ಮೂಡುಬಿದಿರೆ: ವಿಶ್ವ ಪ್ರವಾಸೋದ್ಯಮ ದಿನಾಚರಣೆ
Team Udayavani, Sep 28, 2020, 11:35 AM IST
ಮೂಡುಬಿದಿರೆ, ಸೆ. 27: ಸಾವಿರ ಕಂಬದ ಬಸದಿಯ ಆವರಣದಲ್ಲಿ ಧವಲ ತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠದ ಜಂಟಿ ಆಶ್ರಯದಲ್ಲಿ ರವಿವಾರ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಭಾರತೀಯ ರಂಗಕಲೆಗಳ ಪ್ರದರ್ಶನ ನಡೆಯಿತು.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ದೀಪ ಬೆಳಗಿಸಿ ಬಸದಿಯ ಭೈರಾದೇವಿ ಮಂಟಪದಲ್ಲಿ ವೈವಿಧ್ಯಮಯ ನೃತ್ಯಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾವಿರ ಕಂಬದ ಬಸದಿಯ ಸಹಿತ ಮೂಡುಬಿದಿರೆ ಸಹಸ್ರಾರು ವರ್ಷಗಳಿಂದ ಅಧ್ಯಾತ್ಮ ಕೇಂದ್ರವಾಗಿ ಧಾರ್ಮಿಕ ಶೈಕ್ಷಣಿಕ ಸಾಂಸ್ಕೃತಿಕ ಚಟುವಟಿಕೆ ನಿರಂತರ ಪ್ರೋತ್ಸಾಹ ನೀಡಿದೆ. ಅಹಿಂಸೆ, ವಿಶ್ವಭಾತೃತ್ವ , ರಾಷ್ಟ್ರಪ್ರೇಮ, ಸಹೋದರತೆಯ ಸಂದೇಶ ನೀಡುವ ಇಲ್ಲಿನ ಪ್ರಾಚೀನ ಪರಂಪರೆಯ ತಾಣಗಳಿಗೆ ಸರಕಾರ ವಿಶೇಷ ಒತ್ತು ನೀಡಿ ಪ್ರವಾಸಿಗರಿಗೆ ಮೂಲಸೌಲಭ್ಯ ದೊರೆಯು ವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಮಾಜಿ ಸಚಿವ ಕೆ. ಅಭಯಚಂದ್ರ, ಕೆ.ಪಿ. ಜಗದೀಶ್ ಅಧಿಕಾರಿ, ರಶ್ಮಿತಾ ಯುವರಾಜ್, ಮಕ್ಕಿಮನೆ ಸುದೇಶ್, ಜಯರಾಜ್ ಕಂಬ್ಳಿ, ಬಸದಿಗಳ ಮೊಕ್ತೇಸರ ರಾದ ಪಟ್ಣಶೆಟ್ಟಿ ಸುದೇಶ್‌ಕುಮಾರ್, ಆನಡ್ಕ ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಶ್ವೇತಾ ಜೈನ್ ನಿರೂಪಿಸಿದರು. ಸೌಮ್ಯಾ ವಂದಿಸಿದರು. ಮುಂಜಾನೆಯಿಂದ ಸಂಜೆವರೆಗೆ ನೋಂದಾಯಿಸಿದ ವಿವಿಧ ತಂಡಗಳು ಭರತನಾಟ್ಯ, ಜನಪದ ನೃತ್ಯ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದವು. ಅನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಕೃತಿಕ ತಂಡ ಕಾರ್ಯಕ್ರಮ ನೀಡಿತು. ಕೋವಿಡ್-19 ಕಾರಣ ಆಸಕ್ತರಿಗಾಗಿ ಫೇಸ್‌ಬುಕ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.