 8ರ ಬಳಿಕ ಕರಾವಳಿಗೆ ಮುಂಗಾರು ಪ್ರವೇಶ ಸಾಧ್ಯತೆ :
ಮಂಗಳೂರು: ಕಳೆದ ಕೆಲ ವರ್ಷಗಳ ಬಳಿಕ 2023ರಲ್ಲಿ ರಾಜ್ಯ ಕರಾವಳಿ ಭಾಗಕ್ಕೆ ಮುಂಗಾರು ತೀರಾ ವಿಳಂಬವಾಗಿ ಆಗಮಿಸುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಸದ್ಯದ ಮಾಹಿತಿಯಂತೆ ರಾಜ್ಯ ಕರಾವಳಿಗೆ ಜೂನ್ 8ರ ಬಳಿಕ ಮುಂಗಾರು ಪ್ರವೇಶ ಪಡೆಯಲಿದೆ.
ಕಳೆದ ವರ್ಷ ಮೇ 29ಕ್ಕೆ ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸಿದ ಎರಡರಿಂದ ಮೂರು ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ಆದರೆ ಸದ್ಯ ಆ ರೀತಿಯ ವಾತಾವರಣ ಇಲ್ಲ. ಇನ್ನು 4-5 ದಿನಗಳ ಒಳಗಾಗಿ ಕೇರಳ ಕರಾವಳಿ ಭಾಗಕ್ಕೆ ಮುಂಗಾರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಬಳಿಕ ಎರಡರಿಂದ ಮೂರು ದಿನಗಳ ಒಳಗೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಉತ್ತಮ ಮಳೆ ಸುರಿಯಬಹುದು.
ಭಾರತೀಯ ಹವಾಮಾನ ಇಲಾಖೆ ಅಧಿಕಾರಿ ಪ್ರಸಾದ್ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಮುಂಗಾರು ಘೋಷಣೆ ಮಾಡಲು ಕೆಲವೊಂದು ನಿಬಂಧನೆಗಳಿವೆ. ಅದರಂತೆ ಕೇರಳ, ಲಕ್ಷದ್ವೀಪ ಮತ್ತು ಮಂಗಳೂರು ಸೇರಿದಂತೆ 14 ಕಡೆಗಳಲ್ಲಿ ಶೇ. 60ರಷ್ಟು ಮಳೆಯಾಗಬೇಕು. ಆದರೆ ಸದ್ಯ ಶೇ. 35ರಷ್ಟು ಮಾತ್ರ ಮಳೆ ಸುರಿದಿದೆ. ಅದರಲ್ಲೂ 9 ಕಡೆಗಳಲ್ಲಿ ಎರಡು ದಿನಗಳ ಕಾಲ ನಿರಂತರ 2.5 ಸೆಂ.ಮೀ.ಗಿಂತಲೂ ಅಧಿಕ ಮಳೆಯಾಗಬೇಕು. ಆದರೆ ಸದ್ಯ ಆ ನಿಬಂಧನೆ ಪೂರ್ತಿಯಾಗಿಲ್ಲ ಇದೇ ಕಾರಣಕ್ಕೆ ಮುಂಗಾರು
ಘೋಷಣೆ ಮಾಡಲು ಸಾಧ್ಯವಿಲ್ಲ. ಸದ್ಯದ ಮಾಹಿತಿಯಂತೆ ಜೂ. 8ರ ಬಳಿಕ ರಾಜ್ಯ ಕರಾವಳಿಗೆ ಮುಂಗಾರು ಅಪ್ಪಳಿಸಬಹುದು ಎಂದು ನಿರೀಕ್ಷಿಸಲಾಗಿದೆ’ ಎನ್ನುತ್ತಾರೆ.
ಸೆಕೆ ಹೆಚ್ಚಳ ಸಾಧ್ಯತೆ :
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯ ಕರಾವಳಿ ಭಾಗದಲ್ಲಿ ಈಗಾಗಲೇ ಸೆಕೆಯ ಬೇಗೆ ಹೆಚ್ಚುತ್ತಿದೆ. ವಾಡಿಕೆಗಿಂತ 2ರಿಂದ 3 ಡಿ.ಸೆ. ಉಷ್ಣಾಂಶ ಏರಿಕೆಯಾಗುತ್ತಿದೆ. ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ವಾತಾವರಣ ಇರಲಿದ್ದು, ಸೆಕೆಯ ಬೇಗೆ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಜೂ. 5ರಿಂದ 8ರ ವರೆಗೆ “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ರವಿವಾರ ಬಿಸಿಲಿನ ಬೇಗೆ ಹೆಚ್ಚು ಇತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Protest: ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ

MP Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ